ನಾರಾಯಣಪುರ: ಮಂಗಳವಾರ ಬಸವಸಾಗರ ಜಲಾಶಯದ 25 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನಿರಂತರವಾಗಿ 1.61 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ.
ಮಂಗಳವಾರ ಕೂಡ ಆಲಮಟ್ಟಿ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್ ನೀರಿನ ಒಳಹರಿವು ಮುಂದುವರಿದಿದೆ. ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಆಗ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತದೆ. ಆಗ ಅಲ್ಲಿನ ಅಧಿಕಾರಿಗಳು ಬಸವಸಾಗರಕ್ಕೆ ನೀರು ಹರಿಬಿಡುವ ಪ್ರಮಾಣವನ್ನು ಹೆಚ್ಚಿಸುತ್ತಾರೆ. ಒಂದೊಮ್ಮೆ ಒಳಹರಿವು ಕಡಿಮೆಯಾದರೆ ಕಡಿಮೆಗೊಳಿಸುತ್ತಾರೆ. ಪ್ರತಿ ಗಂಟೆಗೊಮ್ಮೆ ಉಭಯ ಜಲಾಶಯಗಳ ಅಧಿಕಾರಿಗಳು ನದಿಗೆ ನೀರು ಹರಿಸುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಮಾಹಿತಿಯಂತೆ ಗರಿಷ್ಠ 492.25 ಮೀಟರ್ ಎತ್ತರದಲ್ಲಿ 33.313 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 491.39 ಮೀಟರ್ ನೀರಿದ್ದು, 29.44 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ.
ವಿದ್ಯುತ್ ಉತ್ಪಾದನೆ: ಜಲಾಶಯಕ್ಕೆ ಹೊಂದಿಕೊಂಡಿರುವ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದಿಂದ 12 ಮೆಗಾವಾಟ್ ವಿದ್ಯುತ್ ಉತ್ಪಾದನೆಯೊಂದಿಗೆ 6 ಸಾವಿರ ಕ್ಯುಸೆಕ್ ನೀರನ್ನು ಬಳಸಿ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ನದಿ ಪಾತ್ರದ ಬೋರುಕಾ ಜಲವಿದ್ಯುತ್ ಸ್ಥಾವರದಿಂದಲೂ 24 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.