ವಿಜಯಪುರ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರದ ತಯಾರಿ ನಡೆಸಿದೆ. ಮುಂದಿನ ವಾರ ಜಿಲ್ಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ‘ಪ್ರಜಾಧ್ವನಿ’ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಈ ನಡುವೆ ಜಿಲ್ಲೆಯ ವಿವಿಧ ಕ್ಷೇತ್ರಕ್ಕೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ಅಳೆದು, ತೂಗಿ ಹೆಸರನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದ್ದಾರೆ.
ಕೆಪಿಸಿಸಿಯಿಂದ ಕಳೆದ ಎರಡು ತಿಂಗಳ ಮೊದಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯ ಎಂಟು ಕ್ಷೇತ್ರಕ್ಕೆ 69 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಜಯಪುರ ನಗರ ಕ್ಷೇತ್ರಕ್ಕೆ ಬರೋಬ್ಬರಿ 26, ನಾಗಠಾಣ ಮೀಸಲು ಕ್ಷೇತ್ರಕ್ಕೆ 14, ದೇವರಹಿಪ್ಪರಗಿ 10, ಸಿಂದಗಿ 10, ಬಸವನ ಬಾಗೇವಾಡಿ 3, ಮುದ್ದೇಬಿಹಾಳ 3 ಮತ್ತು ಬಬಲೇಶ್ವರ 2 ಹಾಗೂ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ಒಂದು ಅರ್ಜಿ ಸಲ್ಲಿಕೆಯಾಗಿತ್ತು.
‘ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪೂರ್ವಾಪರ, ಸೋಲು–ಗೆಲುವಿನ ಸಾಧ್ಯತೆಯನ್ನು ಅವಲೋಕನ ಮಾಡಿ, ಪರಿಶೀಲಿಸಿ ಪ್ರತಿ ಕ್ಷೇತ್ರದಿಂದ ತಲಾ ಮೂರು, ನಾಲ್ಕು ಹೆಸರನ್ನು ರಾಜ್ಯ ಕಾಂಗ್ರೆಸ್ ಚುನಾವಣಾ ಕಮಿಟಿಗೆ ಕಳುಹಿಸಲಾಗಿದೆ. ಚುನಾವಣಾ ಕಮಿಟಿ ಶೀಘ್ರದಲ್ಲೇ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಮಾಡಲಿದೆ. ಸ್ಕ್ರೀನಿಂಗ್ ಕಮಿಟಿ ಅಂತಿಮವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ‘ಪ್ರಜಾವಾಣಿ’ಗೆ ಖಚಿತ ಪಡಿಸಿದರು.
ಹಾಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ. ಉಳಿದ ಕ್ಷೇತ್ರಗಳಿಗೆ ತಲಾ ಮೂವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಖಚಿತ ಮೂಲಗಳಿಂದ ತಿಳಿದುಬಂದಿದೆ.
ಟಿಕೆಟ್ ಖಚಿತ
ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಹೊರತು ಪಡಿಸಿ ಬೇರಾರು ಅರ್ಜಿ ಕೂಡ ಹಾಕಿರಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇರದ ಕಾರಣ ಯಶವಂತರಾಯಗೌಡ ಅವರ ಹೆಸರೊಂದನ್ನೇ ರಾಜ್ಯ ಚುನಾವಣಾ ಕಮಿಟಿಗೆ ಕಳುಹಿಸಲಾಗಿದೆ.
ಬಬಲೇಶ್ವರ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹಾಗೂ ಶಾಸಕ ಶಿವಾನಂದ ಪಾಟೀಲ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಕ್ಷೇತ್ರದ ಹಾಲಿ ಶಾಸಕರಾದ ಎಂ.ಬಿ.ಪಾಟೀಲ ಅವರ ಹೆಸರು ಮಾತ್ರ ಸ್ಕ್ರೀನಿಂಗ್ ಕಮಿಟಿಗೆ ಸಲ್ಲಿಕೆಯಾಗಿದೆ. ಉಳಿದಂತೆ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ ಅವರ ಹೆಸರು ಮಾತ್ರ ಅಂತಿಮಗೊಳಿಸಲಾಗಿದೆ. ಈ ಮೂವರು ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲೇ ಮರಳಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಉಳಿದ ಕ್ಷೇತ್ರಗಳಿಗೆ
ವಿಜಯಪುರ ನಗರ ಕ್ಷೇತ್ರಕ್ಕೆ ಕಳೆದ ಚುನಾವಣೆಯಲ್ಲಿ ಅಪರಾಜಿತ ಅಭ್ಯರ್ಥಿಯಾಗಿರುವ ಅಬ್ದುಲ್ ಹಮೀದ್ ಮುಶ್ರೀಫ್ ಹೆಸರು ಮುಂಚೂಣಿಯಲ್ಲಿದ್ದು, ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಉಳಿದಂತೆ ಮಾಜಿ ಶಾಸಕ ಮಕ್ಬುಲ್ ಬಾಗವಾನ ಮತ್ತು ಮಹಮ್ಮದ್ ರಫೀಕ್ ಟಪಾಲ್ ಹೆಸರನ್ನೂ ಕಳುಹಿಸಲಾಗಿದೆ.
ಮುದ್ದೇಬಿಹಾಳ
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಸಿ.ಎಸ್.ನಾಡಗೌಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಕುರುಬ ಸಮಾಜದ ಮುಖಂಡ ಮಲ್ಲಿಕಾರ್ಜುನ ಮದರಿ ಹೆಸರನ್ನು ಮಾತ್ರ ರಾಜ್ಯ ಚುನಾವಣಾ ಕಮಿಟಿಗೆ ಹೋಗಿದೆ.
ಸಿಂದಗಿ
ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಉಪ ಚುನಾವಣೆಯಲ್ಲಿ ಸೋಲುಂಡಿರುವ ಅಭ್ಯರ್ಥಿ ಅಶೋಕ ಮನಗೂಳಿ ಹಾಗೂ ಮುಖಂಡರಾದ ವಿಠಲ ಕೋಳೂರ, ರಾಕೇಶ ಕಲ್ಲೂರ ಹೆಸರನ್ನು ಕಳುಹಿಸಲಾಗಿದೆ.
ನಾಗಠಾಣ
ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಾಜಿ ಶಾಸಕರೂ ಆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ.ರಾಜು ಆಲಗೂರ ಮತ್ತು ಮಾಜಿ ಶಾಸಕ ವಿಠಲ ಕಟಕದೊಂಡ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ದೇವರಹಿಪ್ಪರಗಿ:
ದೇವರಹಿಪ್ಪರಗಿ ಕ್ಷೇತ್ರಕ್ಕೆ ಮೂರಲ್ಲ, ನಾಲ್ಕು ಹೆಸರುಗಳನ್ನು ರಾಜ್ಯ ಚುನಾವಣಾ ಕಮಿಟಿಗೆ ಕಳುಹಿಸಲಾಗಿದೆ.
ಆನಂದ ದೊಡ್ಡಮನಿ, ಡಾ.ಪ್ರಭುಗೌಡ ಪಾಟೀಲ, ಬಿ.ಎಸ್.ಪಾಟೀಲ ಯಾಳಗಿ ಮತ್ತು ಶರಣಪ್ಪ ಸುಣಗಾರ ಅವರ ಹೆಸರನ್ನು ಕಳುಹಿಸಲಾಗಿದೆ.
ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಲಾಗಿದ್ದ ಸುಜಾತಾ ಕಳ್ಳಿಮನಿ ಮತ್ತು ಗೌರಮ್ಮ ಮುತ್ತತ್ತಿ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲವಾದರೂ ಸಹ ಟಿಕೆಟ್‌ಗಾಗಿ ಪಕ್ಷದ ವರಿಷ್ಠರ ಬಳಿ ಲಾಭಿ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.