ವಿಜಯಪುರ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯಪುರ ಗಾಂಧಿಚೌಕ ಠಾಣೆ ಪೊಲೀಸರು ಕೊನೆಗೂ ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ವಿಜಯಪುರ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ 2001ರ ಮೇ 14 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯಾಗಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಮಂಟೂರಿನ ರಾಜು ಅಲಿಯಾಸ್ ಬಸವರಾಜ ನಾಯ್ಕ್‌ಗೆ 2003ರಲ್ಲಿ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ಶಿಕ್ಷೆಯಾಗಿತ್ತು ಎಂದರು.
ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್, ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ತದ ನಂತರ ಆರೋಪಿಯು ಸುಪ್ರೀಂ ಕೋರ್ಟ್‌ನಲ್ಲಿ ಕೂಡಾ ಮೇಲ್ಮನವಿ ಸಲ್ಲಿಸಿದ್ದನು. ಸೆಷನ್ಸ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಕೂಡ ಆರೋಪಿಯನ್ನು ಬಂಧಿಸಲು ವಾರಂಟ್ ಜಾರಿ ಮಾಡಿತ್ತು ಎಂದು ತಿಳಿಸಿದರು.
ಆರೋಪಿಯು ತನ್ನ ಇರುವಿಕೆಯನ್ನು ಮರೆಮಾಚಿ ತನ್ನ ಕುಟುಂಬದೊಂದಿಗೆ, ಸಂಬಂಧಿಕರೊಂದಿಗೆ ಎಲ್ಲರಿಂದ ಸಂಪರ್ಕವನ್ನು ಕಡಿದುಕೊಂಡು ತಲೆ ಮರೆಸಿಕೊಂಡಿದ್ದನು ಎಂದು ಹೇಳಿದರು.
ಆರೋಪಿಯನ್ನು ಹುಡುಕಲು ಗಾಂಧಿಚೌಕ ಠಾಣೆಯ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಈ ತಂಡವು ಈತನನ್ನು ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪ ರಾಮನಾಳ ಎಂಬ ಗ್ರಾಮದ ಜಮೀನೊಂದರಲ್ಲಿ ಹೆಸರು ಬದಲಾಯಿಸಿಕೊಂಡು ಕೆಲಸ ಮಾಡಿಕೊಂಡಿರುವುದರ ಬಗ್ಗೆ ಮಾಹಿತಿ ಕಲೆ ಹಾಕಿ, ಅಲ್ಲಿಗೆ ಹೋಗಿ ಶಿಕ್ಷಿತ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.