ADVERTISEMENT

ವಿಜಯಪುರ: ಅಪಘಾತವಲ್ಲ, ಹಳೇ ದ್ವೇಷಕ್ಕಾಗಿಯೇ ವಕೀಲ ರವಿ ಕೊಲೆ– ಆರೋಪಿಗಳ ಬಂಧನ

ವಕೀಲಗೆ ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ, ಎರಡು ಕಿ.ಮೀ. ಶವ ಎಳೆದೊಯ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:42 IST
Last Updated 13 ಆಗಸ್ಟ್ 2024, 14:42 IST
<div class="paragraphs"><p>ರವಿ ಮೇಲಿನಮನಿ</p></div>

ರವಿ ಮೇಲಿನಮನಿ

   

ವಿಜಯಪುರ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಕೀಲ ರವಿ ಮೇಲಿನಮನಿ ಎಂಬುವವರಿಗೆ ಆಗಸ್ಟ್‌ 8ರಂದು ಹಿಂಬದಿಯಿಂದ ಕಾರು ಡಿಕ್ಕಿ ಹೊಡೆಸಿ ಕೊಲೈಗೈದು, ಬಳಿಕ ಎರಡು ಕಿ.ಮೀ. ದೂರ ಶವವನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಲೆಯ ಪ್ರಮುಖ ಸೂತ್ರಧಾರ ತುಳಸಿರಾಮ ಹರಿಜನ ಸೇರಿದಂತೆ ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಎಂಬುವವರನ್ನು ಬಂಧಿಸಿರುವುದಾಗಿ ಹೇಳಿದರು.

ADVERTISEMENT

ಹಳೇ ವೈಶಮ್ಯಕ್ಕೆ ಕೊಲೆ ನಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಕೊಲೆಯಾದ ವಕೀಲ ರವಿ ಮೇಲಿನಮನಿ ಮತ್ತು ಆರೋಪಿ ತುಳಸಿರಾಮ ಹರಿಜನ ನಡುವೆ ನಾಲ್ಕೈದು ತಿಂಗಳ ಹಿಂದೆ ಹೊಡೆದಾಟ ನಡೆದಿತ್ತು. ಈ ಸಂದರ್ಭದಲ್ಲಿ ವಕೀಲ ರವಿ ಮೇಲಿನಮನಿ ತುಳಸಿರಾಮಗೆ ಕೊಲೆ ಬೆದರಿಕೆಹಾಕಿದ್ದನು. ಬಂಧಿತ ಇನ್ನೊಬ್ಬ ಆರೋಪಿ ಅಲೆಕ್ಸ್‌ ಗೊಲ್ಲರನ್ನು ವಕೀಲ ಮೇಲಿನಮನಿ ಕಿಡ್ನಾಪ್‌ ಮಾಡಿ, ಹೊಡೆದು, ಕೊಲೆ ಬೆದರಿಕೆ ಹಾಕಿದ್ದನು. ಈ ಸಿಟ್ಟಿಗೆ ಎಲ್ಲರೂ ಸೇರಿಕೊಂಡು ವಕೀಲನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟಿದ್ದಾರೆ ಎಂದು ತಿಳಿಸಿದರು.

ಕೋರ್ಟ್‌ ಕಲಾಪ ಮುಗಿಸಿ ವಕೀಲ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಕೊಲೆ ಮಾಡಲು ಹೊಂಚು ಹಾಕಿ ಕಾಯುತ್ತಿದ್ದ ಆರೋಪಿಗಳು ನಂಬರ್‌ ಪ್ಲೇಟ್‌ ಇಲ್ಲದ ಕಾರಿನ ಮೂಲಕ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಕಾರನ್ನು ನಿಲ್ಲಿಸದೇ ಶವವನ್ನು ಸುಮಾರು ಎರಡು ಕಿ.ಮೀ.ದೂರು ಎಳೆದೊಯ್ದಿದ್ದರು. ಶವ ಕಾರಿನಿಂದ ಬೇರ್ಪಟ್ಟ ಬಳಿಕ ಕಾರಿನೊಂದಿಗೆ ಪರಾರಿಯಾಗಿದ್ದರು.

ಆರೋಪಿಗಳಾದ ಅಲೆಕ್ಸ್, ಷಣ್ಮುಖ ಹಾಗೂ ಸದ್ದಾಂ ಘಟನೆ ನಡೆದಾಗ ಕಾರಿನಲ್ಲಿ ಇದ್ದರು. ಅಲೆಕ್ಸ್ ಎಂಬಾತ ಕಾರನ್ನು ಓಡಿಸುತ್ತಿದ್ದನು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.