ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹುಳಿಮಾವು ವಾರ್ಡ್‌ನ ಬಡಾವಣೆಗಳ ಮತದಾರರನ್ನು ಪಕ್ಕದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಆರೋಪಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ’ಹುಳಿಮಾವು ವಾರ್ಡ್‌ನ ಅಕ್ಷಯ ಗಾರ್ಡನ್, ಶಿರಡಿ ಸಾಯಿ ನಗರ, ಹಿರಾನಂದಿನಿ ಅಪಾರ್ಟ್‌ಮೆಂಟ್ ಮುಂತಾದ ಪ್ರದೇಶಗಳ ಸುಮಾರು 7,500 ಸಾವಿರ ಮತದಾರರ ಹೆಸರು ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಂಡುಬಂದಿದೆ. ಇದು ಅಕ್ಷಮ್ಯ. ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಅನ್ಯ ಉದ್ದೇಶವಿದೆಯೋ ತಿಳಿಯದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವಾಸಿಗಳ ದೂರಿನ ಅನ್ವಯ ಬಿಬಿಎಂಪಿ, ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಆದರೂ ಪರಿಷ್ಕೃತ ಮತದಾರರ ಪಟ್ಟಿಯನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾಯಿಸಿಲ್ಲ. ಈ ಸಂಬಂಧ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದರು.
ವಾರ್ಡ್ ಮರುವಿಂಗಡಣೆ ವೇಳೆ ವಿಧಾನಸಭಾ ಕ್ಷೇತ್ರದ ಗಡಿಗಳನ್ನು ಸರಿಯಾಗಿ ಗುರುತಿಸಲಾಗಿದೆಯಾದರೂ, ಮತದಾರರನ್ನು ಮಾತ್ರವೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ಮತ್ತು ಕಾಳೇನ ಅಗ್ರಹಾರ ವಾರ್ಡ್‌ಗಳಿಗೆ ವರ್ಗಾಯಿಸಿರುವುದು ಏಕೆ ಎಂದು ಪ್ರಶ್ನಿಸಿದರು.
‘ಗಡಿರೇಖೆ ಸ್ಪಷ್ಟ, ಗೊಂದಲ ಇಲ್ಲ’
ವಿಧಾನಸಭಾ ಕ್ಷೇತ್ರದ ಗಡಿ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ. ಈ ಹಿಂದೆ ಬೊಮ್ಮನಹಳ್ಳಿ ನಗರಸಭೆಗೆ ಸೇರ್ಪಡೆ ಆಗಿದ್ದ ಪ್ರದೇಶಗಳು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ.
ಬೇಗೂರು ಪಂಚಾಯಿತಿಗೆ ಒಳಪಟ್ಟಿದ್ದ ಪ್ರದೇಶಗಳು ಬೆಂಗ ಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟಿವೆ. 2008ರಿಂದಲೂ ಈ ಮತದಾರರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಾ ಬರುತ್ತಿದ್ದಾರೆ. ಗಡಿರೇಖೆ ಸ್ಪಷ್ಟವಾಗಿದ್ದು, ಯಾವುದೇ ಗೊಂದಲವಿಲ್ಲ.ಆದರೆ, ಸತೀಶ್ ರೆಡ್ಡಿ
ಅವರು ಈ ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಶಾಸಕ ಎಂ.ಕೃಷ್ಣಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.