ಆಲಮಟ್ಟಿ: ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶನಿವಾರ 62,581 ಕ್ಯುಸೆಕ್‌ಗೆ ಹೆಚ್ಚಳವಾಗಿದೆ.
ಆಗಸ್ಟ್‌ನಲ್ಲಿ ಆಲಮಟ್ಟಿ ಜಲಾಶಯ ತನ್ನ ಗರಿಷ್ಠ ಸಂಗ್ರಹ ಸಾಮರ್ಥ್ಯ 519.60 ಮೀಟರ್ ಎತ್ತರ ತಲುಪಿತ್ತು. ಅಂದಿನಿಂದಲೂ ನಿತ್ಯ 10 ರಿಂದ 20 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇದೆ. ಇದೇ ನೀರನ್ನು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ನಿತ್ಯ ಹರಿಸಲಾಗುತ್ತಿದೆ. ಶುಕ್ರವಾರದಿಂದ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ ಘಟಪ್ರಭಾ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಹೆಚ್ಚಿದೆ. ಹೀಗಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು. ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜಲಾಶಯಗಳು ಶೇ 100 ರಷ್ಟು ಭರ್ತಿಯಾಗಿವೆ.
ಹೊರಹರಿವು ಹೆಚ್ಚಳ: ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 40 ಸಾವಿರ ಕ್ಯುಸೆಕ್ ನೀರನ್ನು ಹಾಗೂ ಜಲಾಶಯದ 26 ಗೇಟ್ ಪೈಕಿ 16 ಗೇಟ್‌ಗಳಿಂದ 25000 ಕ್ಯುಸೆಕ್ ನೀರು ಸೇರಿ ಒಟ್ಟು 65,000 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಶುಕ್ರವಾರ ರಾತ್ರಿಯಿಂದ ಹರಿಸಲಾಗುತ್ತಿದೆ.
‘ಚಿಕ್ಕೋಡಿ ಜಿಲ್ಲೆಯ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 35,000 ಕ್ಯುಸೆಕ್ ಇದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಘಟಪ್ರಭಾದ ನದಿಯ ಹರಿವು 11,000 ಕ್ಯುಸೆಕ್ ಇದೆ. ಆಲಮಟ್ಟಿ ಜಲಾಶಯದ ಒಳಹರಿವು 60 ಸಾವಿರ ಕ್ಯುಸೆಕ್ ಆಸುಪಾಸು ಇದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಜಲಾಶಯದ ಒಳಹರಿವು ಇದೇ ರೀತಿ ಇರಲಿದೆ. ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಒಳಹರಿವಿಗಿಂತ ಹೊರಹರಿವು ಅಲ್ಪ ಹೆಚ್ಚಿಸಲಾಗಿದೆ. ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಎಲ್ಲಾ 6 ಘಟಕಗಳು ಕಾರ್ಯಾರಂಭ ಮಾಡಿದ್ದು, 288 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ‘ ಎಂದು ಕೆಪಿಸಿಎಲ್ ಘಟಕದ ಸೂಪರಿಂಟೆಂಡಿಂಗ್ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.