ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾರುವ ಹಾಗೂ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿರುವ ವಿಜಯಪುರ ಮಹಾನಗರ ಪಾಲಿಕೆಗೆ ಅಕ್ಟೋಬರ್ 28ರಂದು ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.
ಮಹಾನಗರ ಪಾಲಿಕೆಯಾಗಿ ವಿಜಯಪುರ ಮೇಲ್ದರ್ಜೆಗೆ ಏರಿದ ಮೇಲೆ, ಅದರಲ್ಲೂದಶಕದ ಬಳಿಕ ಕೋರ್ಟ್ ಸೂಚನೆ ಮೇರೆಗೆ ಚುನಾವಣೆ ನಡೆಯುತ್ತಿರುವುದು ವಿಶೇಷ. ಕಾಂಗ್ರೆಸ್, ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಜೆಡಿಎಸ್ ಆಮ್ ಆದ್ಮಿ, ಎಐಎಂಐಎಂ, ಕೆಆರ್‌ಎಸ್ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಕಣದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡಿರುವುದರಿಂದ ಚುನಾವಣೆತುರುಸು ಪಡೆದಿದೆ.
174 ಅಭ್ಯರ್ಥಿಗಳು ಕಣದಲ್ಲಿ:ಕಾಂಗ್ರೆಸ್‌ನ 35, ಬಿ.ಜೆ.ಪಿ 33, ಜೆ.ಡಿ.ಎಸ್ 20, ಎ.ಎ.ಪಿ 15, ಎ.ಐ.ಎಂ.ಐ.ಎಂ 04, ಕೆ.ಆರ್.ಎಸ್ ಹಾಗೂ ಜನತಾ ಪಾರ್ಟಿ ತಲಾ 3, ಎಸ್.ಡಿ.ಪಿ.ಐ 02, ಬಿ.ಎಸ್.ಪಿ 01 ಮತ್ತು ಪಕ್ಷೇತರರು 58 ಸೇರಿದಂತೆ 174 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
2,88,288 ಮತದಾರರು:1,43,616 ಗಂಡು, 1,44,499 ಹೆಣ್ಣು, 100 ಇತರೆ ಹಾಗೂ 73 ಸೇವಾ ಮತದಾರರು ಸೇರಿದಂತೆ 2,88,288 ಮತದಾರರು ಇದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಅದರಲ್ಲಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ ಹಾಗೂ 172 ಸಾಧಾರಣ ಮತಗಟ್ಟೆ ಎಂದು ಗುರುತಿಸಲಾಗಿದೆ.
1454 ಸಿಬ್ಬಂದಿ ನೇಮಕ:303 ಅಧ್ಯಕ್ಷಾಧಿಕಾರಿ (ಪಿಆರ್‌ಓ), 303 ಸಹಾಯಕ ಅಧ್ಯಕ್ಷಾಧಿಕಾರಿ(ಎಪಿಆರ್ ಓ), 606 ಮತಗಟ್ಟೆ ಅಧಿಕಾರಿಗಳು ಹಾಗೂ 242 ಕಾಯ್ದಿರಿಸಿದ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 1454 ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ತಿಳಿಸಿದ್ದಾರೆ.
ಶಾಲೆ, ಕಾಲೇಜುಗಳಿಗೆ ರಜೆ:ಮತದಾನದ ಹಿನ್ನೆಲೆಯಲ್ಲಿಅ.28 ರಂದು ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ರದ್ದುಗೊಳಿಸಲಾಗಿದೆ.ಎಲ್ಲ ತರಹದ ಮದ್ಯ ಮಾರಾಟ ಸಂಗ್ರಹಣೆ, ಶೇಖರಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಚುನಾವಣೆ ಜರುಗಲಿರುವ ಮತಗಟ್ಟೆಗಳ ವ್ಯಾಪ್ತಿಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ವಿದ್ಯುನ್ಮಾನ ಮತಯಂತ್ರ:ಪಾಲಿಕೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಬ್ಯಾಲೆಟ್ ಯುನಿಟ್ 303, ಕಂಟ್ರೋಲ್ ಯುನಿಟ್ 303, ಕಾಯ್ದಿರಿಸಿದ ಬಿ.ಯು 70, ಸಿ.ಯು 70 ಸೇರಿದಂತೆ ಒಟ್ಟು ಬಿ.ಯು.373, ಸಿಯು 373 ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಂಚೆ ಮತಪತ್ರ:ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 74 ಸೇವಾ ಮತದಾರರಿಗೆ ಅಂಚೆ ಮತಪತ್ರವನ್ನು ರವಾನಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರಾಗಿರುವ ಒಟ್ಟು 288 ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರಗಳನ್ನು ಆಯಾ ಚುನಾವಣಾಧಿಕಾರಿಗಳಿಂದ ರವಾನಿಸಲಾಗಿದೆ.
ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕಾರ್ಯ ನಗರದ ವಿ.ಬಿ.ದರಬಾರ ಶಾಲೆಯಲ್ಲಿ ನಡೆಯಲಿದೆ.
ವಾಹನಗಳ ಬಳಕೆ:ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ತೆರಳಿದರು. ಒಟ್ಟು ಬಸ್ 24, ಮಿನಿ ಬಸ್ 18 ಹಾಗೂ ಕ್ರೂಜರ್ 13 ಸೇರಿದಂತೆ ಒಟ್ಟು 55 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಬಂದೊಬಸ್ತ್:ಅತೀ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಡ್ ಕಾನ್‌ಸ್ಟೇಬಲ್ ಹಾಗೂ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಸೂಕ್ಷ್ಮ ಮತಗಟ್ಟೆಗೆ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಒಬ್ಬ ಹೋಮ್ ಗಾರ್ಡ್ ಮತ್ತು ಸಾಧಾರಣಾ ಮತಗಟ್ಟೆಗೆ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.
ಚುನಾವಣ ಕರ್ತವ್ಯಕ್ಕೆ 3 ಡಿ.ವೈ.ಎಸ್.ಪಿ, 9 ಸಿ.ಪಿ.ಐ, 25 ಪಿ.ಎಸ್.ಐ, 76 ಎ.ಎಸ್.ಐ, 121 ಹೆಡ್ ಕಾನ್‌ಸ್ಟೆಬಲ್, 385 ಪೊಲೀಸ್ ಕಾನ್‌ಸ್ಟೆಬಲ್, 150 ಹೋಮ್ ಗಾರ್ಡ್, 4 ಐ.ಆರ್.ಬಿ ಹಾಗೂ 8 ಡಿ.ಎ.ಆರ್ ಗಳನ್ನು ನಿಯೋಜಿಸಲಾಗಿದೆ ಎಂದರು.
ಪರೀಕ್ಷೆಗೆ ಅನುಮತಿ:ನಗರದಶ್ರೀ ಸಹ್ಯಾದ್ರಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್‍ನ 3ನೇ ಮಹಡಿಯಲ್ಲಿ ನಡೆಯುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಪ್ರಕ್ರಿಯೆ ನಡೆಸಲು ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವಕಾಶ ಕಲ್ಪಿಸಿದ್ದಾರೆ.
ಮತದಾನಕ್ಕೆ ಗುರುತಿನ ದಾಖಲೆ:ಮತದಾರರು ಮತದಾನ ಮಾಡುವಾಗ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಈ ಕೆಳಕಂಡ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‍ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿಗಳು, ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಶಸ್ತ್ರ ಪರವಾನಗಿ, ಅಂಗವಿಕಲರ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಪಡಿತರ ಚೀಟಿ, ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು, ಆಧಾರ್ ಕಾರ್ಡ್ ಈ ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಗಳನ್ನು ಹಾಜರುಪಡಿಸಿ ಮತದಾರರು ಮತದಾನ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.