ADVERTISEMENT

ವಕ್ಪ್‌ ಆಸ್ತಿ ವಿವಾದ: ಟಾಸ್ಕ್‌ ಪೋರ್ಸ್ ರಚನೆ; ಸಚಿವ ಎಂ.ಬಿ.ಪಾಟೀಲ ಹೇಳಿಕೆ

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 19:03 IST
Last Updated 27 ಅಕ್ಟೋಬರ್ 2024, 19:03 IST
ಎಂ.ಬಿ ಪಾಟೀಲ
ಎಂ.ಬಿ ಪಾಟೀಲ   

ವಿಜಯಪುರ: ‘ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಕುರಿತು ಉಂಟಾಗಿರುವ ಗೊಂದಲ, ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್‌ ಪೋರ್ಸ್‌ ರಚನೆ ಮಾಡಲಾಗುವುದು. ಈ ಟಾಸ್ಕ್‌ ಪೋರ್ಸ್‌ 1974 ರ ಗೆಜೆಟ್‌ ಪೂರ್ವದ ಜಿಲ್ಲೆಯ ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ, ಈಗ ಉಂಟಾಗಿರುವ ಗೊಂದಲ ಬಗೆಹರಿಸಲಿದೆ’ ಎಂದು ಜಿಲ್ಲಾಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಕ್ಫ್‌ ಆಸ್ತಿ ವಿಷಯವಾಗಿ ವಿಜಯಪುರ ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಹಿಂದೂಗಳ ಭೂಮಿಯನ್ನು ಮುಸ್ಲಿಮರಿಗೆ ಹಂಚಲಾಗುತ್ತಿದೆ ಎಂದು ಮಾಧ್ಯಮಗಳ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಾದ ಎಬ್ಬಿಸಿದ್ದಾರೆ’ ಎಂದು ದೂರಿದರು. 

‘ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ರೈತರಿಗೆ ಸೇರಿದ 1,200 ಎಕರೆ ಭೂಮಿ ವಕ್ಫ್‌ ಆಸ್ತಿಯಾಗಿದೆ ಎಂದು ಗೊಂದಲ ಉಂಟುಮಾಡಲಾಗಿದೆ. ಹೊನವಾಡದಲ್ಲಿ 10 ಎಕರೆ 29 ಗುಂಟೆ ಮಾತ್ರ ವಕ್ಫ್‌ ಆಸ್ತಿ ಇದೆ. ಈ ಕುರಿತ ವಿವಾದ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಉಳಿದಂತೆ ಒಂದೇ ಒಂದು ಎಕರೆ ರೈತರ ಭೂಮಿ ವಕ್ಫ್‌ ಆಸ್ತಿಯಲ್ಲ. ಈ ಸಂಬಂಧ ಯಾರಿಗೂ ನೋಟಿಸ್‌ ನೀಡಿಲ್ಲ. ರೈತರ ಹೆಸರಿನಲ್ಲೇ ಆಸ್ತಿ ಇದೆ. ಉತಾರದಲ್ಲೂ ರೈತರ ಹೆಸರೇ ಇದೆ’ ಎಂದು ಸ್ಪಷ್ಟಪಡಿಸಿದರು. 

ADVERTISEMENT

‘ವಿಜಯಪುರ ಜಿಲ್ಲೆಯಲ್ಲಿ ಈ ಮೊದಲು ಒಟ್ಟು 14,201 ಎಕರೆ ವಕ್ಫ್‌ ಆಸ್ತಿ ಇತ್ತು. ಇದರಲ್ಲಿ 1,459 ಎಕರೆ ಭೂಮಿ ಇನಾಂ ರದ್ದು ಕಾಯ್ದೆಯಡಿ ವಕ್ಫ್‌ ಕೈತಪ್ಪಿ ಹೋಗಿದೆ. ಭೂಸುಧಾರಣೆ ಕಾಯ್ದೆಯಡಿ 11,835 ಎಕರೆ ರೈತರಿಗೆ ಹಂಚಿಕೆಯಾಗಿದೆ ಮತ್ತು ವಿವಿಧ ಯೋಜನೆಗಳಿಗೆ 939 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಕೇವಲ 773 ಎಕರೆ ಮಾತ್ರ ವಕ್ಫ್‌ ಹೆಸರಿನಲ್ಲಿ ಇದೆ’ ಎಂದರು.

‘ಇನಾಂ ರದ್ದು ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆಯಡಿ ರೈತರಿಗೆ ಹಂಚಿಕೆಯಾಗಿರುವ ಆಸ್ತಿ ಕುರಿತು ಇದುವರೆಗೂ ಇಂಡೀಕರಣ ಆಗದೇ ಇರುವುದರಿಂದ ವಕ್ಫ್‌ ಹೆಸರು ಇದ್ದು, ಇದನ್ನು ತೆಗೆದುಹಾಕುವ ಸಂಬಂಧ ಕಾನೂನು ಸಲಹೆ ಪಡೆದು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ’ ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್‌, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಇಲಾಖೆ ಅಧಿಕಾರಿ ತಬಸ್ಸುಮ್ ಎಂ. ಮೊಹಸೀನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ವಕ್ಫ್‌ ಆಸ್ತಿ ವಿವಾದ: ಬಿಜೆಪಿ ತಂಡ ರಚನೆ

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್‌ ಬೋರ್ಡ್‌ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೆ ಒಳಗಾಗಿರುವ ರೈತರ ಆಹವಾಲು ಆಲಿಸಲು ರಾಜ್ಯ ಬಿಜೆಪಿಯಿಂದ ತಂಡ ರಚಿಸಲಾಗಿದೆ. ಸಂಸದ ಗೋವಿಂದ ಕಾರಜೋಳ ಶಾಸಕ ಹರೀಶ್‌ ಪೂಂಜಾ ಮಹೇಶ ಟೆಂಗಿನಕಾಯಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ ಹಾಗೂ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನು ಒಳಗೊಂಡ ತಂಡವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದಾರೆ. ಈ ತಂಡವು ಅ.29ರಂದು ಜಿಲ್ಲೆಗೆ ಭೇಟಿ ನೀಡಲಿದ್ದು ರೈತರ ಸಮಸ್ಯೆಯನ್ನು ಆಲಿಸಿ ವರದಿಯನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಕ್ಫ್‌ಗೆ ಒಂದಿಂಚು ಭೂಮಿ ಬಿಟ್ಟುಕೊಡೆವು:ಯತ್ನಾಳ

ವಿಜಯಪುರ: ‘ರಾಜ್ಯದಲ್ಲಿ ಒಂದೇ ಒಂದು ಇಂಚು ರೈತರ ಭೂಮಿಯನ್ನು ವಕ್ಫ್‌ಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ರಾಜ್ಯದಾದ್ಯಂತ ಜನಜಾಗೃತಿ ಮಾಡಿ ಹೋರಾಟ ರೂಪಿಸುತ್ತೇವೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ವ್ಯವಸ್ಥಿತವಾದ ಹುನ್ನಾರ’ ಎಂದು ಆರೋಪಿಸಿದರು. ‘ವಕ್ಫ್‌ ಕಾನೂನು ಸಂಪೂರ್ಣ ತೊಲಗಬೇಕಿದೆ. ವಕ್ಫ್‌ ಬೋರ್ಡ್‌ನಿಂದ ನೋಟಿಸ್‌ ಬಂದಿರುವ ಎಲ್ಲ ರೈತರಿಗೆ ಉಚಿತವಾಗಿ ಕಾನೂನು ಸಲಹೆ ನೀಡಲಾಗುವುದು. ಕೋರ್ಟ್‌ನಲ್ಲಿ ಇದರ ವಿರುದ್ಧ ಪಿಐಎಲ್‌ ಸಲ್ಲಿಸಲಾಗುವುದು’ ಎಂದು ಹೇಳಿದರು. 

ಒಂದು ಇಂಚು ರೈತರ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ವಕ್ಫ್‌ ಕಾನೂನು ಸಂಪೂರ್ಣ ತೊಲಗಬೇಕಿದೆ. ರೈತರಿಗೆ ಉಚಿತ ಕಾನೂನು ಸಲಹೆ ನೀಡಲಾಗುವುದು. ಇದರ ವಿರುದ್ಧ ಪಿಐಎಲ್‌ ಸಲ್ಲಿಸಲಾಗುವುದ
ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ವಕ್ಫ್‌ ಆಸ್ತಿಯನ್ನು ಅಕ್ರಮವಾಗಿ ಹೆಚ್ಚಿಸಲು ವ್ಯವಸ್ಥಿತ ಪಿತೂರಿ ನಡೆದಿದೆ. ಇದಕ್ಕೆ ಜಮೀರ್ ಅವರೇ ಕಾರಣರು. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
ಎನ್‌.ರವಿಕುಮಾರ್‌, ಬಿಜೆಪಿಯ ವಿಧಾನಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.