ಯಾದಗಿರಿ: ಈಗ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ ಸುದ್ದಿ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವ ತೆರಿಗೆ ಪಾವತಿದಾರರ ಕಾರ್ಡ್‌ಗಳನ್ನು ಎಪಿಎಲ್‌ಗೆ ವರಿವರ್ತನೆ ಮಾಡಲಾಗಿದೆ. 194 ಸರ್ಕಾರಿ ನೌಕರರಿಗೆ ಆಹಾರ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕಾರ್ಡ್ ಹೊಂದಿದ ಸರ್ಕಾರಿ ನೌಕರರು, ಉದ್ಯಮಿಗಳು, ಖಾಸಗಿ ನೌಕರರಿಗೆ, ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ.
ಜಿಲ್ಲೆಯಲ್ಲಿ 588 ಜನ ತೆರಿಗೆ ಪಾವತಿದಾರರಿದ್ದು, ಅವರ ಬಿಪಿಎಲ್ ಕಾರ್ಡ್‌ಗಳನ್ನು ಬಡತನ ರೇಖೆಯ ಮೇಲೆ (ಎಪಿಎಲ್) ಕಾರ್ಡ್‌ಗಳಾಗಿ ಮಾಡಲಾಗಿದೆ.
45 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಮಾಡಲಾಗಿದ್ದು, 491 ಕಾರ್ಡ್‌ಗಳನ್ನು ಅಮಾನತು ಮಾಡಲಾಗಿದೆ. ಅವರು ಸೂಕ್ತ ದಾಖಲೆ ತೋರಿಸಿ ಚಾಲನೆ ಮಾಡಿಸಿಕೊಳ್ಳಬಹುದು.
ಜಿಲ್ಲೆಯಲ್ಲಿ 402 ನ್ಯಾಯಬೆಲೆ ಅಂಗಡಿಗಳಿವೆ. ಯಾದಗಿರಿ ತಾಲ್ಲೂಕಿನಲ್ಲಿ 85, ಶಹಾಪುರ ತಾಲ್ಲೂಕಿನಲ್ಲಿ 80, ಸುರಪುರ ತಾಲ್ಲೂಕಿನಲ್ಲಿ 83, ಗುರುಮಠಕಲ್ ತಾಲ್ಲೂಕಿನಲ್ಲಿ 59, ವಡಗೇರಾ ತಾಲ್ಲೂಕಿನಲ್ಲಿ 44, ಹುಣಸಗಿ ತಾಲ್ಲೂಕಿನಲ್ಲಿ 51 ನ್ಯಾಯ ಬೆಲೆ ಅಂಗಡಿಗಳಿವೆ.
ಜಿಲ್ಲೆಯ ಅಂತ್ಯೋದಯ ಅನ್ನಯೋಜನೆ (ಎಎವೈ) 28,513 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಡತನ ರೇಖೆಗಿಂತ ಕಡಿಮೆ (ಬಿಪಿಎಲ್) 8,93,987 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸುತ್ತಿದೆ.
ಆದ್ಯತೇತರ ಎಪಿಎಲ್ 4,861 ಪಡಿತರ ಚೀಟಿಗಳಿದ್ದು, ಈ ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳ ಪೈಕಿ ಏಕ ಸದಸ್ಯರ ಪಡಿತರ ಚೀಟಿಗಳಿಗೆ 5 ಕೆಜಿ ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ ₹15 ರಂತೆ ನೀಡಿ ಆಹಾರ ಧಾನ್ಯ ಪಡೆಯಬಹುದಾಗಿದೆ ಎನ್ನುತ್ತವೆ ಆಹಾರ ಇಲಾಖೆ ಮೂಲಗಳು.
ಜಿಲ್ಲೆಯಲ್ಲಿ 194 ಜನ ಸರ್ಕಾರಿ ನೌಕರರಿಗೆ ಬಿಪಿಎಲ್ ಕಾರ್ಡ್ ಹಿಂದುಗಿಸಲು ನೋಟಿಸ್ ನೀಡಲಾಗಿದೆ. 182 ಕಾರ್ಡ್ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. 1 ವಜಾ 6 ಅಮಾನತು 5 ಕಾರ್ಡ್‌ಗಳು ಪರಿಶೀಲನೆ ಹಂತದಲ್ಲಿವೆಅನಿಲಕುಮಾರ ಡವಳಗಿ ಉಪ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಯಾದಗಿರಿ
ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಸರ್ಕಾರ ಆಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಂಡಳಿಗಳು ನಿಗಮಗಳು ಸ್ವಾಯತ್ತ ಸಂಸ್ಥೆಗಳೂ ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ ಸೇವಾ ತೆರಿಗೆ ವ್ಯಾಟ್ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್ ಮ್ಯಾಕ್ಸಿಕ್ಯಾಬ್ ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬ ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲಾ ಕುಟುಂಬಗಳು ಅರ್ಹರಲ್ಲ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.