ವಿಜಯಪುರ: ಬಿಸಿಲಿನ ಧಗೆಯ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಎಲ್ಲೂ ಚುನಾವಣೆಯ ಕಾವು ಕಾಣಿಸುವುದಿಲ್ಲ. ಆದರೆ, ಒಳಗೊಳಗೇ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನದ ಕುದಿ ಇದೆ.
ಮೋದಿ ಮುಖ ನೋಡಿ, ಸಂಸದ ರಮೇಶ ಜಿಗಜಿಣಗಿ ಬಗೆಗಿನ ಅತೃಪ್ತಿಯನ್ನು ಬಿಜೆಪಿಯವರು ಅದುಮಿಟ್ಟುಕೊಂಡಿದ್ದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ತಪ್ಪು ಮಾಡಿತು ಎಂಬ ಆಕ್ರೋಶ ಆ ಪಕ್ಷದ ಬೆಂಬಲಿಗರದು. ಇನ್ನು, ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್‌ನವರು ನಿರೀಕ್ಷಿತ ಮಟ್ಟದಲ್ಲಿ ಪ್ರಚಾರಕ್ಕೆ ನಿಂತಾರೇ ಎಂಬ ಆತಂಕ ಮತ್ತು ಅನುಮಾನ ಜೆಡಿಎಸ್‌ಗೆ.
ಇದನ್ನೂ ಓದಿ:ಕ್ಷೇತ್ರ ನೋಟ: ವಿಜಯಪುರ: ದಲಿತ–ಬಂಜಾರ ‘ಮತ ಸಂಘರ್ಷ’
ಅಸಲಿಗೆ, ಸಂಸದ ರಮೇಶ ಜಿಗಜಿಣಗಿ ಅವರ ಕೆಲಸ ‘ಶೂನ್ಯ’ ಎಂದೇ ಮಾತಿಗಾರಂಭಿಸುವ ಇಲ್ಲಿಯ ಮತದಾರರು, ‘ಮೋದಿ ಮುತ್ತ್ಯಾನ ಹೆಸರು ಹೇಳ್ಕೊಂಡು ಕತ್ತಿ, ನಾಯಿ, ಹಂದೀನೂ ಆರಿಸಿ ಬರೋ ಹಂಗ ಆತು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಯಾರಿಗೂ ಅವರ ಬಗ್ಗೆ ಒಲವು ಇಲ್ಲ.
‘ಮೊದಲ ಸಲ ಬಸನಗೌಡ ಪಾಟೀಲ ಯತ್ನಾಳರ ಅಲೆಯಲ್ಲಿ, ಎರಡನೇ ಸಲ ಮೋದಿ ಅಲೆಯಲ್ಲಿ ಗೆದ್ದು ಬಂದವರಿಗೆ ಈ ಸಲವೂ ಸ್ವಂತಿಕೆಯಿಂದ ಚುನಾವಣೆ ಎದುರಿಸುವ ತಾಕತ್ತು ಇಲ್ಲ’ ಎನ್ನುವ ಬಿಜೆಪಿ ಬೆಂಬಲಿಗರು, ‘ನಮಗ ನಿರ್ವಾಹನೇ ಇಲ್ಲದಂಗ ಆಗೇತಿ’ ಎಂದು ನೋವು ತೋಡಿಕೊಳ್ಳುತ್ತಾರೆ.
‘ಜಿಗಜಿಣಗಿ ಕೆಲಸ ಪೂಜಿ (ಸೊನ್ನೆ). ಮೋದಿ ಮುಖ ನೋಡೋದು ಅನಿವಾರ್ಯ. ಇಲ್ಲೆ ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ರ ಫೈಟ್ ಆಗ್ತಿತ್ತು. ಹಾಕಿಲ್ಲ. ಹಿಂಗಾಗಿ ಬಿಜೆಪಿ ಯವ್ರಿಗೆ ದಾರಿ ಇನ್ನೂ ಸರಳಾತು. ಮನ್ಯಾಗ ಮಕ್ಕೊಂಡ್ರೂ ಜಿಗಜಿಣಗಿ ಗೆದ್ದ ಬರ್ತಾರ’ ಎನ್ನುತ್ತಾರೆ ಶಾಸಕ ದೇವಾನಂದ ಕ್ಷೇತ್ರವಾದ ನಾಗಠಾಣದ ತಿಪ್ಪಣ್ಣ ಗಿರಿಸಾಗರ, ಹನುಮಂತ ಹಂಡಿ.
ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಯನ್ನೇ ಮುಂದು ಮಾಡುವ ಅವರು, ಮಹಾಘಟ ಬಂಧನ್ ಬಾಳಿಕೆ ಬರುವಂಥದಲ್ಲ ಎನ್ನುತ್ತಾರೆ. ಸುಭದ್ರ ಸರ್ಕಾರಕ್ಕೆ ಮೋದಿ ನೇತೃತ್ವ ಬೇಕು ಎಂಬುದು ಅವರ ಅನಿಸಿಕೆ. ಸ್ಥಳೀಯ ಸಮಸ್ಯೆಗಳು ಗೌಣವಾಗಿವೆ. ವರ್ತಕರು, ಯುವಕರು, ಹೋಟೆಲ್ ಉದ್ಯಮಿಗಳು, ಟೈಲರ್‌ಗಳು, ಶಿಕ್ಷಕರು, ಪ್ರಾಧ್ಯಾಪಕರಿಗೆ ಮೋದಿಯತ್ತ ಒಲವಿದೆ. ಅಲ್ಪಸಂಖ್ಯಾತರು ಅಭದ್ರತೆಯ ಆತಂಕವನ್ನು ಹೇಳಿಕೊಂಡರೆ, ಕೂಲಿಕಾರ್ಮಿಕರು ಕೆಲಸ ಇಲ್ಲದ ಸ್ಥಿತಿಗೆ ಯಾರು ಕಾರಣ ಹೇಳಿ ಎಂದು ಕೇಳುತ್ತಾರೆ.
ಇನ್ನು ಮೈತ್ರಿ ಪಕ್ಷದ ಅಭ್ಯರ್ಥಿ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣರದು (ಬಂಜಾರಾ) ಹೊಸಮುಖ. ಶಾಸಕ ದೇವಾನಂದ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಬ್ಬರ ಕೆಲಸ ನೋಡುವವರೂ ಇದ್ದಾರೆ. ಸಾಲಮನ್ನಾಕ್ಕೆ ಕೃತಜ್ಞತೆ ಸಲ್ಲಿಸಲು, ಅನ್ನಭಾಗ್ಯ ಯೋಜನೆಯ ಋಣ ತೀರಿಸಲು ಇದೊಂದು ಅವಕಾಶ ಎಂದಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿ ಬೆಂಬಲಕ್ಕೆ ನಿಂತವರು ನಾಗಠಾಣ ಹಾಗೂ ಜಿಗಜಿಣಗಿ ಕ್ಷೇತ್ರವಾದ ಅಥರ್ಗಾದಲ್ಲೂ ಇದ್ದಾರೆ. ತಾಳಿಕೋಟೆ ತಾಲ್ಲೂಕು ಬೊಮ್ಮನ ಳ್ಳಿಯ ವೆಂಕಪ್ಪ ಕೂಡ ಅದನ್ನೇ ಹೇಳುತ್ತಾರೆ; ‘ಕುಮಾರಸ್ವಾಮಿಯೋರು ಸಾಲಮನ್ನಾ ಮಾಡ್ಯಾರ್ರಿ. ರೈತರಿಗೆ ಭಿಡೆ ಇರತೈತಿ’ ಎಂದು.
ಇದನ್ನೂ ಓದಿ: ಲೋಕಸಭಾ ಕ್ಷೇತ್ರ ದರ್ಶನ– ವಿಜಯಪುರ
ಸ್ಥಳೀಯವಾಗಿ ಶಾಸಕ ದೇವಾನಂದ ಅವರ ಕೆಲಸ, ಅವರ ಪತ್ನಿಯ ಕೈ ಹಿಡಿಯುತ್ತವೆ ಎನ್ನುತ್ತಾರೆ ತಾಂಬಾದ ಬಿ.ಎಸ್. ಬ್ಯಾಕೋಡ, ಬಟ್ಟೆ ಅಂಗಡಿ ಮಾಲೀಕರಾದ ಆರ್.ವಿ.ಗುಂಜೆಟ್ಟಿ ಹಾಗೂ ಬಿ.ಎಂ. ಬಾಗಲಕೋಟಿ.
ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾದ ಈ ಕ್ಷೇತ್ರದಲ್ಲಿ, ಸಂಸದರಾದ ಎರಡು ಅವಧಿಯಲ್ಲಿ ಜಿಗಜಿಣಗಿ (ದಲಿತ ಎಡಗೈ) ಅವರು ಜನರಿಗೆ ಮುಖ ತೋರಿಸಿಲ್ಲ. ಕೆಲಸ ಮಾಡಿಲ್ಲ ಎನ್ನುವ ದೂರು ಜಿಲ್ಲೆಯಾದ್ಯಂತ ಇದೆ. ‘ಅವರ ಮಾರಿ ನೋಡಿದ್ರ ವೋಟ್ ಹಾಕಬಾರದರಿ, ಮ್ಯಾಲೆ ಮೋದಿ ಬೇಕು. ಹಿಂಗಾಗಿ ಇಂಥಾವ್ರಿಗೆಲ್ಲ ನಮ್ಮ ಓಟು ಒತ್ತ ಬೇಕಾಗೇತಿ. ಮ್ಯಾಲಾಗಿ ಅವ್ರು ಇಲ್ಲಿಯವರು. ಹಿಂಗಾಗಿ ಫೈಟ್ ಆಗೋದಿಲ್ಲ’ಎನ್ನುತ್ತಾರೆ ಅಥರ್ಗಾದ ಸಂಜೀವಕುಮಾರ ಹಾಗೂ ಬಸವರಾಜ. ಅದೇ ಊರಿನ ಸಂತೋಷ ಮತ್ತು ಬಸವರಾಜ ನಿಂಬಾಳ, ಕಾಂಗ್ರೆಸ್‌ನಿಂದ ದಲಿತ ಬಲಗೈ ಸಮುದಾಯದ ರಾಜು ಅಲಗೂರ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಒಳ್ಳೆ ಫೈಟ್ ಇತ್ತು ಎನ್ನುತ್ತಾರೆ.
ಆದರೆ, ಮುದ್ದೇಬಿಹಾಳದಲ್ಲಿ ‘ಪ್ರಜಾವಾಣಿ’ ಭೇಟಿಯಾದ ಮಹಿಳೆಯರಿಗೆ ಸಂಸದರ ಕೆಲಸ ಬೇಕಿಲ್ಲ. ಇವತ್ತಲ್ಲ ನಾಳೆ ಅದನ್ನು ಯಾರಾದರೂ ಮಾಡಿಯೇ ಮಾಡುತ್ತಾರೆ. ಆದರೆ, ದೇಶದ ಭದ್ರತೆಯಷ್ಟೇ ಈಗ ಮುಖ್ಯ ಎನ್ನುವುದು ಡಾ.ಗೀತಾ ಪಾಟೀಲ, ಗಾಯತ್ರಿ ದೇಶಪಾಂಡೆ, ವಕೀಲೆ ಅನ್ನಪೂರ್ಣಾ, ವಿಜಯಲಕ್ಷ್ಮಿ ಗಡೇದ ಅವರ ಸ್ಪಷ್ಟನುಡಿ.
‘ತರುಣ ಶಕ್ತಿ ಬಿಜೆಪಿ ಪರ. ಆದರೆ ಮೋದಿ ಹೆಸರೊಂದೇ ಹೇಳಿಕೊಂಡು ಬಿಜೆಪಿಯವರು ಮೈಮರೆತರೆ ಕಷ್ಟ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇರುವುದರಿಂದ ಮುಸ್ಲಿಂ ಹಾಗೂ ಬಂಜಾರಾ ಸಮುದಾಯದ ಮತಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ’ ಎನ್ನುತ್ತಾರೆ ಮುದ್ದೇಬಿಹಾಳದ ಬಸವರಾಜ ನಂದಿಕೇಶ್ವರಮಠ ಹಾಗೂ ಸೋಮನಗೌಡ. ಬಟ್ಟೆ ವ್ಯಾಪಾರಿ ವಿಕ್ರಂ ಓಸ್ವಾಲ್ ಅವರದೂ ಅದೇ ಅಭಿಪ್ರಾಯ. ಕಾಂಗ್ರೆಸ್‌ನವರು ಪ್ರಚಾರ ಮಾಡ್ತಿಲ್ಲ. ಮಾಡಿದ್ರೆ ಖಂಡಿತ ಹೊಡೆತ ಆಗುತ್ತದೆ ಎನ್ನುತ್ತಾರೆ ಅವರು.
‘ಇಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಫೈಟ್ ಕೊಡೋ ಚಾನ್ಸೇ ಇಲ್ಲ’ ಎಂಬುದು ದೇವರ ಹಿಪ್ಪರಗಿಯ ಹವಳಪ್ಪ, ಹುಸೇನ್, ಸಂಗಮೇಶ, ಇಬ್ರಾಹಿಂ ಅವರ ಅನಿಸಿಕೆ. ‘ಎಷ್ಟೇ ಆದರೂ ಜಿಗಜಿಣಗಿ ಅವರು ರಾಜ ಕೀಯ ಅನುಭವ ಉಳ್ಳವರು. ಎಲ್ಲಾ ಸಮುದಾ ಯದವರಿಗೂ ಆದ್ಯತೆ ನೀಡುತ್ತಾರೆ. ಇಲ್ಲಿ ಅವರಿಗೆ ಎದುರಾಳೀನೇ ಇಲ್ಲ; ಅವರಾಗೇ ನಿವೃತ್ತಿ ಆದರೆ ಮಾತ್ರ ಬೇರೆಯವರಿಗೆ ಜಾಗ’ ಎಂದರು.
ನಾಗಠಾಣ, ಅಥರ್ಗಾದಲ್ಲಿ ಯುವಕರ ಬಾಯಲ್ಲೆಲ್ಲ ಮೋದಿಯದೊಂದೇ ಹೆಸರು. ಆದರೆ, ಜಿಗಜಿಣಗಿ ಹೆಸರೆತ್ತಿದರೆ ‘ಹೆಸರೆತ್ತಬ್ಯಾಡ್ರಿ’ ಎನ್ನುತ್ತಾರೆ. ‘ವಿಜಯಪುರದಿಂದ ಅರಕೆರೆಗುಡ್ಡದವರೆಗೆ ಗಳಿಕಿ (ಆಸ್ತಿ) ಮಾಡಿಟ್ಟಾನ್ ನೋಡ್ರಿ ಅಷ್ಟ ಅವ್ನ ಸಾಧನೆ’ ಎಂದು ನಾಗಠಾಣದ ವೃದ್ಧರೊಬ್ಬರು ಸಿಟ್ಟುಹೊರಹಾಕಿದರೆ, ‘ಖರೇ ಹೇಳಬೇಕಂದ್ರ ಜೆಡಿಎಸ್ ಅಭ್ಯರ್ಥಿ ಆರಿಸಿ ಬರಬೇಕು; ಆದ್ರ ಆರಿಸಿ ಬರೋದಿಲ್ಲ’ ಎಂದರು ಪಿ.ಬಿ. ಹಳ್ಳಿ, ಬಸವರಾಜ ಖತ್ನಳ್ಳಿ.
ಎಲ್ಲಿ ನೋಡಿದರೂ ರಾಚುವ ಬಿಸಿಲು, ಸಿಡಿಲುಬಡಿದಂತೆ ನಿಂತ ದ್ರಾಕ್ಷಿ ಪಡ, ಒಣಗಿದ ನಿಂಬೆ, ಅಲ್ಲಲ್ಲಿ ಕಿ.ಮೀಗಟ್ಟಲೆ ದೂರದಿಂದ ನೀರು ಎಳೆದು ತಂದು ಪಡಗಳಿಗೆ ಉಣಿಸುವ ಟ್ಯಾಂಕರ್ ಮತ್ತು ಪೈಪುಗಳು, ಮೂರ್ನಾಲ್ಕು ದಿನಕ್ಕೊಮ್ಮೆ ಊರಿಗೆ ಬರುವ ಟ್ಯಾಂಕರ್‌ಗಳ ಮುಂದೆ ಕೊಡಪಾನಗಳ ಸಾಲು... ಇವು ಜಿಲ್ಲೆಯ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ‘ನೀರು ಕೊಟ್ಟ ಮನುಷ್ಯ’ ಎಂದು ಇದ್ದುದರಲ್ಲಿ ಎಂ.ಬಿ. ಪಾಟೀಲರನ್ನು ನೆನೆಯುತ್ತಾರೆ. ಹೀಗಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ದರೆ ಒಳ್ಳೆಯದಿತ್ತು ಎಂಬುದು ಬಹಳಷ್ಟು ಜನರ ಅನಿಸಿಕೆ. ಮೊನ್ನೆಮೊನ್ನೆಯಷ್ಟೇ ಜಿದ್ದಾಜಿದ್ದಿ ಮಾಡಿಕೊಂಡು ಬಂದವರು, ಈಗ ಒಮ್ಮೆಲೇ ಕಾಂಗ್ರೆಸ್ ಪ್ಲಸ್ ಜೆಡಿಎಸ್ ಎಂದರೆ ಅದು ನೆಗಟಿವ್ ಆಗಿ ಕೆಲಸ ಮಾಡೋ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಇಂಡಿಯ ಶಿಕ್ಷಕ ಫಯಾಜ್.
ಹೀಗಾಗಿಯೇ ಕಾಂಗ್ರೆಸ್ ಪ್ರಾಬಲ್ಯವಿರುವ ಬಸವನಬಾಗೇವಾಡಿ, ಇಂಡಿ, ಬಬಲೇಶ್ವರ ಮೂರು ವಿಧಾನಸಭಾಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಗರ ಆಕ್ರೋಶ ಢಾಳಾಗಿಯೇ ಇದೆ.
ಹೊರ್ತಿಯಲ್ಲಿ ಮಟ ಮಟ ಮಧ್ಯಾಹ್ನ, ಬೇವಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದವರು ಯಾರೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಲಿಲ್ಲ. ಆದರೆ, ಅವರು ಹೇಳುವುದು; ಜಿಲ್ಲೆಯ ಪಾಟೀಲತ್ರಯರ ( ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ) ಮೇಲೆ ಮೈತ್ರಿ ಅಭ್ಯರ್ಥಿಯ ಗೆಲುವು ನಿಂತಿದೆ ಎಂದು. ಕಾಂಗ್ರೆಸ್‌ನವರು ಪ್ರಾಮಾಣಿಕವಾಗಿ ಕೈಜೋಡಿಸಿದ್ದೇ ಆದಲ್ಲಿ, ಸುನೀತಾ ಚವ್ಹಾಣ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ಅವರು, ‘ಆದರೆ, ಅವರು ಹಾಗೆ ಕೈಜೋಡಿಸುವುದಿಲ್ಲವಲ್ಲ?’ ಎಂದೂ ಶರಾ ಬರೆಯುತ್ತಾರೆ.
‘ಅವರನ್ನ ಗೆಲ್ಲಿಸಿಕೊಟ್ಟವರ ಕೈ ಹಿಡೀಯೋ ಕೆಲಸ ಮಾಡತಾರ್ರಿ. ಹೊಸಾದೇನೂ ಇಲ್ಲ. ಎಲ್ಲಾ ಹೊಂದಾಣಿಕೆ ರಾಜಕಾರಣ’ ಎಂದು ವಿಶ್ಲೇಷಿಸಿದರು.
ಗೃಹಸಚಿವ ಎಂ.ಬಿ. ಪಾಟೀಲರ ಬಬ ಲೇಶ್ವರ ವಿಧಾನಸಭಾಕ್ಷೇತ್ರದ ಸಾರವಾಡದಲ್ಲಿ ಸಂಜೆ ಭೇಟಿಯಾದ ಏಳೆಂಟು ಕೃಷಿಕರು ಜನರು ‘ಬಬಲೇಶ್ವರ ಕ್ಷೇತ್ರ ಪೂರ ಬಿಜೆಪಿನ ಆಗುತ್ರಿ’ ಎಂದರು. ಹೇಗೆ ಎಂದರೆ, ‘ಊರ್ ಹೆಂಗ್ ಐತೋ ಹಂಗ ಹೋಗೋದ್ರಿ’ ಎಂದು ಮಾತು ತುಂಡರಿಸಿದರು. ‘ಮ್ಯಾಲೆಮ್ಯಾಲೆ ಎಲ್ಲಾರೂ ಕಾಂಗ್ರೆಸ್ ಅಂತಾರ್ರಿ. ಒಳಗೊಳಗ... ಬಿಜೆಪಿ ಕಡೆ ಅದಾರಿ. ಎಲ್ಲಾ ಮೋದಿಹವಾ’ ಎಂದವರು ಬಸನಗೌಡ, ಧರ್ಮು, ಈಶ್ವರ.
ಮಿಣಜಗಿಯ ಪಾನ್‌ಶಾಪ್‌ನಲ್ಲಿ ಮಾತಿಗೆ ಸಿಕ್ಕ ಮಲ್ಲು, ಬಸವರಾಜ, ಶಾಂತು ಅವರು ಹೇಳುವುದೇ ಬೇರೆ. ‘ಯಾರ್ ಹವಾ ಐತಿ ಇಲ್ಲಾ ಅನ್ನೋ ಮಾತು ಈಗಷ್ಟೇರಿ. ಎಲೆಕ್ಷನ್ ಹಿಂದಿನ ಒಂದ್ ಹಗಲು, ಒಂದ್ ರಾತ್ರಿ ಏನೈತಲ್ಲ... ಅದ... ಖರೆ!’ ಎಂದು ಚುನಾವಣಾ ಗಾಳಿಯ ಅಸಲಿಯತ್ತನ್ನು ಬಿಡಿಸಿಟ್ಟರು.
ಜಿಲ್ಲೆಯಲ್ಲಿ ಈಗಷ್ಟೇ ಪ್ರಚಾರ ಚುರುಕು ಪಡೆದಿದೆ. ಅದು ಹಳ್ಳಿಗಳನ್ನು ಮುಟ್ಟುತ್ತದೆಯೋ ಅಥವಾ ಹಳ್ಳಿಯವರು ಕಾದುಕೊಂಡು ಕುಳಿತ ‘ಚೀಟಿ‘ಗಳಲ್ಲಿ ಮುಗಿದು ಹೋಗುತ್ತದೆಯೋ ಗೊತ್ತಿಲ್ಲ.
‘ಎಲ್ಲಾರೂ ಕೂಡಿ ಕಾಂಗ್ರೆಸ್‌ಗೆ ಮಣ್ಣು ಕೊಟ್ರು’
‘ತಾವ ತಾವ ಹೊಂದಾಣಿಕಿ ಮಾಡಕೊಂಡು ಜಿಲ್ಲಾದಾಗ ಕಾಂಗ್ರೆಸ್‌ನ ಅಗ್ಗ ಮಾಡಿದ್ರು. ನಮಗ ಭಾಳ ಅಸಹ್ಯ ಆಗೇತ್ರಿ. ನಮಗ ಮಾರೀನ ಇಲ್ಲದಂಗ ಮಾಡಿದ್ರು. ಪಕ್ಷಕ್ಕ ಮಾನಭಂಗ ಆತು’ ಎಂದು ನೊಂದುಕೊಂಡವರು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸಾರವಾಡದ ಗ್ರಾ.ಪಂ. ಸದಸ್ಯ ಕಲ್ಲಪ್ಪ ಹೂಗಾರ.
‘ಕ್ಷೇತ್ರದಾಗ ಬಾರಾ ಆಣೆ ಕುರುಬರ ವೋಟ್ ಅದಾವ್ರಿ. ಎಲ್ಲಾ ಕಾಂಗ್ರೆಸ್ಸಿಗೇ ಇದ್ದವು. ಈಗ ಅಷ್ಟೂ ವೋಟು ಅನಿವಾರ್ಯ ಆಗಿ ಬಿಜೆಪೀಗ ಹೊಕ್ಕಾವು. ಏನ್ ಮಾಡವ್ರ ಅದಾರ? ಈಗ ಯಾಕಪಾ ಕಾಂಗ್ರೆಸ್ಸು... ಅಂತ’ ಎಂದು ಹೂಗಾರ ಹರಿಹಾಯ್ದರು.
ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿದ್ದಕ್ಕಾಗಿ ತಮ್ಮ ಕ್ಷೇತ್ರದ ಎಂ.ಬಿ.ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಗ್ಗೆ ಮುನಿಸಿಕೊಂಡಿದ್ದ ಅವರು, ‘ಕಾಂಗ್ರೆಸ್ ತನ್ನ ಮ್ಯಾಲ ತಾನ.. ಕಲ್ಲು ಹಾಕ್ಕೊಂತು. ಎಲ್ಲಾರೂ ಕೂಡಿ ಅದಕ್ಕ ಮಣ್ಣು ಕೊಟ್ರು’ ಎಂದು ಹಳಹಳಿಸಿದರು.
ಸಮಸ್ಯೆ ಮರೆಮಾಚಲು ಬಾಲಾಕೋಟ ದಾಳಿ
‘ಮೋದಿ ಅಲೆ; ಹವಾ ಎಂಬುದೆಲ್ಲ ಬರೀ ಬೋಗಸ್. ಅದೇನಿದ್ದರೂ ಬರೀ ಮೀಡಿಯಾದಲ್ಲಿ’ ಎಂದ ಕೊಲ್ಹಾರದ ಕಾರ್ಮಿಕ ಮೈನುದ್ದೀನ್, ‘ಸುಳ್ಳುಗಾರನ ಬಣ್ಣದ ಮಾತು ಬಹಳ ದಿನ ನಡೆಯೋದಿಲ್ಲ’ ಎಂದರು.
‘ಪುಲ್ವಾಮಾ ದಾಳಿ ಆಗಲಿ; ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಆಗಲಿ ಎರಡೂ ಚುನಾವಣೆಗಾಗಿಯೇ ಮಾಡಿದ್ದು. ರೂಪಾಯಿ ಮೌಲ್ಯ ಕುಸಿದಿದ್ದನ್ನು, ದಿನಸಿ ಸಾಮಾನುಗಳ ಬೆಲೆ ಏರಿದ್ದನ್ನು, ನೋಟ್‌ಬಂದಿ ಅವಾಂತರವನ್ನು, ನಿರುದ್ಯೋಗ ಸಮಸ್ಯೆಯನ್ನು ಮರೆಮಾಚಲು ಈ ನಾಟಕ. ಇಂದಲ್ಲ ನಾಳೆ ಸತ್ಯ ತಿಳಿಯುತ್ತದೆ’ ಎಂದರು.
ದೇವರಿಗಾಗಿ ವೋಟ್
ಸಿಂದಗಿಯ ಆಂಜನೇಯ ದೇವಸ್ಥಾನದಲ್ಲಿ ಸಂಜೆಯ ಬೈಠಕ್ ಕುಳಿತಿದ್ದ ನೌಕರರು, ನಿವೃತ್ತರ ಪೈಕಿ ಎಲ್ಲರದೂ ಒಂದೇ ದನಿ; ಅದು ಮೋದಿ! ‘ ಜಿಗಜಿಣಗಿ ಕೆಲಸ ಮಾಡಿಲ್ಲ ಹೌದು. ಆದ್ರ ನಾವು ದೇವರಿಗಾಗಿ ವೋಟ್ ಮಾಡ್ತೀವಿ. ಅವರಿಂದ ಮಕ್ಕಳಿಗೆ ರಾಷ್ಟ್ರೀಯ ಪ್ರಜ್ಞೆ ಬಂದಿದೆ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಎಸ್.ಎಲ್. ಪಾಟೀಲ.
ಗಂಡಾಳಿಗೆ ಖೂನ ಇರ್ತದ್ರಿ..
ಶೇಂಗಾ ಮಿಲ್ಲಿನ ಕೆಲಸಕ್ಕೆ ಹೊರಡಲು ಅಣಿಯಾಗಿ, ನಾಗಠಾಣದ ಬಸ್‌ನಿಲ್ದಾಣದಲ್ಲಿ ನಿಂತಿದ್ದ ಶಾರದಮ್ಮ, ಮಲ್ಲಮ್ಮ, ರೇಖಾ ಅವರನ್ನು ಮಾತನಾಡಿಸಿದರೆ, ‘ಎಲೆಕ್ಷನ್ ಅದೆಲ್ಲ ಗಂಡಾಳಿಗೆ ಖೂನ ಇರ್ತದರಿ. ಅವ್ರಿಗೆ ಏನರ ಒರೆಸ್ತಾರ. ಅವರೆಂಗೆ ಹೇಳ್ತಾರೋ ಹಂಗೇ ಕೇಳೋದುರಿ. ನಮಗ ಏನೂ ಗೊತ್ತಿಲ್ಲರಿ’ ಎಂದರು.
‘ರೊಕ್ಕಕ್ಕ ನಿಂತಾರ ಬಿಡ್ರಿ ಈ ಊರವ್ರು. ದಾರು ಬಾಟಲಿಗೂ ವೋಟ್ ಮಾರಕೊಂತಾರ. ಮನ್ಯಾಗ ಹೆಣ್ಣಮಕ್ಕಳಿಗಂತೂ ಸ್ವಾತಂತ್ರ್ಯನ ಇಲ್ಲ. ಗಣಮಕ್ಕಳ ಯಾರಿಗಿ ಹೇಳ್ತಾರೋ ಅವರಿಗನ... ವೋಟ್ ಹಾಕಬೇಕಂತ ತಾಕೀತ ಮಾಡ್ತಾರ’ ಎಂದು ಬೇಸರಿಸಿದರು ಕಾಲೇಜಿಗೆ ಹೊರಟು ನಿಂತಿದ್ದ ಸುಷ್ಮಿತಾ, ಸೂರಮ್ಮ.
ನೀರಿಗಾಗಿ ಹಾಹಾಕಾರ
ತಾಳಿಕೋಟೆ ತಾಲ್ಲೂಕು ಕಲಕೇರಿಯ ಚಹಾದಂಗಡಿಯಲ್ಲಿ ಕುಳಿತ ಯುವಕರು, ‘ಬಿಜೆಪಿ ಹೆಸರಲ್ಲಿ ಕತ್ತೆ ನಿಂತರೂ ವೋಟು ಹಾಕುತ್ತೇವೆ’ ಎಂದರು. ಇದರಿಂದ ಸಿಟ್ಟಿಗೆದ್ದ ವೃದ್ಧ ಮಸಾಕ್‌ಸಾಬ್ ವಲ್ಲೀಭಾಯಿ, ‘ಮಕ್ಕಳು–ಮರಿ, ಊರು ನೆಟ್ಟಗಿಲ್ಲ. ಕುಡ್ಯಾಕ ನೀರಿಲ್ಲ. ದೇಶ ಉದ್ಧಾರ ಮಾಡಾಕ್ ಹೊಂಟಾರ’ ಎಂದರು. ಆ ಹಿರಿಯರು ನೀರಿನ ಸಮಸ್ಯೆ ಎತ್ತುತ್ತಲೇ, ಮೋದಿ ಎಂದವರು, ದೇಶದ ಭದ್ರತೆಯೇ ಮುಖ್ಯ ಎಂದವರು, ಮೈತ್ರಿ ಪಕ್ಷವ ಟೀಕಿಸಿದವರು ಎಲ್ಲರೂ ಒಟ್ಟಾದರು. ‘ಹೌದ್ರಿ ನೀರಿನ ಸಮಸ್ಯೆ ಭಾಳ್ ಐತ್ರಿ. ಟ್ಯಾಂಕರ್ ನೀರು ಎದಕೂ ಸಾಕಾಗೋದಿಲ್ರಿ. ಇದನ್ನು ಸರಿ ಮಾಡೋರು ಯಾರ್ ಅದಾರಿ?’ ಎಂದು ಪ್ರಶ್ನೆ ಹಾಕಿದರು.
ಇನ್ನಷ್ಟು ವಿಜಯಪುರಕ್ಷೇತ್ರದ ಚುನಾವಣಾ ಸುದ್ದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.