ADVERTISEMENT

ಆಲಮಟ್ಟಿಯಿಂದ 101 ಕೆರೆಗಳಿಗೆ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:23 IST
Last Updated 9 ಮೇ 2024, 15:23 IST
ಆಲಮಟ್ಟಿ ಜಲಾಶಯ 
ಆಲಮಟ್ಟಿ ಜಲಾಶಯ    

ಆಲಮಟ್ಟಿ: ಬರಗಾಲ ಸ್ಥಿತಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಜಿಲ್ಲೆಯ 101 ಕೆರೆಗಳಿಗೆ ಗುರುವಾರ  ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಯಿತು.

ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಎಲ್ಲಾ ಹಂತದ ಕಾಲುವೆಗಳ ಆಧೀನದಲ್ಲಿ ಬರುವ 99 ಕೆರೆಗಳು ಹಾಗೂ ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಭೂತನಾಳ ಕೆರೆ ಹಾಗೂ ಇಂಡಿ ತಾಲ್ಲೂಕಿನ ಹೊರ್ತಿ ಮತ್ತು ಅರ್ಜನಾಳ ಕೆರೆ ಸೇರಿದಂತೆ ಒಟ್ಟಾರೆ 101 ಕೆರೆಗಳಿಗೆ ನೀರು ಬಿಡಲಾಯಿತು.

2 ಟಿಎಂಸಿ ಅಡಿ ನೀರು: ಕೆರೆಗಳ ಭರ್ತಿಗಾಗಿ ಮೇ 9ರಿಂದ 28ರವರೆಗೆ ಆಲಮಟ್ಟಿ ಜಲಾಶಯದಿಂದ ಒಟ್ಟಾರೆ 2 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ.

ADVERTISEMENT

ಮುಳವಾಡ ಮತ್ತು ಚಿಮ್ಮಲಗಿ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 107 ಕೆರೆಗಳಿದ್ದು, ಇವುಗಳ ಪೈಕಿ 99 ಕೆರೆಗಳನ್ನು ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ತುಂಬಿಸಲಾಗುತ್ತಿದೆ. ಏಪ್ರಿಲ್‌ 30ಕ್ಕೆ 99 ಕೆರೆಗಳ ಪೈಕಿ 20 ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಹಾಗೂ 78 ಕೆರೆಗಳಲ್ಲಿ ಶೇ 25ಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ.

ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕೆರೆಗಳನ್ನು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕೆರೆಗಳನ್ನು ತುಂಬಿಸಲು 20 ದಿನಗಳವರೆಗೆ ನೀರು ಪೂರೈಸಲಾಗುತ್ತದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ಈ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಉದ್ದೇಶಕ್ಕೆ ಬಳಸುವಂತಿಲ್ಲ ಹಾಗೂ ಅನಧಿಕೃತವಾಗಿ ಪಂಪ್‌ಸೆಟ್ ಬಳಸಿ ನೀರು ಹರಿಸಿಕೊಂಡಿದ್ದು ಕಂಡುಬಂದಲ್ಲಿ ನೀರಾವರಿ ಕಾಯ್ದೆ-1965 ರ ಪ್ರಕಾರ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು, ಕೆಬಿಜೆಎನ್‌ಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಅವರಿಗೆ ಆದೇಶಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.