ವಿಜಯಪುರ: ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ‘ನಮ್ಮ ಶೌಚಾಲಯ -ನಮ್ಮ ಗೌರವ’ ಎಂಬ ಶಿರ್ಷಿಕೆ ಹಾಗೂ ‘ಅಂದದ ಶೌಚಾಲಯ-ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ಮಂಗಳವಾರ(ನ.19)ದಿಂದ ಆರಂಭಗೊಂಡು ಡಿ.12ರ ವರೆಗೆ 22 ದಿನಗಳ ಕಾಲ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಆಂದೋಲನ ಯಶಸ್ವಿಯಾಗಬೇಕು ಎಂದಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ಅಂಗನವಾಡಿಗಳಲ್ಲಿ ಶೌಚಾಲಯದ ಪ್ರಸ್ತುತ ವ್ಯವಸ್ಥೆ ಹಾಗೂ ಪರಿಸರ ಸ್ನೇಹಿ ಶೌಚಾಲಯಗಳ ನಿರ್ಮಾಣ, ಅಂಗನವಾಡಿ, ಶಾಲಾ-ಕಾಲೇಜುಗಳ ಸುತ್ತಮುತ್ತಲೂ 5 ಮೀಟರ್ ದೂರದವರೆಗೆ ಸ್ವಚ್ಛತೆಯನ್ನು ಕಾಪಾಡುವುದು, ಸೇರಿದಂತೆ ಎಲ್ಲ ಕಚೇರಿಗಳಲ್ಲಿಯೂ ಪ್ರತಿದಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.
‘ನಾನು ನನ್ನ ದೇಶ, ನನ್ನ ಗ್ರಾಮ’ ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಮೂಡಿ ನಗರ ಮತ್ತು ಗ್ರಾಮೀಣ ಭಾಗದ ಸ್ವಚ್ಛತೆಗೆ ಬದ್ಧರಾಗೋಣ. ನಮ್ಮ ಕಚೇರಿಯ ಒಳ ಹಾಗೂ ಹೊರ ಆವರಣಗಳನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವು ಆರೋಗ್ಯವಂತರಾಗಿ ಇರಲು ಸಾಧ್ಯ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.
ಒಂದೇ ಜಾಗದಲ್ಲಿ ನೀರು ನಿಲ್ಲದಂತೆ, ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗುವಂತಹ ಯಾವುದೇ ವಸ್ತುಗಳನ್ನು ನಿರಂತರವಾಗಿ ನಾವು ಸ್ವಚ್ಛಗೊಳಿಸಬೇಕು. ಸ್ವಚ್ಛತೆ ಮತ್ತು ಆರೋಗ್ಯ ಕಡೆ ಹೆಚ್ಚಿನ ಆದ್ಯತೆ ಕೊಡಬೇಕು. ಅಲ್ಲದೇ, ನೆರೆಹೊರೆ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಾಲೆ–ಕಾಲೇಜುಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು, ಶೌಚಾಲಯಗಳಿಗೆ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿದ್ದರೆ ತುರ್ತಾಗಿ ದುರಸ್ತಿ ಮಾಡಬೇಕು. ಹೊಸದಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕಾದಲ್ಲಿ ಅನುಮೋದನೆಗಾಗಿ ಕ್ರಿಯಾಯೋಜನೆಯನ್ನು ಸಲ್ಲಿಸಿ ಕೂಡಲೇ ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಕುಂಬಾರ, ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಎಸ್.ಎಂ. ದೇಸಾಯಿ, ಜಿಲ್ಲಾ ಪಂಚಾಯಿತಿ ಎಸ್‍ಬಿಎಂ ಸಮಾಲೋಚಕರು ಉಪಸ್ಥಿತರಿದ್ದರು.
ಶೌಚಾಲಯವಿಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಸಹಾಯಧನದಿಂದ ಶೌಚಾಲಯ ಕಟ್ಟಿಸಿಕೊಳ್ಳಬೇಕು. ಮನೆಯ ಸುತ್ತ-ಮುತ್ತ ನೈರ್ಮಲ್ಯ ಇಟ್ಟುಕೊಳ್ಳಬೇಕುರಿಷಿ ಆನಂದ್ ಸಿಇಒ ಜಿ.ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.