ವಿಜಯಪುರ: ವಕ್ಫ್ ಮಂಡಳಿ ನೀಡಿರುವ ನೋಟಿಸ್‌ನಿಂದ ಆತಂಕದಲ್ಲಿರುವ ಜಿಲ್ಲೆಯ ರೈತರ ಅಹವಾಲು ಆಲಿಸಲು ಅ.29ರಂದು ವಿಜಯಪುರಕ್ಕೆ ಭೇಟಿ ನೀಡುತ್ತಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ರಾಜ್ಯ ಬಿಜೆಪಿ ತಂಡಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಸಂಸದ ರಮೇಶ ಜಿಗಜಿಣಗಿ ಅವರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ತಂಡದಲ್ಲಿ ತಮ್ಮನ್ನು ಹಾಗೂ ಸ್ಥಳೀಯ ಸಂಸದ ರಮೇಶ ಜಿಗಜಿಣಗಿ ಅವರನ್ನು ಸೇರಿಸದೇ ಇರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ, ವಿಜಯಪುರಕ್ಕೆ ಭೇಟಿ ನೀಡುವ ಬಿಜೆಪಿ ರಾಜ್ಯ ತಂಡವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಯತ್ನಾಳ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವಿಜಯೇಂದ್ರ ಅವರು, ಬಿಜೆಪಿ ತಂಡಕ್ಕೆ ಇಬ್ಬರ ಹೆಸರನ್ನು ಸೇರ್ಪಡೆ ಮಾಡಿ, ಹೊಸದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಬಿಜೆಪಿ ತಂಡ ಇಂತಿದೆ: ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹಾಗೂ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಮತ್ತು ಎಂ.ಬಿ.ಜಿರಲಿ ಅವರನ್ನು ಒಳಗೊಂಡ ಹೊಸ ತಂಡವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದಾರೆ.
ತಂಡವು ಅ.29ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ರೈತರ ಸಮಸ್ಯೆಯನ್ನು ಆಲಿಸಿ ವರದಿಯನ್ನು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.