ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಗರದ ಸೈನಿಕ ಶಾಲೆಯ ಕೊಠಡಿಗಳಲ್ಲಿ ಮೇ 23ರ ಗುರುವಾರ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.
ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂ ಯಂತ್ರಗಳಲ್ಲಿನ ಮತ ಎಣಿಕೆಗಾಗಿ ತಲಾ 14 ಟೇಬಲ್‌ಗಳನ್ನು ಆಯೋಜಿಸಲಾಗಿದೆ. ಒಟ್ಟು 112 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಬಾರಿ ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆಗಾಗಿಯೇ ಪ್ರತ್ಯೇಕವಾಗಿ ನಾಲ್ಕು ಟೇಬಲ್ ಮಾಡಲಾಗಿದೆ. ಇಲ್ಲಿ 20 ಸಿಬ್ಬಂದಿ ಮತ ಎಣಿಕೆ ನಡೆಸಲಿದ್ದಾರೆ. ಇಟಿಪಿಬಿಎಸ್ ಪೋಸ್ಟಲ್ ಬ್ಯಾಲೆಟ್‌ಗಳ ಮತ ಎಣಿಕೆಗೂ ಪ್ರತ್ಯೇಕ ವ್ಯವಸ್ಥೆಯಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ವಿಧಾನಸಭಾ ಕ್ಷೇತ್ರವಾರು ವಿವಿಧ ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮುದ್ದೇಬಿಹಾಳ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 17 ಸುತ್ತು, ದೇವರಹಿಪ್ಪರಗಿ, ಬಬಲೇಶ್ವರ ಕ್ಷೇತ್ರಗಳಲ್ಲಿ ತಲಾ 18 ಸುತ್ತು, ವಿಜಯಪುರ ನಗರ, ಸಿಂದಗಿ ಕ್ಷೇತ್ರಗಳಲ್ಲಿ ತಲಾ 19 ಸುತ್ತು, ಇಂಡಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 20 ಸುತ್ತು ನಡೆದರೆ, ನಾಗಠಾಣ ಕ್ಷೇತ್ರದ ಮರ ಎಣಿಕೆ 22 ಸುತ್ತು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗುರುವಾರ ಬೆಳಿಗ್ಗೆ 7 ಗಂಟೆಗೆ ಎವಿಎಂ ಯಂತ್ರಗಳಿರುವ ಕೊಠಡಿಗಳ ಬಾಗಿಲು ತೆರೆಯಲಾಗುವುದು. ಈ ವೇಳೆಗೆ ಅಭ್ಯರ್ಥಿಗಳು, ಕೌಂಟಿಂಗ್ ಏಜೆಂಟರು ಹಾಜರಿರಬೇಕು. 8ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಇವಿಎಂ ಮತ ಎಣಿಕೆ ಕಾರ್ಯ ಮುಗಿದ ನಂತರ, ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿ.ವಿ. ಪ್ಯಾಟ್‌ಗಳ ಚೀಟಿಗಳನ್ನು ಏಜೆಂಟರ ಸಮ್ಮುಖದಲ್ಲಿ ಎಣಿಕೆ ಮಾಡಲಾಗುವುದು ಎಂದು ತಿಳಿಸಿದರು.
144 ಮೈಕ್ರೋ ನಿರೀಕ್ಷಕರ ನೇಮಕ
ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು 18 ಜನ ಮತ ಎಣಿಕೆ ಮೇಲ್ವಿಚಾರಕ, 18 ಜನ ಮತ ಎಣಿಕೆ ಸಹಾಯಕ ಹಾಗೂ 18 ಜನ ಮೈಕ್ರೋ ಅಬ್ಸರ್‌ವರ್ ನೇಮಕ ಮಾಡಲಾಗಿದ್ದು, ಒಟ್ಟಾರೆಯಾಗಿ 144 ಮತ ಎಣಿಕೆ ಮೇಲ್ವಿಚಾರಕ, 144 ಮತ ಎಣಿಕೆ ಸಹಾಯಕ ಹಾಗೂ 144 ಮೈಕ್ರೋ ಅಬ್ಸರ್‌ವರ್ ನಿಯೋಜಿಸಲಾಗಿದೆ ಎಂದು ಹೇಳಿದರು.
32 ಜನ ಟ್ಯಾಬುಲೇಷನ್ ಸಿಬ್ಬಂದಿ, 40 ಜನ ಸೀಲಿಂಗ್ ಸಿಬ್ಬಂದಿ, ಇವಿಎಂಗಳನ್ನು ಟೇಬಲ್‌ಗಳಿಗೆ ಸಾಗಿಸಲು 128 ಸಿಬ್ಬಂದಿ ಹಾಗೂ 24 ಜನ ಹಾಜರಾತಿ ಪಡೆಯುವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮೊಬೈಲ್ ನಿಷೇಧ
ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸೇರಿದಂತೆ ಚುನಾವಣಾ ಏಜೆಂಟರಾದಿಯಾಗಿ ಯಾರೊಬ್ಬರು ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿಲ್ಲ. ಅಧಿಕೃತ ಪ್ರವೇಶ ಪತ್ರ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿದೆ.
ಮತ ಎಣಿಕೆ ಕೇಂದ್ರವಾದ ಸೈನಿಕ ಶಾಲೆಯ 1ನೇ ಗೇಟ್‌ನಿಂದ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮದವರಿಗೆ ಪ್ರವೇಶ ನೀಡಲಾಗುತ್ತಿದ್ದು, 2ನೇ ಗೇಟ್‌ನಿಂದ ಮತ ಎಣಿಕೆ ಏಜೆಂಟರಿಗೆ ಒಳ ಬಿಡಲಾಗುತ್ತಿದೆ ಎಂದು ಹೇಳಿದರು.
ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಾನೂನು -ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮೇ 22ರ ಬುಧವಾರ ಮಧ್ಯರಾತ್ರಿಯಿಂದ 23ರ ಗುರುವಾರ ಮಧ್ಯರಾತ್ರಿಯವರೆಗೂ ಪಾನ ನಿರೋಧ ದಿನ ಎಂದು ಘೋಷಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.