ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆಬಾವಿಯೊಳಗೆ ಸಿಲುಕಿದ್ದ 14 ತಿಂಗಳ ಮಗು ಸಾತ್ವಿಕ್‌ನನ್ನು ರಕ್ಷಿಸಿದ ವಿಜಯಪುರ ಜಿಲ್ಲಾಡಳಿತ ಇದೀಗ ಅವಘಡಕ್ಕೆ ಕಾರಣವಾದ ಹೊಲದ ಮಾಲೀಕ, ಮಗುವಿನ ಅಜ್ಜ ಶಂಕರಪ್ಪ ಮುಜಗೊಂಡ (60) ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.
‘ಅನುಮತಿ ಪಡೆಯದೇ ಕೊಳವೆಬಾವಿ ಕೊರೆಸಿದ್ದು ಅಲ್ಲದೇ ಅದನ್ನು ಮುಚ್ಚದೇ ತೆರೆದು ಬಿಟ್ಟಿರುವ ಕಾರಣ ಮಗು ಬಿದ್ದು, ಅವಘಡ ಸಂಭವಿಸಿತು. ಹೀಗಾಗಿ ಹೊಲದ ಮಾಲೀಕ ಮತ್ತು ಕೊಳವೆಬಾವಿ ಕೊರೆದ ಕಂಪನಿ (ಏಜೆನ್ಸಿ) ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವೆ’ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.
‘ಅಕ್ರಮವಾಗಿ ಕೊಳವೆಬಾವಿ ಕೊರೆದರೂ ಗಮನಿಸದೇ ನಿರ್ಲಕ್ಷ್ಯ ವಹಿಸಿದ ಲಚ್ಯಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು’ ಎಂದರು.
‘ಮಗುವನ್ನು ರಕ್ಷಣೆ ಮಾಡಿದ ಜಿಲ್ಲಾಡಳಿತಕ್ಕೆ ಮೊದಲು ಧನ್ಯವಾದ ಹೇಳುತ್ತೇನೆ. ನಮ್ಮ ಸಣ್ಣಪುಟ್ಟ ಅಚಾತುರ್ಯದಿಂದ ಅವಘಡ ಸಂಭವಿಸಿದ್ದು ನಿಜ. ಆದರೆ, ಬಡವರಿದ್ದೇವೆ ಕೇಸ್ ಮಾಡಿದರೆ ಅನ್ಯಾಯವಾಗುತ್ತದೆ’ ಎಂದು ಜಮೀನಿನ ಮಾಲೀಕರಾದ ಮಗುವಿನ ಅಜ್ಜ ಶಂಕರಪ್ಪ ಮುಜಗೊಂಡ ಹೇಳಿದರು.
‘ನಾವು ಸ್ಥಿತಿವಂತರು ಆಗಿದ್ದರೆ, ಹೆದರುತ್ತಿರಲಿಲ್ಲ. ಎರಡು–ಮೂರು ಎಕರೆ ಜಮೀನು ಅಷ್ಟೇ ನಂಬಿದ್ದೇವೆ. ನೀರಿಲ್ಲದ ಕಾರಣಕ್ಕೆ ಬೆಳೆಗಾಗಿ ಕೊಳವೆಬಾವಿ ಕೊರೆಯಿಸಿದೆವು. ನಾವು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ’ ಎಂದರು.
ಕೊಳವೆ ಬಾವಿ ಅವಘಡದಲ್ಲಿ ಮಗುವಿನ ರಕ್ಷಣೆಗೆ 22 ಅಡಿ ಆಳ ತೋಡಿರುವ ಗುಂಡಿಗೆ ಮಣ್ಣನ್ನು ಹಾಕಿ ಸಮತಟ್ಟು ಮಾಡಿಕೊಡುವುದಿಲ್ಲ. ಹೊಲದ ಮಾಲೀಕರೇ ಆ ಕೆಲಸ ಮಾಡಿಕೊಳ್ಳಬೇಕುಟಿ.ಭೂಬಾಲನ್ ಜಿಲ್ಲಾಧಿಕಾರಿ
ನಾವು ಬಡವರು. ಈಗಾಗಲೇ ಕೃಷಿಗಾಗಿ ₹9.5 ಲಕ್ಷ ಸಾಲ ಮಾಡಿದ್ದೇವೆ. ಜಿಲ್ಲಾಡಳಿತವೇ ಗುಂಡಿ ಮುಚ್ಚಿಸಿಕೊಟ್ಟರೆ ಬಡ ಕುಟುಂಬಕ್ಕೆ ಅನುಕೂಲ ಆಗುತ್ತದೆಶಂಕರಪ್ಪ ಮುಜಗೊಂಡ, ಸಾತ್ವಿಕ್ ಅಜ್ಜ
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸಾತ್ವಿಕ್‌ನನ್ನು ದಾಖಲಿಸಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ. ಮಗುವಿಗೆ ಸಿಟಿ ಸ್ಕ್ಯಾನ್ ಎಂಆರ್‌ಐ ಸ್ಕ್ಯಾನ್ ಮಾಡುವುದರ ಜೊತೆಗೆ ಕಿಡ್ನಿ ಲಿವರ್ ಬ್ರೈನ್ ಬೆನ್ನು ಹುರಿ ಸೇರಿ ಇಡೀ ದೇಹವನ್ನೇ ತಜ್ಞ ವೈದ್ಯರು ಪರೀಕ್ಷಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದರು. ‘ಬಾಹ್ಯ ಪ್ರಪಂಚದ ಅರಿವು ಇರದ ಕಾರಣ ಸಾತ್ವಿಕ್ ಅವಘಡದಿಂದ ಹೆದರಿಲ್ಲ ಮತ್ತು ಮಾನಸಿಕವಾಗಿ ಕುಗ್ಗಿಲ್ಲ. ದೇಹದ ಯಾವುದೇ ಭಾಗಕ್ಕೂ ಪೆಟ್ಟು ಗಾಯವಾಗಿಲ್ಲ. 20 ಗಂಟೆ ಕೊಳವೆಬಾವಿಯಲ್ಲಿದ್ದರೂ ಆರೋಗ್ಯದಲ್ಲಿ ಸ್ವಲ್ಪವೂ ವ್ಯತ್ಯಾಸವಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.