ADVERTISEMENT

ವಿಜಯಪುರ | ತರಕಾರಿ, ಸೊಪ್ಪಿನ ಬೆಲೆ ಏರಿಕೆ

ಶಾಲೆಗಳ ಬಿಸಿಯೂಟಕ್ಕೆ ಸಂಚಕಾರ: ಹೊಟೇಲ್‌ ಮಲೀಕರಿಗೆ ತಟ್ಟಿದ ಬಿಸಿ

ಮಹಾಂತೇಶ ವೀ.ನೂಲಿನವರ
Published 30 ಜೂನ್ 2024, 6:46 IST
Last Updated 30 ಜೂನ್ 2024, 6:46 IST
ನಾಲತವಾಡದ ಸೋಮವಾರ ಸಂತೆ ಯಲ್ಲಿ ಗಗನ ಮುಖಿಯಾದ ತರಕಾರಿಗಳನ್ನು ಮಾರುತ್ತಿರುವ ಮಹಿಳೆ
ನಾಲತವಾಡದ ಸೋಮವಾರ ಸಂತೆ ಯಲ್ಲಿ ಗಗನ ಮುಖಿಯಾದ ತರಕಾರಿಗಳನ್ನು ಮಾರುತ್ತಿರುವ ಮಹಿಳೆ   

ನಾಲತವಾಡ: ತೀವ್ರ ಬರಗಾಲದ ನಂತರದಲ್ಲಿ ಸುರಿದ ಮಳೆಯಿಂದ ತರಕಾರಿಗಳ ಬೆಲೆ ಗಗನಕ್ಕೇರಿವೆ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಟೊಮೆಟೊ ದರ ಕೆ.ಜಿ.ಗೆ ₹ 110ರ ಗಡಿ ದಾಟಿದೆ. ಇದು ಗ್ರಾಹಕರಿಗೆ ಬಿಸಿ ತಟ್ಟಿದರೂ, ಬೆಳೆಗಾರರಿಗೆ ತುಸು ಸಮಾಧಾನ ತಂದಿದೆ.

ಸ್ಥಳೀಯವಾಗಿ ಹೈಬ್ರಿಡ್ ಟೊಮೆಟೊ ಕೆ.ಜಿ.ಗೆ ₹ 90 ರಿಂದ ₹ 120ರವರೆಗೆ ಮಾರಾಟವಾದರೆ. ಚಿಕ್ಕದಾದ ಹುಳಿ ಟೊಮೆಟೊ ₹ 80ರಿಂದ ₹ 95ಕ್ಕೆ ಬಿಕರಿಯಾಗುತ್ತಿದೆ. ಇದು ಬರಿ ಟೊಮೆಟೊ ಕಥೆಯಷ್ಟೇ ಅಲ್ಲ.ಸೌತೆಕಾಯಿ, ಗಜ್ಜರಿ, ಬೀನ್ಸ್, ಹಾಗಲಕಾಯಿ, ದಪ್ಪ ಮೆಣಸಿನಕಾಯಿ, ಬೆಂಡೆಕಾಯಿ, ಹೀರೇಕಾಯಿ, ಹೂಕೋಸು, ಬೀಟ್ರೂಟ್‌ ಎಲ್ಲದರ ಬೆಲೆಯೂ ಕೆ.ಜಿಗೆ ₹ 90 ರಿಂದ ₹ 100ರ ಮೇಲಿದೆ. ಸೊಪ್ಪುಗಳ ಬೆಲೆಯೂ ಒಂದು ಕಟ್ಟಿಗೆ ₹ 15 ರಿಂದ ₹ 30 ಇದೆ. ಸಬ್ಬಸಗಿಯ ಒಂದು ಸೂಡು ₹ 50ಕ್ಕೆ, ಪುಟ್ಟದಾದ ಕೊತಂಬರಿ ಸಿವುಡಿನ ಬೆಲೆ ₹ 70, ಪುಂಡಿ ಪಲ್ಲೆ, ರಾಜಗಿರಿ, ಹುಣಸಿಕಿ, ಕಿರಸಾಲಿ, ಕರಿಬೇವಿನ ಸೊಪ್ಪುಗಳ ಕಟ್ಟಿನ ಬೆಲೆ ₹ 10 ರಿಂದ 15ಕ್ಕೆ ಏರಿಕೆಯಾಗಿದೆ. ನಾಲ್ಕು ನುಗ್ಗೆ ಕಾಯಿಗಳಿಗೆ ₹ 20, ₹120ಕ್ಕೆ ಕಿಲೋ ಹಸಿ ಮೆಣಸಿನಕಾಯಿ, ₹ 50 ರ ಗಡಿಯಲ್ಲಿರುವ ದೊಡ್ಡ ಈರುಳ್ಳಿ, ಇದೆಲ್ಲದರ ನಡುವೆ ಬದನೆಯಕಾಯಿ, ಚೌಳಿಕಾಯಿ ಬೆಲೆ ಸ್ಥಿರತೆಯನ್ನು ಕಾಪಾಡಿಕೊಂಡು ಅಗ್ಗವಾಗಿವೆ.

ಸೋಮವಾರ ಪಟ್ಟಣದ ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ಇತರೆ ತರಕಾರಿಗಳು ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ತರಕಾರಿ ಅವಕ ಕಡಿಮೆಯಾಗಿದ್ದು,ಅತೀವ ಬರಗಾಲದ ನಡುವೆಯೂ ಕಳೆದ ಎರಡು ತಿಂಗಳ ಹಿಂದೆ ಇದ್ದ ತರಕಾರಿ ಬೆಲೆಯಲ್ಲಿ 2 ರಿಂದ 3 ಪಟ್ಟು ಹೆಚ್ಚಳವಾಗಿದೆ.

ADVERTISEMENT

ಕೇವಲ ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಒಂದು ಬಾಕ್ಸ್‌ಗೆ ₹ 100 ರಿಂದ ₹ 130 ಇತ್ತು. ಕೊಯಿಲು ಮಾಡಿದ ಹಣವೂ ಸಿಗದೆ ರೈತರು ಬೆಳೆಯನ್ನು ರಸ್ತೆಗೆ ಸುರಿದಿದ್ದರು. ಈಗ ಬೆಲೆಯಿದೆ, ಬೆಳೆಯಿಲ್ಲ ಎಂಬ ಪರಿಸ್ಥಿತಿ ರೈತರದ್ದಾಗಿದೆ.

‘ಈ ಹಿಂದೆ ಎಷ್ಟು ಪ್ರಮಾಣದಲ್ಲಿ ತರಕಾರಿಗಳನ್ನು ಕೊಳ್ಳುತ್ತಿದ್ದೆವೊ, ಅದೇ ರೀತಿಯಾಗಿ ಈಗಲೂ ಕೊಳ್ಳುತ್ತಿದ್ದೆವೆ,ಕೊಳ್ಳುವಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ’ ಎಂದು ಬಿಸಿಯೂಟದ ಮುಖ್ಯ ಅಡುಗೆಯವ ಸೇವೆಯಲ್ಲಿ ಇರುವ ಸುಲೋಚನಾ ಮಲ್ಲಿಕಾರ್ಜುನ ಸಜ್ಜನ.

ಬೆಲೆ ಏರಿಕೆಯಾದರೂ ಲಾಭ ರೈತರಿಗೆ ಸಿಗುತ್ತಿಲ್ಲ. ಎಲ್ಲಾ ದಲ್ಲಾಳಿಗಳ ಕೈ ಸೇರುತ್ತಿದೆ ಎಂದು ಸಮೀಪದ ಬಿಜ್ಜೂರು ಗ್ರಾಮದ ರೈತ ಶರಣು ಜಗ್ಲರ್‌ ಹೇಳುತ್ತಾರೆ. 

ನಾಲತವಾಡದ ಸೋಮವಾರ ಸಂತೆ ಯಲ್ಲಿ ಗಗನ ಮುಖಿಯಾದ ತರಕಾರಿಗಳನ್ನು ಮಾರುತ್ತಿರುವ ಮಹಿಳೆ
ನಾಲತವಾಡದ ಸೋಮವಾರ ಸಂತೆ ಯಲ್ಲಿ ಗಗನ ಮುಖಿಯಾದ ತರಕಾರಿಗಳನ್ನು ಮಾರುತ್ತಿರುವ ಮಹಿಳೆ

Highlights - ಶಾಲಾ ಮಕ್ಕಳ ಬಿಸಿಯೂಟಕ್ಕೆ ತೊಂದರೆ ಹೊಟೇಲ್‌ ಮಾಲೀಕರಿಗೆ ತಟ್ಟಿದ ಬೆಲೆ ಏರಿಕೆ ಹೊ ಫಸಲು ಬರುವವರೆಗೆ ದರ ದುಬಾರಿ

Quote - ಎಲ್ಲ ರೀತಿಯ ತರಕಾರಿಗಳ ಬೆಲೆ ಹೆಚ್ಚಳದಿಂದ ಏನುಕೊಳ್ಳುವುದು ಏನು ಅಡುಗೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ ನಂದಿನಿ ಕುಂಟೋಜಿ ಗ್ರಾಹಕಿ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.