ವಿಜಯಪುರ: ‘ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ಅವಧಿಯಲ್ಲಿ ವಕ್ಪ್ ಆಸ್ತಿ ಅತಿಕ್ರಮಣ ತೆರವಿಗೆ ಅನೇಕ ಸುತ್ತೋಲೆ ಹೊರಡಿಸಿದೆ. ಈ ಸಂಬಂಧ ಟಾಸ್ಕ್ ಪೋರ್ಸ್ ಕೂಡ ರಚಿಸಿತ್ತು. ರಾಜ್ಯದಲ್ಲಿ ಈಗ ಉಂಟಾಗಿರುವ ಎಲ್ಲ ವಕ್ಪ್ ರಾದ್ದಾಂತಗಳು ಬಿಜೆಪಿ ಕೊಡುಗೆ. ಅವರ ತಪ್ಪುಗಳನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸುತ್ತಿದೆ’ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ವಕ್ಫ್ ಆಸ್ತಿ ರಕ್ಷಣೆ ಕುರಿತು ಅಪಾರ ಕಾಳಜಿ ತೋರಿದ್ದ ಬಿಜೆಪಿಯವರು ವಿಶ್ವಗುರು ಬಸವಣ್ಣ ಜನಿಸಿದ, ಸೂಫಿ ಸಂತರು ನಡೆದಾಡಿದ ವಿಜಯಪುರ ನೆಲದಲ್ಲಿ ವಕ್ಫ್ ವಿವಾದವನ್ನು ಮುಂದಿಟ್ಟುಕೊಂಡು ಹಿಂದುತ್ವದ ಪ್ರಯೋಗ ಶಾಲೆ ಮಾಡಲು ಬಿಜೆಪಿ ಹೊರಟಿದೆ’ ಎಂದು ದೂರಿದರು.
‘ಕಳೆದ ಒಂದೆರಡು ವಾರಗಳಿಂದ ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಸತ್ಯವನ್ನು ಸತ್ಯ ಮಾಡುವ ಸುಳ್ಳು ಪ್ರಚಾರ ನಡೆಯುತ್ತಿದೆ. ಆದರೆ, ಇದೇ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರು, ಧಾರ್ಮಿಕ ಸ್ಥಳಗಳ ಹಾಗೂ ಎಲ್ಲ ಧರ್ಮೀಯರ ಆಸ್ತಿಯನ್ನು ವಕ್ಪ್‌ಗೆ ಹಿಂಪಡೆದಿದೆ’ ಎಂದರು.
‘ಬಿಜೆಪಿ ವಕ್ಪ್ ಆಸ್ತಿ ಕುರಿತು ಸುಳ್ಳು ಆರೋಪ ಮಾಡಲು ಪ್ರಾರಂಭಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ನೀಡಲಾಗಿರುವ ಎಲ್ಲ ನೋಟಿಸುಗಳನ್ನು ಹಿಂಪಡೆಯಲು ಆದೇಶ ನೀಡಿದ್ದಾರೆ. ರೈತರಿಗೆ ವಕ್ಪ್ ನೀಡಿರುವ 423 ನೋಟಿಸ್ ರದ್ದು ಪಡಿಸುವ, ಹಿಂಪಡೆಯುವ ಕಾರ್ಯ ಈಗಾಗಲೇ ಮಾಡಲಾಗಿದೆ. ರೈತರು, ಧಾರ್ಮಿಕ ಸ್ಥಳಗಳು ಹಾಗೂ ಜನ ಸಾಮಾನ್ಯರ ಒಂದಿಂಚು ಆಸ್ತಿ ವಕ್ಫ್‌ಗೆ ಸೇರಲು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ವಕ್ಫ್ ಆಸ್ತಿಗೆ ಸಂಬಂಧಿಸಿದ ಗೊಂದಲವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಗೆಹರಿಸಿದ್ದರೂ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ರೈತರು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಾ, ಪ್ರಚಾರ ಗಿಟ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿಯವರು ತಾವು ಅಧಿಕಾರದಲ್ಲಿರುವಾಗ ಹಿಂದೂ ವಿರೋಧಿ ನೀತಿ ಅನುಸರಿಸಿ, ಈಗ ನಾವು ಹಿಂದೂಗಳ ಪರವಾಗಿದ್ದೇವೆ ಎಂದು ಪೋಸ್ ಕೊಡುತ್ತಿದ್ದಾರೆ. ಈ ವಿಚಾರಗಳು ಗೊತ್ತಿಲ್ಲದ ಕೆಲ ಸ್ವಾಮೀಜಿಯವರು ಬಿಜೆಪಿಯರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲ ಸ್ವಾಮೀಜಿಗಳಿಗೆ ನಿಜಾಂಶ ಕುರಿತ ದಾಖಲೆಗಳನ್ನು ತಲುಪಿಸುತ್ತೇವೆ. ಆಗ ಸ್ವಾಮೀಜಿಗಳಿಗೆ ಪ್ರಧಾನಿ ಮತ್ತು ಬಿಜೆಪಿ ಮುಖಂಡರ ನಿಜಬಣ್ಣ ತಿಳಿಯಲಿದೆ. ಕನ್ಹೇರಿ ಮಠದ ಸ್ವಾಮೀಜಿಯವರೇ ಬಿಜೆಪಿ ವಿರುದ್ಧ ತಿರುಗಿ ಬೀಳಲಿದ್ದಾರೆ’ ಎಂದರು.
‘ರೈತರು, ಧಾರ್ಮಿಕ ಸ್ಥಳಗಳನ್ನು ಮತ್ತು ಸರ್ಕಾರಿ, ಸಾರ್ವಜನಿಕ ಆಸ್ತಿಗಳನ್ನು ವಕ್ಪ್‌ಗೆ ನೀಡಲು ನಾನು ಬಿಡುವುದಿಲ್ಲ. ನಾವು ಹಿಂದೂಗಳೇ ಆದರೆ, ಬಿಜೆಪಿಯರು ನಕಲಿ ಮನುವಾದವನ್ನು ಪ್ರತಿಪಾದಿಸುವ ನಕಲಿ ಹಿಂದೂಗಳು’ ಎಂದು ಆರೋಪಿಸಿದರು.
‘ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿದ್ದು ಕಾನೂನು ಬಾಹಿರವಾಗಿದ್ದು, ಅದು ಹಕ್ಕುಚ್ಯುತಿ ಆಗಲಿದೆ. ಬಿಜೆಪಿಯವರು ಪಾಲ್ ಅವರನ್ನು ವಿಜಯಪುರಕ್ಕೆ ಕರೆತಂದಯ ಕುರಿ ಮಾಡಿದ್ದಾರೆ’ ಎಂದರು.
‘ಶಾಸಕ ಯತ್ನಾಳ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಕ್ಪ್ ಕಾಯ್ದೆ ರದ್ದಾಗುವವರೆಗೆ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದಿದ್ದರು. ದೀರ್ಘಕಾಲ ಹೋರಾಟ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ಬೇಗನೆ ಧರಣಿ ಮುಗಿಸಿರುವುದು ಏಕೆ? ಸೊಳ್ಳೆ ಕಾಟದ ಭಯದಿಂದ ಜಗದಂಬಿಕಾ ಪಾಲ್ ಅವರನ್ನು ಬೆನ್ನತ್ತಿ ಕರೆಯಿಸಿ, ಧರಣಿ ಮುಗಿಸಿದ್ದಾರೆ’ ಎಂದು ಕುಟುಕಿದರು.
‘ಯತ್ನಾಳ ಅಹೋರಾತ್ರಿ ಹೋರಾಟ ಹಿಂಪಡೆದಿರುವುದು ತಪ್ಪು, ನಿಮ್ಮ ಹೋರಾಟ ಮುಂದುವರಿಸಬೇಕು, ನಿಮ್ಮ ಶೆಡ್‌ಗೆ ಬಂದು ನಾನೂ ಭಾಷಣ ಮಾಡುತ್ತೇನೆ’ ಎಂದರು.
ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಮಹಾಂತೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.