ADVERTISEMENT

ವಕ್ಫ್ ಆಸ್ತಿ | ತಪ್ಪು ವದಂತಿಗೆ ಆತಂಕ ಬೇಡ: ವಿಜಯಪುರ ಡಿಸಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:51 IST
Last Updated 26 ಅಕ್ಟೋಬರ್ 2024, 15:51 IST
ಟಿ.ಭೂಬಾಲನ್‌
ಟಿ.ಭೂಬಾಲನ್‌   

ವಿಜಯಪುರ:  ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿ ಇಂಡೀಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ, ವದಂತಿಗಳಿಗೆ ರೈತರು ಕಿವಿಗೊಡದಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.

ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲಾಗುತ್ತಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.  

1974ರಲ್ಲಿ ವಕ್ಫ್ ಮಂಡಳಿಯಿಂದ ಹೊರಡಿಸಿದ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಇರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಇಂಡೀಕರಣಕ್ಕಾಗಿ ಪಟ್ಟಿ ಒದಗಿಸಲಾಗಿದ್ದು, ಇದರನ್ವಯ ಖಾತೆ ಬದಲಾವಣೆಗೆ ದಾಖಲಾತಿಗಳನ್ನು  ಪರಿಶೀಲನೆ ನಡೆಸಿ, ವಕ್ಪ್ ಆಸ್ತಿ ಇಂಡೀಕರಣಕ್ಕಾಗಿ ಸಂಬಂಧಪಟ್ಟ ರೈತರು ಅಥವಾ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.   

ADVERTISEMENT

ನೋಟಿಸ್ ಬಂದ ತಕ್ಷಣ ತಮ್ಮ ಆಸ್ತಿಯ ಖಾತೆ ಬದಲಾವಣೆಯಾಗಿದೆ ಎಂಬ ಆತಂಕ-ಭಯ ಪಡುವ ಅವಶ್ಯಕತೆ ಇಲ್ಲ. ನೋಟಿಸ್ ಬಂದಲ್ಲಿ, ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತಹಶೀಲ್ದಾರ್‌ ಕಚೇರಿಯಲ್ಲಿ ಒದಗಿಸಿ ಮಾಹಿತಿ ನೀಡಬೇಕು. ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿನ ರೈತರಿಗೆ- ಆಸ್ತಿ ಮಾಲೀಕರಿಗೆ ಈವರೆಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಕಳೆದ ಒಂದು ತಿಂಗಳಿನಿಂದ ಯಾವುದೇ ಆಸ್ತಿಯನ್ನು ಇಂಡೀಕರಣ ಮಾಡಿ, ವಕ್ಫ್‌ಗೆ ನೀಡಿರುವುದಿಲ್ಲ ಎಂದು ಹೇಳಿದ್ದಾರೆ. 

ಹೊನವಾಡದಲ್ಲಿ 1500 ಎಕರೆ ವಕ್ಫ್ ಆಸ್ತಿ ಇರುವುದಿಲ್ಲ. ಗೆಜೆಟ್ ನೋಟಿಫಿಕೇಶನ್ ಪ್ರಕಾರ 10-15 ಎಕರೆ ಮಾತ್ರ ವಕ್ಫ್ ಆಸ್ತಿ ಇರುವುದು ಕಂಡು ಬಂದಿದೆ. ಅದು ಕೂಡ ಈ ಎಲ್ಲ ಆಸ್ತಿ ಮಸೀದಿ, ಈದ್ಗಾ ಮೈದಾನ, ಖಬರಸ್ಥಾನ ಇರುವುದರಿಂದ ಹೊನವಾಡ ಗ್ರಾಮದ ರೈತರು ಈ ಕುರಿತು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಏನಾದರೂ ನೋಟಿಸ್ ಬಂದರೂ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಲ್ಲಿ ಈ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರವೇ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.