ಯಾದಗಿರಿ: ಜಿಲ್ಲೆಯ 18 ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಈಚೆಗೆ ಪ್ರೌಢಶಾಲೆಗಳಾಗಿ ಉನ್ನತೀಕರಣ ಮಾಡಿದ್ದು, ಗ್ರಾಮಸ್ಥರ ಖುಷಿಗೆ ಪಾರವೇ ಇಲ್ಲದಂತೆ ಆಗಿದೆ.
2022-23ನೇ ಸಾಲಿನಲ್ಲಿರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಈಗಾಗಲೇ ಆಯಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ರಾಜ್ಯದಲ್ಲಿ 95 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿದ್ದು, ಅದರಲ್ಲಿ ಜಿಲ್ಲೆಯ 18 ಶಾಲೆಗಳು ಸೇರಿವೆ.
2016–17 ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಜಿಲ್ಲೆಯಲ್ಲಿ ಆರು ಪ್ರೌಢಶಾಲೆಗಳನ್ನು ಘೋಷಣೆ ಮಾಡುವ ಮುನ್ನವೇ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಇದರಿಂದ ಆ ಕಟ್ಟಡಗಳು ಪಾಳು ಬಿದ್ದಿದ್ದಿವು. ಈಗ ಅವುಗಳ ಉಪಯೋಗದ ಜೊತೆಗೆ ಒಟ್ಟಾರೆ 18 ಶಾಲೆಗಳನ್ನು ಉನ್ನತೀಕರಿಸಿದ್ದರಿಂದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ.
ಯಾವ್ಯಾವು ಶಾಲೆಗಳಿಗೆ ಮಂಜೂರು:ಜಿಲ್ಲೆಯಲ್ಲಿ ಆರು ತಾಲ್ಲೂಕಿನ 18 ಶಾಲೆಗಳಿಗೆ ಪ‍್ರೌಢಶಾಲೆಯ ಭಾಗ್ಯ ಲಭಿಸಿದಂತೆ ಆಗಿದೆ. ಆ ಗ್ರಾಮಗಳಲ್ಲಿ ಪ್ರೌಢಶಾಲೆಗಳು ಇಲ್ಲದಿದ್ದರಿಂದ ಐದಾರು ಕಿ.ಮೀ ದೂರ ಪ್ರಯಾಣಿಸಿ ವ್ಯಾಸಂಗ ಮಾಡಬೇಕಿತ್ತು. ಈಗ ಅವುಗಳಿಗೆ ಮುಕ್ತಿ ಸಿಕ್ಕಿದೆ.
ಶಹಾಪುರ ತಾಲ್ಲೂಕಿನ ಗಂಗನಾಳ, ಬೀರನೂರ, ವಡಗೇರಾ ತಾಲ್ಲೂಕಿನ ಟಿ.ವಡಗೇರಾ, ಐಕೂರು, ಕಾಡಂಗೇರಾ (ಬಿ), ತುಮಕೂರು, ಗುರುಮಠಕಲ್ ತಾಲ್ಲೂಕಿನ ನಸಲವಾಯಿ, ಸುರಪುರ ತಾಲ್ಲೂಕಿನ ಗೌಡಗೇರಾ, ಮಂಜಲಾಪುರ, ಚಂದಾಪುರ, ಹುಣಸಗಿ ತಾಲ್ಲೂಕಿನ ಯಡಹಳ್ಳಿ, ಬೊಮ್ಮಗುಡ್ಡ, ಯಾದಗಿರಿ ತಾಲ್ಲೂಕಿನ ಬಾಡಿಯಾಳ, ಮುಂಡರಗಿ, ಮುದ್ನಾಳ, ಬಂದಳ್ಳಿ, ಬೆಳಗೇರಾ, ಕಣೇಕಲ್ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಮೇಲ್ದರ್ಗೇರಿಸಲಾಗಿದೆ.
ಕಟ್ಟಡ ನಿರ್ಮಾಣವಾಗಿದ್ದ ಶಾಲೆಗಳು:ಜಿಲ್ಲೆಯ 6 ಗ್ರಾಮಗಳಲ್ಲಿ ತರಗತಿ ಮಂಜೂರು ಮೊದಲೇ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಇದರಿಂದ ಆ ಕಟ್ಟಡಗಳು ಅನೈತಿಕ ಚಟುವಟಿಕೆಗೆ ಬಳಕೆಯಾಗುತ್ತಿದ್ದವು. ಕಿಡಗೇಡಿಗಳು ವಿದ್ಯುತ್ ಕಳುವು ಮಾಡಿಕೊಂಡು, ಬಾಗಿಲು, ಕಿಟಿಕಿ ಮುರಿದ್ದರು.
₹6 ಕೋಟಿ ವೆಚ್ಚ ಮಾಡಲಾಗಿತ್ತು:ತರಗತಿ ಮಂಜೂರು ಮೊದಲೇ ₹1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಯಾದಗಿರಿ ತಾಲ್ಲೂಕಿನಮುಂಡರಗಿ, ಬಾಡಿಯಾಳ, ಸುರಪುರ ತಾಲ್ಲೂಕಿನ ಗೌಡಗೇರಾ, ಶಹಾಪುರ ತಾಲ್ಲೂಕಿನ ಗಂಗನಾಳ, ವಡಗೇರಾ ತಾಲ್ಲೂಕಿನ ಟಿ.ವಡಗೇರಾ, ಹುಣಸಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮಗಳಲ್ಲಿ 9, 10ನೇ ತರಗತಿ ಮಂಜೂರು ಆಗುವ ಮೊದಲೇ ಕಟ್ಟಡ ನಿರ್ಮಾಣ ಮಾಡಲಾಗಿತ್ತು.ಈ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇತ್ತು. 9, 10ನೇ ತರಗತಿಗೆ ಪಕ್ಕದ ಊರಿಗೆ ಹೋಗಬೇಕಾಗಿತ್ತು. ಆದರೆ, ನಿರ್ಮಿಸಿರುವ ಕಟ್ಟಡ ಮಾತ್ರ ಪಾಳು ಬಿದ್ದಿತ್ತು.
ಗ್ರಾಮಸ್ಥರಿಂದ ಹಣ ಸಂಗ್ರಹ:ಸುರಪುರ ತಾಲ್ಲೂಕಿನ ಗೌಡಗೇರಾ ಗ್ರಾಮದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಜಾಗವನ್ನು ಖರೀದಿ ಮಾಡಿದ್ದಾರೆ. ಜತೆಗೆ ₹1 ಕೋಟಿ ವೆಚ್ಚದಲ್ಲಿ ಕಟ್ಟಡವೂ ನಿರ್ಮಾಣವಾಗಿದೆ.
ಈಗ ಮಂಜೂರು ಆಗಿರುವ ಶಾಲೆಗಲ್ಲಿ 11 ಕಡೆ ಉನ್ನತೀಕರಿಸಲು ತೊಡಕುಗಳಿಲ್ಲ. 7 ಕಡೆ ಮಾತ್ರ ವೀಲಿನ ಪ್ರಕ್ರಿಯೆ ಆರಂಭವಾಗಿದೆ. ಆಯಾ ಗ್ರಾಮದ ಶಾಲೆಗಳ ವಿದ್ಯಾರ್ಥಿಗಳು ಸಮೀಪದ ಗ್ರಾಮಗಳಲ್ಲಿ ದಾಖಲಾಗಿದ್ದಾರೆ. ಈಗ ಅಲ್ಲಿಂದ ಟಿಸಿ ಪಡೆಯಬೇಕಿದೆ. ಕೆಲವು ಕಡೆ ಕೊಠಡಿ ಸಮಸ್ಯೆ ಇದೆ. ಅವುಗಳನ್ನು ನೀಗಿಸಬೇಕಿದೆ.
ಶೀಘ್ರ ಆರಂಭವಾಗಲಿ:ಸರ್ಕಾರವೇನೂ ಉನ್ನತೀಕರಿಸಿ ಆದೇಶ ನೀಡಿದೆ. ಆದರೆ, ಜಿಲ್ಲೆಯ ಶಿಕ್ಷಣಾಧಿಕಾರಿಗಳು ಶೀಘ್ರವೇ ಕೊಠಡಿ, ಶಿಕ್ಷಕರ ವ್ಯವಸ್ಥೆ ಸೇರಿದಂತೆ ತರಗತಿ ಆರಂಭಕ್ಕೆ ಪೂರಕವಾಗಿ ಎಲ್ಲ ಕ್ರಮ ಕೈಗೊಂಡು ಆರಂಭಿಸಬೇಕು. ಇದರಿಂದ ಗ್ರಾಮಸ್ಥರ ನನಸು ಈಡೇರಲಿದೆ. ವಿಳಂಬ ಮಾಡಿದರೆ ನಿರಾಶೆಯಾಗಲಿದೆ. ಕೂಡಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
***
ಈಗಾಗಲೇ ಸರ್ಕಾರದ ಆದೇಶದಂತೆ ಉನ್ನತೀಕರಿಸಿದ ಪ್ರೌಢಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಸರ್ಕಾರ ಅತಿಥಿ ಶಿಕ್ಷಕರನ್ನು ನೀಡಲು ಸೂಚಿಸಿದೆ. ಅದಕ್ಕೆ ತಕ್ಕಂತೆ ತರಗತಿ ಆರಂಭಿಸಲಾಗುವುದು
-ಶಾಂತಗೌಡ ಪಾಟೀಲ, ಡಿಡಿಪಿಐ
***
ಗೌಡಗೇರಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಹೋರಾಟ ಮಾಡಲಾಗಿತ್ತು. ಈಗ ಕನಸು ನನಸಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಪದಾಧಿಕಾರಿಗಳಿಗೂ, ಶಿಕ್ಷಣಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ
-ನಾಗಪ‍್ಪ ಚಿಗರಾಳ, ಕರವೇ ಗ್ರಾಮ ಘಟಕದ ಅಧ್ಯಕ್ಷ ಗೌಡಗೇರಾ
***
ನಮ್ಮ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಸರ್ಕಾರ ಆದೇಶ ನೀಡಿದ್ದು, ನಮಗೆ ಸಂಸತ ತಂದಿದೆ. ಹೆಣ್ಣುಮಕ್ಕಳು ದೂರದೂರಿಗೆ ತೆರಳುವುದು ತಪ್ಪಿದೆ
-ಐಕೂರುಅಶೋಕ, ವರ್ತೂರು ಪ್ರಕಾಶ್ ಯುವ ಘರ್ಜನೆ ಸಂಘಟನೆ ಜಿಲ್ಲಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.