ADVERTISEMENT

ಕಾಂಗ್ರೆಸ್ ಸರ್ಕಾರದಿಂದ ರೈತರ ಆಸ್ತಿ ಕಬಳಿಸುವ ಹುನ್ನಾರ: ಸಂಸದ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:21 IST
Last Updated 29 ಅಕ್ಟೋಬರ್ 2024, 14:21 IST
<div class="paragraphs"><p>ವಿಜಯಪುರ ಜಿಲ್ಲೆಯ ಪಡಗಾನೂರಿನ ಐತಿಹಾಸಿಕ ಸೋಮೇಶ್ವರ ದೇವಾಲಯವನ್ನು ವಕ್ಫ್‌ ಮಂಡಳಿಗೆ ರಾಜ್ಯ ಸರ್ಕಾರ ಸೇರಿಸಿರುವ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದ ರಾಜ್ಯ ಬಿಜೆಪಿ ತಂಡ ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತು.&nbsp;ಶಾಸಕ ಮಹೇಶ ಟೆಂಗಿನಕಾಯಿ, ಹರೀಶ ಪೂಂಜಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಪೂರ ಇದ್ದಾರೆ</p></div>

ವಿಜಯಪುರ ಜಿಲ್ಲೆಯ ಪಡಗಾನೂರಿನ ಐತಿಹಾಸಿಕ ಸೋಮೇಶ್ವರ ದೇವಾಲಯವನ್ನು ವಕ್ಫ್‌ ಮಂಡಳಿಗೆ ರಾಜ್ಯ ಸರ್ಕಾರ ಸೇರಿಸಿರುವ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದ ರಾಜ್ಯ ಬಿಜೆಪಿ ತಂಡ ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತು. ಶಾಸಕ ಮಹೇಶ ಟೆಂಗಿನಕಾಯಿ, ಹರೀಶ ಪೂಂಜಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಪೂರ ಇದ್ದಾರೆ

   

ವಿಜಯಪುರ: ವಕ್ಫ್ ಮಂಡಳಿ ನೀಡಿರುವ ನೋಟಿಸ್‌ನಿಂದ ಆತಂಕದಲ್ಲಿರುವ ರೈತರ ಧ್ವನಿಯಾಗಲು ಹಾಗೂ ಅವರ ಅಹವಾಲು ಆಲಿಸಲು ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ಸಂಸದ ಗೋವಿಂದ ಕಾರಜೋಳ ನೇತೃತ್ವದ ರಾಜ್ಯ ಬಿಜೆಪಿ ತಂಡವು, ಜಿಲ್ಲೆಯ ಕೃಷಿಕರು, ಮಠಾಧೀಶರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿತು.

‘ಕರ್ನಾಟಕ ರಾಜ್ಯ ಸರ್ಕಾರವು ವಕ್ಫ್‌ ಮಂಡಳಿಯನ್ನು ಮುಂದಿಟ್ಟುಕೊಂಡು ರೈತರ ಆಸ್ತಿಯನ್ನು ಕಬಳಿಸುವ ದೊಡ್ಡ ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ರೈತರ ಕೈತಪ್ಪಿ ಹೋಗದಂತೆ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ADVERTISEMENT

ಲೋಕಸಭೆ ಹಕ್ಕು ಚ್ಯುತಿ:

‘ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿದೆ. ದೇಶದಾದ್ಯಂತ ಚರ್ಚೆ, ಸಭೆಗಳು ನಡೆಯುತ್ತಿವೆ. ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಬಿಲ್‌ ಮಂಡಿಸಲು ಸಿದ್ಧತೆ ನಡೆದಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಕ್ಫ್‌ ಬೋರ್ಡ್‌ ಮುಂದಿಟ್ಟುಕೊಂಡು, ರೈತರ ಭೂಮಿ ಕಬಳಿಸುವ ಹುನ್ನಾರ ನಡೆಸಿದೆ. ಇದು ಲೋಕಸಭೆಯ ಹಕ್ಕು ಚ್ಯುತಿ ಆಗಲಿದ್ದು, ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಹೇಳಿದರು.

‘ಎಸ್‌ಸಿ, ಎಸ್‌ಟಿಗಳ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ. ದೇವಸ್ಥಾನದ ಪೂಜೆ ಮಾಡುವವರಿಗೆ ನೀಡಿರುವ ಭೂಮಿಯನ್ನೂ ವಕ್ಫ್‌ ಎಂದು ಹೇಳಲಾಗಿದೆ. ಮಸೀದಿ, ದರ್ಗಾದಲ್ಲಿ ಕೆಲಸ ಮಾಡುವ ಮುಲ್ಲಾ, ಮೌಲ್ವಿಗಳ ಆಸ್ತಿಗೂ ಕುತ್ತು ಬಂದಿದೆ. ಸರ್ಕಾರಿ ಜಮೀನನ್ನು ಕೂಡ ವಕ್ಫ್‌ ಆಸ್ತಿ ಎಂದು ಮಾಡಿದ್ದಾರೆ. ಎಲ್ಲರ ಆಸ್ತಿಯನ್ನು ಕಬಳಿಸಿ, ಆ ಆಸ್ತಿಗೆ ವಕ್ಫ್‌ ಅನ್ನು ಮಾಲೀಕನನ್ನಾಗಿ ಮಾಡಲು ಕಾಂಗ್ರೆಸ್‌ ಸರ್ಕಾರ ಕೈಹಾಕಿದೆ’ ಎಂದು ಆಪಾದಿಸಿದರು.

‘ಬಿಜೆಪಿ ಯಾವುದೇ ಕಾರಣಕ್ಕೂ ಒಂದಿಂಚು ಭೂಮಿಯನ್ನು ಹೋಗಲು ಬಿಡುವುದಿಲ್ಲ. ಕೋಮು ಸೌಹಾರ್ದಕ್ಕೆ ದಕ್ಕೆ ತರುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ರೈತರು ದೃತಿಗೆಡಬಾರದು’ ಎಂದು ಧೈರ್ಯ ತುಂಬಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಕೇವಲ ವೋಟ್‌ ಬ್ಯಾಂಕ್‌ ಚಿಂತೆಯೇ ಹೊರತು, ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತೆ ಇಲ್ಲ. ವೋಟಿನ ಮೇಲೆ ಕಣ್ಣಿಟ್ಟು ಇಂತಹ ದುರಂತ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಕ್ಫ್‌ ಆಸ್ತಿ ವಿರುದ್ಧ ಹೋರಾಟವನ್ನು ಆರಂಭಿಸಿದ್ದಾರೆ. ಅವರ ಹೋರಾಟಕ್ಕೆ ಬಿಜೆಪಿಯು ದೆಹಲಿಯಿಂದ ಹಳ್ಳಿಯ ವರೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದೆ' ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, ಹರೀಶ ಪೂಂಜಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಪೂರ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಬಸವರಾಜ ಯಂಕಂಚಿ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಇದ್ದರು.

ತಂಡವು ಸಂಗ್ರಹಿಸಿರುವ ಮಾಹಿತಿ ಒಳಗೊಂಡ ವರದಿಯನ್ನು ಪಕ್ಷದ ಕೇಂದ್ರ, ರಾಜ್ಯ ಘಟಕಕ್ಕೆ ಶೀಘ್ರ ನೀಡುತ್ತೇವೆ. ಕಾಂಗ್ರೆಸ್‌ನ ದುರುದ್ದೇಶ ಈಡೇರಲು ಬಿಡುವುದಿಲ್ಲ, ರೈತರ ಪರವಾಗಿ ಬಿಜೆಪಿ ನಿಲ್ಲಲಿದೆ
-ಗೋವಿಂದ ಕಾರಜೋಳ, ಸಂಸದ 
ಮುನಿಸು: ಜಿಗಜಿಣಗಿ, ಯತ್ನಾಳ ಗೈರು
ವಿಜಯಪುರ: ವಿಜಯಪುರಕ್ಕೆ ಮಂಗಳವಾರ ಭೇಟಿ ನೀಡಿದ ರಾಜ್ಯ ಬಿಜೆಪಿ ತಂಡದೊಂದಿಗೆ ಸಂಸದ ರಮೇಶ ಜಿಗಜಿಣಗಿ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಾಲ್ಗೊಳ್ಳದೇ, ದೂರ ಉಳಿದರು. ತಂಡದಲ್ಲಿ ತಮ್ಮನ್ನು ಹಾಗೂ ಸ್ಥಳೀಯ ಸಂಸದ ರಮೇಶ ಜಿಗಜಿಣಗಿ ಅವರನ್ನು ಸೇರಿಸದೇ ಇರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ, ವಿಜಯಪುರಕ್ಕೆ ಭೇಟಿ ನೀಡುವ ಬಿಜೆಪಿ ರಾಜ್ಯ ತಂಡವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಯತ್ನಾಳ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ವಿಜಯೇಂದ್ರ ಅವರು, ಬಿಜೆಪಿ ತಂಡಕ್ಕೆ ಇಬ್ಬರ ಹೆಸರನ್ನು ಸೇರ್ಪಡೆ ಮಾಡಿ, ಹೊಸದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.