ವಿಜಯಪುರ:ವಸಂತ ಋತುವಿನ ಆರಂಭ. ಚೈತ್ರ ಶುಕ್ಲ ಪಾಡ್ಯದ ದಿನವೇ ಚಾಂದ್ರಮಾನ ಯುಗಾದಿ. ಪಂಚಾಂಗದ ಪ್ರಕಾರ ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭದ ದಿನವಿದು. ಈ ಬಾರಿ ಶನಿವಾರ (ಏ.6) ಆಚರಣೆಗೊಳ್ಳುತ್ತಿದೆ.
ಕನಸುಗಳಿಗೆ ಶ್ರೀಕಾರದ ಮುದ್ರೆಯೊತ್ತುವ ದಿನ. ಹೊಸ ವಾಹನದ ಖರೀದಿಗೆ ಶುಭ ದಿನ. ಹೊಸ ಬಟ್ಟೆ ತೊಟ್ಟು, ಎಲ್ಲೆಲ್ಲೂ ಸಂಭ್ರಮ ಸಡಗರದಿಂದ ಸಂಚರಿಸುವ ದಿನವಿದು.
ಪ್ರಕೃತಿಯಲ್ಲಿನ ಬದಲಾವಣೆಯ ಸಂಕೇತವೇ ಯುಗಾದಿ. ಗಿಡ–ಮರಗಳು ಎಲೆಗಳನ್ನು ಉದುರಿಸಿಕೊಂಡು ಹೊಸ ಚಿಗುರು, ಹೂವಿನೊಂದಿಗೆ ರಾರಾಜಿಸುವ ರಮ್ಯ ಚೈತ್ರ ಕಾಲವಿದು.
ಜಿಲ್ಲೆಯ ಜನರ ಪಾಲಿಗೆ ಹೆಚ್ಚು ಕಹಿ ನೀಡಿದ ವಿಳಂಬಿ ಸಂವತ್ಸರಕ್ಕೆ ತೆರೆ ಬಿದ್ದಿದೆ. ಸಹಸ್ರ, ಸಹಸ್ರ ಭರವಸೆ, ಕನಸುಗಳೊಂದಿಗೆ ವಿಕಾರಿ ಸಂವತ್ಸರದ ಸ್ವಾಗತಕ್ಕೆ ಸಿದ್ಧತೆಗಳು ಬಿರುಸಿನಿಂದ ನಡೆದಿವೆ.
ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಅಮಾವಾಸ್ಯೆ ಬಳಿಕ ಹಬ್ಬದ ಆಚರಣೆಗೆ ಹೂವು–ಬೇವು, ಸಕ್ಕರೆ ಹಾರ, ಬೇವು–ಬೆಲ್ಲದ ಮಿಶ್ರಣ ಖರೀದಿಸಿದ ದೃಶ್ಯಗಳು ಶುಕ್ರವಾರ ಎಲ್ಲೆಡೆ ಗೋಚರಿಸಿದವು.
ಮುಸ್ಸಂಜೆ ವೇಳೆಗೆ ಬಜಾರ್‌ಗಳು ಕಿಕ್ಕಿರಿದ ಜನದಟ್ಟಣೆಯಿಂದ ಕೂಡಿದ್ದವು. ಜವಳಿ ಅಂಗಡಿಗಳು ಜನರಿಂದ ತುಂಬಿ ತುಳುಕಿದವು. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಮಹಾಪೂರವೇ ಹರಿಯಿತು. ಹೊಸ ವರ್ಷಾಚರಣೆಯ ಸಂದೇಶಗಳು ಬಿತ್ತರಗೊಂಡಿದ್ದು ವಿಶೇಷ.
ಪುಣ್ಯಸ್ನಾನ:
ಯುಗಾದಿ ಅಮಾವಾಸ್ಯೆಯ ದಿನವಾದ ಶುಕ್ರವಾರ ಸಂಪ್ರದಾಯದಂತೆ ಕೃಷ್ಣೆ, ಭೀಮೆ ತಟದ ಹಿನ್ನೀರಿನಲ್ಲಿ ‘ದೇವರುಗಳ ಪುಣ್ಯಸ್ನಾನ’ ನಡೆಯಿತು. ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ ಜಿಲ್ಲೆಯ ವಿವಿಧೆಡೆಯ ದೇವರುಗಳ ಪುಣ್ಯಸ್ನಾನ ಶಾಸ್ತ್ರೋಕ್ತವಾಗಿ ನಡೆಯಿತು.
ದೇವರ ಪುಣ್ಯಸ್ನಾನಕ್ಕೆ ವಿವಿಧೆಡೆಯಿಂದ ಬಂದಿದ್ದ ಭಕ್ತ ಸಮೂಹ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿ, ವಿಕಾರಿ ಸಂವತ್ಸರದಲ್ಲಿ ಎಲ್ಲೆಡೆ ಮಳೆ–ಬೆಳೆ ಚಲೋ ಆಗಿ, ಸಮೃದ್ಧಿ ನೆಲೆಸಲಿ ಎಂಬ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ತಮ್ಮೂರುಗಳಿಗೆ ಮರಳಿತು.
ವಿಜಯಪುರದ ಐತಿಹಾಸಿಕ ತಾಜ್‌ಬಾವಡಿ ಆವರಣದಲ್ಲೂ ಶುಕ್ರವಾರ ದೇವರ ಪುಣ್ಯ ಸ್ನಾನ ನಡೆಯಿತು. ಜಾಲಗೇರಿ, ಅರಕೇರಿ, ಸಿದ್ದಾಪುರ, ಅಲಿಯಾಬಾದ್ ಸೇರಿದಂತೆ ವಿವಿಧ ಊರುಗಳಿಂದ ಜನಸ್ತೋಮ ತಮ್ಮೂರ ದೇವರ ಮೂರ್ತಿ, ಪಾಲಿಕೆಯೊಂದಿಗೆ ಬಂದಿತ್ತು.
ಹಳೆಯ ನೀರು, ಬಟ್ಟೆ ವಿಸರ್ಜಿಸಿದ ಭಕ್ತ ಸಮೂಹ, ಹೊಸ ಬಟ್ಟೆ, ಹೊಸ ನೀರು ತುಂಬಿಕೊಂಡು, ಯುಗಾದಿ ಆಚರಣೆಗಾಗಿ ತಮ್ಮೂರುಗಳಿಗೆ ಮರಳಿತು. ಹೋಳಿಗೆ, ಬೆಲ್ಲ, ಬಾನ, ಜೋಳದ ಅಂಬಲಿಯ ವಿಶೇಷ ನೈವೇದ್ಯ ದೇವರಿಗೆ ಅರ್ಪಣೆಯಾಯ್ತು.
ಅಭ್ಯಂಜನ; ಸಕ್ಕರೆ ಹಾರ
‘ಯುಗಾದಿ ಹಬ್ಬದ ದಿನ ನಸುಕಿನಲ್ಲೇ ಮಕ್ಕಳಿಗೆ ಅಭ್ಯಂಜನ ಸ್ನಾನ ಮಾಡಿಸುತ್ತೇವೆ. ಮನೆ–ಮಂದಿಯೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತೇವೆ. ಮುತ್ತೈದೆಯರು ಆರತಿ ಎತ್ತುತ್ತೇವೆ.
ಇದೇ ಸಂದರ್ಭ ಮಕ್ಕಳಿಗೆ ಶ್ಯಾವಿಗೆ ಪಾಯಸದ ಸಿಹಿ ತಿನ್ನಿಸಿ, ಬೇವು–ಬೆಲ್ಲ ಹಂಚುತ್ತೇವೆ. ದೇವರಿಗೆ ಅರ್ಪಿಸಿದ ಸಕ್ಕರೆ ಹಾರವನ್ನು ಮಕ್ಕಳು ತಮ್ಮ ಕೊರಳುಗಳಿಗೆ ಹಾಕಿಕೊಂಡು ಸವಿಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ.
ನಂತರ ದೇಗುಲಗಳಿಗೆ ತೆರಳಿ ದೇವರ ದರ್ಶನಾಶೀರ್ವಾದ ಪಡೆಯುತ್ತೇವೆ. ಮುಸ್ಸಂಜೆ ವೇಳೆಗೆ ಆಗಸದಲ್ಲಿ ಚಂದ್ರ ದರ್ಶನಕ್ಕೆ ಕಾತರದಿಂದ ಕಾಯುತ್ತೇವೆ. ಇದೇ ಸಂದರ್ಭ ಬೇಲದ ಹಣ್ಣಿನ ಪಾನಕ ಸೇವಿಸಿ ಸಂಭ್ರಮಿಸುತ್ತೇವೆ’ ಎಂದು ನಗರದ ಗೃಹಿಣಿಯರಾದ ಸುಜಾತಾ, ಶಾರದಾ, ಶಕುಂತಲಾ ಯುಗಾದಿ ಆಚರಣೆಯ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.