ವಿಜಯಪುರ:ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ಶೇ 5ರಷ್ಟು ನಿಧಿಯಲ್ಲಿ ಶ್ರವಣ ಯಂತ್ರಗಳ ಖರೀದಿಗೆ ಸಹಾಯ ಮಾಡುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.
ನಗರದ ಅಶ್ವಿನಿ ಬಿದರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ (ಡಿಇಐಸಿ), ಆರೋಗ್ಯ ಇಲಾಖೆ, ಸುಭಾಶ್ ಬಿದರಿ ಮೆಮೊರಿಯಲ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನ ಕಾರ್ಯಕ್ರಮ ಹಾಗೂ ಶ್ರವಣ ದೋಷ ಚಿಕಿತ್ಸೆಗೆ ಅತ್ಯಾಧುನಿಕ ಡಯಗ್ನೋಸ್ಟಿಕ್ ಬೆರಾ ಹಾಗೂ ಸೌಂಡ್ ಪ್ರೂಫ್ ರೂಂ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾಗೃತಿ ಜಾಥಾ: ಅಶ್ವಿನಿ ಆಸ್ಪತ್ರೆಯ ಮುಂಭಾಗದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ವರೆಗೆ ವಾಕ್ ಮತ್ತು ಶ್ರವಣ ತೊಂದರೆಗಳ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಗೋವಿಂದ ರೆಡ್ಡಿ ಚಾಲನೆ ನೀಡಿದರು.
ಬಡ ರೋಗಿಗಳ ಉಪಚಾರಕ್ಕಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಒದಗಿಸುವುದಾಗಿ ಗೋವಿಂದ ರೆಡ್ಡಿ ತಿಳಿಸಿದರು.
ಅಶ್ವಿನಿ ನರ್ಸಿಂಗ್ ಕಾಲೇಜಿನ ಸುಮಾರು 150 ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ಬಿದಿ ಆಸ್ಪತ್ರೆಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.
ಡಿಎಚ್‌ಒ ಕಚೇರಿಯಲ್ಲಿ ವಾಕ್ ಹಾಗೂ ಶ್ರವಣ ದೋಷಗಳ ಕುರಿತು ವಿಚಾರ ಸಂಕಿರಣ ನಡೆಯಿತು.
ರೆಡ್‌ಕ್ರಾಸ್ ಸಂಸ್ಥೆಯ ಚೇರಮನ್ ಡಾ.ಎಲ್.ಎಚ್.ಬಿದರಿ, ಡಾ. ಶ್ರೀಶೈಲ ಗಿಡಗಂಟಿ, ಡಾ.ಸದಾಶಿವ, ಡಾ. ರವಿ, ಡಾ.ತೇಜಸ್ವಿನಿ ಎಚ್.ಎಸ್. ಮಾತನಾಡಿದರು.
ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಡಿಎಂಒ ಡಾ.ಜೇಬುನ್ನೀಸಾ ಬೀಳಗಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಹೇಶ ನಾಗರಬೆಟ್ಟ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡಮನಿ, ಆರ್‌ಎಂಒ ಡಾ.ಎಸ್.ಜಿ.ಮುರನಾಳ ಇದ್ದರು.
ಉಚಿತ ಶಿಬಿರ: ಮಾರ್ಚ್ 7ರಂದು ನಗರದ ಡಾ.ಬಿದರಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ವಾಕ್ ಮತ್ತು ಶ್ರವಣದೋಷ ನಿವಾರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.