ADVERTISEMENT

ಶಹಾಪುರ: 1,824 ಮನೆಗಳಿಗೆ ನಳ ಜೋಡಣೆಯ ಗುರಿ, ಭರದಿಂದ ಸಾಗಿದ ಕೆಲಸ

₹86.82 ಕೋಟಿ ವೆಚ್ಚದ ಕಾಮಗಾರಿ

ಟಿ.ನಾಗೇಂದ್ರ
Published 24 ಮೇ 2024, 6:04 IST
Last Updated 24 ಮೇ 2024, 6:04 IST
ಶಹಾಪುರ ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹವಿರುವ ನೀರು
ಶಹಾಪುರ ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹವಿರುವ ನೀರು   

ಶಹಾಪುರ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆ ಅಡಿಯಲ್ಲಿ ನಗರ ಪ್ರದೇಶಕ್ಕೆ ನಿರಂತರ 24X7 ಕುಡಿಯುವ ನೀರಿನ ಕಾಮಗಾರಿಯಾದ ಮನೆ ಮನೆಗೆ ನಳ ಸಂಪರ್ಕ ನೀಡುವ ₹ 86.82ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ.

ಕಾಮಗಾರಿಯ ಟೆಂಡರ್ ಹಾಗೂ ಇನ್ನಿತರ ನಿಯಮಾವಳಿಗಳು ಪೂರ್ಣಗೊಂಡಿದ್ದವು. ಆಗ ಲೋಕಸಭೆಯ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಎರಡು ತಿಂಗಳು ಯೋಜನೆಯ ಕಾಮಗಾರಿ ಸ್ಥಗಿತಗೊಂಡಿತು. ಈಗ ನೀತಿ ಸಂಹಿತೆಯನ್ನು ಸರ್ಕಾರ ಸಡಿಲಗೊಳಿಸಿದ್ದರಿಂದ ಆದ್ಯತೆಯ ಮೇಲೆ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದರಿಂದ ಮನೆ ಮನೆಯ ನಳ ಸಂಪರ್ಕದ ಕೆಲಸಕ್ಕೆ ಚಾಲನೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ನಗರಸಭೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಶ್ರಯದಲ್ಲಿ ನಗರದಲ್ಲಿ ಮನೆ ಮನೆಗೆ ನಳ ಜೋಡಣೆಯ ಬಗ್ಗೆ ಸರ್ವೆ ನಡೆಸಿದಾಗ 1,824 ಮನೆಗಳಿಗೆ ನಳ ಜೊಡಣೆಯಾಗಿದೆ. ಎಂಟು ಓವರ್ ಹೆಡ್ ಟ್ಯಾಂಕ್ ಮೂಲಕ 15 ಲಕ್ಷ ಲೀಟರ್ ನೀರು ನೀಡುವ ಗುರಿ ಇದೆ. ತ್ವರಿತವಾಗಿ ಕೆಲಸ ಆರಂಭಿಸಲಾಗುವುದು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಅಲ್ಲದೆ ಅನುಸೂಚಿತ ಪ್ರದೇಶಗಳಾದ ಭೀಮರಾಯನಗುಡಿ, ಕಂಚಲಕವಿ, ಶಾಖಾಪುರ, ಹುಲಕಲ್ ಗ್ರಾಮಗಳಿಗೂ ನಿರಂತರ ಕುಡಿಯುವ ನೀರಿನ ಯೋಜನೆ ಲಭ್ಯವಾಗಿದ್ದು ಅದರಂತೆ ₹22 ಕೋಟಿ ವೆಚ್ಚದಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾಹಿತಿ ನೀಡಿದ್ದಾರೆ.

ಈಗಾಗಲೇ ಭೀಮಾನದಿಂದ ನಗರಕ್ಕೆ ₹ 87 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಬಳಿ ಕೆಲಸ ಭರದಿಂದ ಸಾಗಿದೆ. ಅಲ್ಲದೆ ನದಿಯಿಂದ ಫಿಲ್ಟರ್ ಬೆಡ್ ಕೆರೆಯವರೆಗೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಹುತೇಕವಾಗಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಂತೆ ನಗರಕ್ಕೆ 24X7 ನೀರು ಸರಬರಾಜು ಕಾಮಗಾರಿಗೆ ಚಾಲನೆ ಸಿಗಲಿದೆ. ನೀತಿ ಸಂಹಿತೆ ಸಡಿಲಿಕೆ ಮಾಡಿದ್ದರಿಂದ ಅಗತ್ಯವಾದ ಕೆಲಸಗಳು ವೇಗ ಪಡೆಯಲಿವೆ. ತ್ವರಿತವಾಗಿ ಕೆಲಸ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.