ADVERTISEMENT

ಆದಿಲ್‌ಶಾಹಿ ಕಾಲದ 157 ಬಾವಿಗೆ ಮರುಜೀವ

ಕೃಷ್ಣಾ ನದಿ ಅವಲಂಬನೆ ತಗ್ಗಿಸಲು ಜಿಲ್ಲಾಡಳಿತ ಚಿಂತನೆ

ಸುಭಾಸ ಎಸ್.ಮಂಗಳೂರ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
ವಿಜಯಪುರ ಗ್ಯಾಂಗ್‌ಬಾವಡಿಯಲ್ಲಿರುವ ಹೂಳು ತುಂಬಿರುವ ಬಾವಿಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರ ಗ್ಯಾಂಗ್‌ಬಾವಡಿಯಲ್ಲಿರುವ ಹೂಳು ತುಂಬಿರುವ ಬಾವಿಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ನಗರದ ವಿವಿಧ ಬಡಾವಣೆಗಳಲ್ಲಿ ಆದಿಲ್‌ಶಾಹಿ ಕಾಲದಲ್ಲಿ ನಿರ್ಮಾಣಗೊಂಡಿರುವ 157 ಬಾವಿಗಳನ್ನು ಜೀರ್ಣೋದ್ಧಾರಗೊಳಿಸಿ, ಬಾವಿಯ ನೀರನ್ನು ಬಳಸುವ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದೆ.

ಇದಕ್ಕೆ ಪಾಲಿಕೆ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯಲ್ಲಿ ಲಭ್ಯ ಇರುವ ಅನುದಾನವನ್ನು ಬಳಸಲಾಗುವುದು. ಈ ಇಲಾಖೆಗಳ ಅಧಿಕಾರಿಗಳಿರುವ 7 ತಂಡಗಳನ್ನು ರಚಿಸಲಾಗಿದೆ. ಇವರಿಗೆ ಬಾವಿಗಳನ್ನು ಗುರುತಿಸುವ ಮತ್ತು ಒತ್ತುವರಿ ತೆರವುಗೊಳಿಸುವ ಹೊಣೆ ವಹಿಸಲಾಗಿದೆ. ಈ ತಂಡಗಳು ಈಗಾಗಲೇ 147 ಬಾವಿ ಗುರುತಿಸಿವೆ.

ನಗರಕ್ಕೆ ಸದ್ಯ ಭೂತನಾಳ ಕೆರೆಯಿಂದ 8 ಎಂಎಲ್‌ಡಿ ಹಾಗೂ ಕೃಷ್ಣಾ ನದಿಯಿಂದ ಕೊಲ್ಹಾರ ಮೊದಲ ಹಾಗೂ ಎರಡನೇ ಹಂತದಿಂದ ಕ್ರಮವಾಗಿ 8 ಮತ್ತು 60 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ಶುದ್ಧೀಕರಿಸಿದ ನೀರನ್ನೇ ನಗರದಲ್ಲಿರುವ ಉದ್ಯಾನಗಳಿಗೂ ಹರಿಸಲಾಗುತ್ತಿದೆ.ಈ ನೀರಿನ ಬದಲು ಉದ್ಯಾನಗಳಿಗೆ ಬಾವಿ ನೀರನ್ನು ಬಳಸಬೇಕು ಎಂಬ ಉದ್ದೇಶ ಈ ಯೋಜನೆಯದ್ದು.

ADVERTISEMENT

‘ಬಾವಿಗಳಲ್ಲಿನ ನೀರಿನ ಗುಣಮಟ್ಟ ಪರಿಶೀಲಿಸಿ, ಯೋಗ್ಯವಾಗಿದ್ದಲ್ಲಿ ಕುಡಿಯುವುದಕ್ಕೂ ಬಳಸಲಾಗುವುದು. ಈ ಮೂಲಕ ಕೃಷ್ಣಾ ನದಿ ನೀರಿನ ಮೇಲಿನ ಅವಲಂಬನೆ ಸ್ವಲ್ಪ ಮಟ್ಟಿಗೆ ತಗ್ಗಲಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಮೊದಲಿಗೆ ಬಾವಿಗಳಿಂದ ತ್ಯಾಜ್ಯ ತೆರವುಗೊಳಿಸುವುದು, ಎರಡನೆಯ ಹಂತದಲ್ಲಿ ಅವುಗಳನ್ನು ಪುನಃಶ್ಚೇತನಗೊಳಿಸುವುದು, ಮೂರನೆಯ ಹಂತದಲ್ಲಿ ಒತ್ತುವರಿ ತೆರವುಗೊಳಿಸಿ ಬಳಕೆ ಯೋಗ್ಯ ಮಾಡುವುದು’ ಎಂದು ಹೇಳಿದರು.

‘ಕೆಲವು ಬಾವಿಗಳ ಮಾಲೀಕತ್ವದ ಪ್ರಶ್ನೆ ಎದುರಾಗಿದೆ. ಅವು ಖಾಸಗಿಯವರಿಗೆ ಸೇರಿದ್ದೇ ಅಥವಾ ವಕ್ಫ್‌ಗೆ ಸೇರಿ
ವೆಯೇ ಎಂಬುದನ್ನು ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ’ ಎಂದರು.

* ಬಾವಿಗಳನ್ನು ಜೀರ್ಣೋದ್ಧಾರಗೊಳಿಸಿ, ಆ ನೀರನ್ನು ಕುಡಿಯಲು ಅಥವಾ ಸಮೀಪದ ಉದ್ಯಾನಗಳಲ್ಲಿ ಗಿಡಗಳನ್ನು ಬೆಳೆಸಲು ಬಳಸಿಕೊಳ್ಳಲಾಗುವುದು.

- ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.