ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೆಚ್ಚಿನ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಯಾಗಿರುವ ಹತ್ತಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸಲು ಜಿಲ್ಲೆಯಲ್ಲಿ 21 ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಲು 2024-25ನೇ ಸಾಲಿನ ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕದಿಂದ ನವೆಂಬರ್ ಮೊದಲ ವಾರದಲ್ಲೇ ಖರೀದಿ ಆರಂಭವಾಗುವ ಸಾಧ್ಯತೆ ಇದೆ.
ಕಳೆದ ಎರಡ್ಮೂರು ವರ್ಷಗಳಿಂದ ಹತ್ತಿಗೆ ಸೂಕ್ತ ಬೆಲೆ ಇಲ್ಲದೇ ಬೆಳೆಗಾರರು ನಿರಾಸೆಗೊಂಡಿದ್ದಾರೆ. ಅಲ್ಲದೇ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿದೆ. ಜಿಲ್ಲೆಯಲ್ಲಿರುವ ಜಿನ್ನಿಂಗ್ ಮಿಲ್‌ನವರು ಹಾಗೂ ಮಧ್ಯವರ್ತಿಗಳು ಹತ್ತಿಯ ಗುಣಮಟ್ಟದ ಆಧಾರದಲ್ಲಿ ಕನಿಷ್ಠ ₹6,500 ರಿಂದ ಗರಿಷ್ಠ ₹7 ಸಾವಿರವರೆಗೆ ಕ್ವಿಂಟಲ್ ಹತ್ತಿ ಖರೀದಿಸುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದು ಏಕರೆಗೆ ₹30ರಿಂದ 40 ಸಾವಿರ ಖರ್ಚು ಮಾಡಿದವರಿಗೆ ಕ್ವಿಂಟಲ್‌ಗೆ ₹10,000 ಸಿಗದಿರುವುದು ನಷ್ಟಉಂಟು ಮಾಡಿದೆ.
ಮಧ್ಯಮ ಎಳೆ ನೂಲು ಕ್ವಿಂಟಲ್‌ಗೆ ₹7,121, ಉದ್ದನೆಯ ನೂಲು ₹7,521 ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಗೆ ಮುಂದಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹತ್ತಿ ಉತ್ಪನ್ನವನ್ನು ಖರೀದಿಸಲು ಭಾರತೀಯ ಹತ್ತಿ ನಿಗಮದಿಂದ ಜಿಲ್ಲೆಯಲ್ಲಿ ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಘಟಕಗಳನ್ನು ಗುರುತಿಸಲಾಗಿದ್ದು, ಈ ಘಟಕಗಳನ್ನೇ ಮಾರುಕಟ್ಟೆ ಉಪ ಪ್ರಾಂಗಣಗಳೆಂದು ಘೋಷಿಸಲಾಗಿದೆ.
ಬೆಂಬಲ ಬೆಲೆ ಸರಿಯಾಗಿ ದೊರೆಯಲು ರೈತರು ಶೇ 8ರಷ್ಟು ಕನಿಷ್ಠ, ಗರಿಷ್ಠ ಶೇ 12 ರಷ್ಟು ಪ್ರಮಾಣದ ತೇವಾಂಶ ಹತ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ರೈತರಿಂದ ಹತ್ತಿ ಖರೀದಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಸಮಿತಿಗಳು ಹತ್ತಿ ನಿಗಮದಿಂದ ಸಂಪರ್ಕವಿಟ್ಟುಕೊಂಡು ಹೆಚ್ಚಿನವರಿಗೆ ಅನುಕೂಲ ಮಾಡಲು ಹಾಗೂ ನಿಯಮಾನುಸಾರ ಮಾರುಕಟ್ಟೆ ಶುಲ್ಕ ಆಕರಣೆಗೆ ಕ್ರಮ ವಹಿಸಲು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
‘ರೈತರು ಕಡ್ಡಾಯವಾಗಿ ಆಧಾರ್ ಪ್ರತಿ ಮತ್ತು ಪಹಣಿಯಲ್ಲಿ ಹತ್ತಿ ಬೆಳೆ ನಮೂದಾಗಿರುವ ಪಹಣಿಯನ್ನು ತೆಗೆದುಕೊಂಡು ಹತ್ತಿಯನ್ನು ಖುಲ್ಲಾ (ಬಿಡಿ) ರೂಪದಲ್ಲಿ ತರಬೇಕು. ಖರೀದಿಸಿದ ಮೊತ್ತವನ್ನು ನೇರವಾಗಿ ಆಧಾರ್ ಜೋಡಣೆ ಇರುವ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 21 ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಎರಡ್ಮೂರು ದಿನದಲ್ಲಿ ಖರೀದಿ ಕೇಂದ್ರಗಳು ಆರಂಭವಾಗಲಿವೆ.ಯಮನಪ್ಪ ಚಿತ್ತಾಪುರ ಸಹಾಯಕ ನಿರ್ದೇಶಕ ಕೃಷಿ ಮಾರಾಟ ಇಲಾಖೆ ಯಾದಗಿರಿ
ಸರ್ಕಾರ ಸದ್ಯ ನಿಗದಿ ಮಾಡಿರುವ ಹತ್ತಿ ಬೆಂಬಲ ಬೆಲೆ ಸಾಲುವುದಿಲ್ಲ. ಕನಿಷ್ಠ ₹10000 ಬೆಲೆ ನಿಗದಿ ಮಾಡಬೇಕು. ಎಕರೆಗೆ ಸಾವಿರಾರು ರೂಪಾಯಿ ಖರ್ಚಾಗಿದೆಅಶೋಕ ಮಲ್ಲಾಬಾದಿ ರೈತ ಮುಖಂಡ
ಹತ್ತಿ ಕಾರ್ಖಾನೆ ಸ್ಥಾಪನೆಯಾಗಲಿ
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಂತರ ಅತಿ ಹೆಚ್ಚು ಹತ್ತಿ ಬೆಳೆಯುತ್ತಿದ್ದರೂ ಜಿಲ್ಲೆಯ ಬೆಳೆಗಾರರಿಗೆ ಸರಿಯಾದ ಲಾಭ ಸಿಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಬೇರೆ ಜಿಲ್ಲೆಗಳಿಗೆ ತೆರಳಿ ಮಾರಾಟ ಮಾಡುವ ಪರಿಸ್ಥಿತಿ ಇದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಹತ್ತಿ ಬೆಳೆ ಪ್ರಮುಖವಾಗಿದೆ. ಬಯಲು ಭೂಮಿ ನೀರಾವರಿ ಪ್ರದೇಶದಲ್ಲಿಯೂ ಹತ್ತಿ ಬೆಳೆಯಲಾಗುತ್ತದೆ. ಕಡೇಚೂರು–ಬಾಡಿಯಾಳ ಪ್ರದೇಶದಲ್ಲಿ ಹತ್ತಿ ಬೀಜ ಮತ್ತು ಭತ್ತದ ಚೌಡಿನಿಂದ ಏಣಿ ತಯಾರಿಯಾಗುವ ದ್ರಾವಕ ಕೇಂದ್ರ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅದು ಈಡೇರಿಲ್ಲ.
Cut-off box - ಜಿಲ್ಲೆಯ ಹತ್ತಿ ಬಿತ್ತನೆ ಪ್ರದೇಶ 2024–25ನೇ ಸಾಲಿನಲ್ಲಿ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ 81696.93 ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಇತ್ತು. 48674 ಹೆಕ್ಟೇರ್ ಬಿತ್ತನೆಯ ಸಾಧನೆಯಾಗಿದ್ದರೆ ಖುಷ್ಕಿ ಪ್ರದೇಶದಲ್ಲಿ 104599.72 ಗುರಿಯ ಪೈಕಿ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 117988 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಒಟ್ಟಾರೆ 186296.65 ಹೆಕ್ಟೇರ್ ಗುರಿಯಲ್ಲಿ 166662 ಹೆಕ್ಟೇರ್ ಬಿತ್ತನೆಯಾಗಿ ಶೇ 89.46ರಷ್ಟು ಸಾಧನೆಯಾಗಿದೆ.
ಹತ್ತಿ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ 21 ಹತ್ತಿ ಖರೀದಿಗಳನ್ನು ಗುರುತಿಸಲಾಗಿದೆ. ಯಾದಗಿರಿಯ ಮೆ. ರಾಜೇಂದ್ರ ಅಗ್ರೋ ಇಂಡಸ್ಟೀಸ್ ಮೆ.ಎಸ್.ಕೆ.ಇಂಡಸ್ಟ್ರೀಸ್ ಮೆ.ಆರ್.ಆರ್.ಕಾಟನ್ ಇಂಡಸ್ಟ್ರೀಸ್ ಶಹಾಪುರದ ಮಂಜುನಾಥ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಮನಗನಾಳ ಗ್ರಾಮದ ಮೆ. ಸೌದಾಗರ್ ಕಾಟನ್ ಮಿಲ್ ಮನಗನಲ್ ಮೆ. ಜಯಲಕ್ಷ್ಮೀ ಕಾಟನ್ ಮಿಲ್ಸ್ ಸದಿಯಾಪುರದ ಮೆ. ಲಕ್ಷ್ಮೀ ಬಾಲಾಜಿ ಕಾಟನ್ ಇಂಡಸ್ಟ್ರೀಸ್ ಸದಿಯಾಪುರದ ಮೆ. ಶ್ರೀ ಬಸವಜ್ಯೋತಿ ಕಾಟನ್ ಜಿನ್ನಿಂಗ್ ಫ್ಯಾಕ್ಟರಿ ಮದ್ದರಕಿ ಮೆ.ಆರ್.ಎಸ್.ಫೈಬರ್ಸ್ ಗೋಗಿ ಕೊಣದ ಮೆ.ಮಂಜಿತ್ ಕಾಟನ್ ಪ್ರವೈಟ್ ಲಿಮಿಟೆಡ್ ಮದರಕಿಯ ಮೆ.ಮಂಜಿತ್ ಕಾಟನ್ ಪ್ರವೈಟ್ ಲಿಮಿಟೆಡ್ ಹಳಿಸಾಗರದ ಮೆ. ಬಸವರಾಜ ಸಜ್ಜನಶೆಟ್ಟಿ ಕಾಟನ್ ಅಂಡ್ ಅಗ್ರೋ ಇಂಡಸ್ಟ್ರೀಸ್ ಹುಲಕಲ್ ಮೆ. ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್ ಹಳಿಸಗರ ಮೆ. ಬನಶಂಕರಿ ಇಂಡಸ್ಟ್ರೀಸ್ ಮಂಡಗಲ್ಲಿಯ ವೆಂಕಟೇಶ್ವರ ಅಗ್ರೋ ಇಂಡಸ್ಟ್ರೀಸ್ ಗೋಗಿ ಪೇಟ ಮಹಾಲಕ್ಷ್ಮೀ ಅಗ್ರೋ ಇಂಡಸ್ಟ್ರೀಸ್ ಬಸವಂತಪುರದ ಸಂಗಮೇಶ್ವರ ಇಂಡಸ್ಟ್ರೀಸ್ ಕೆಂಭಾವಿಯ ಮಲ್ಲಾ ಬಿ ಕ್ರಾಸ್‌ನ ಮೆ. ಶಿವಶಕ್ತಿ ಕಾಟನ್ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಿಲ್ಸ್ ಹದನೂರು ಮೇ. ಸಂದೀಪ್ ಅಗ್ರೋ ಇಂಡಸ್ಟ್ರೀಸ್ ನಾಯ್ಕಲ್ ಮೆ. ಕೆ.ಬಿ.ಎನ್. ಅಗ್ರೋ ಇಂಡಸ್ಟೀಸ್ ಗುರುಮಠಕಲ್ ತಾಲ್ಲೂಕಿನ ಕಣೇಕಲ್ ಪೋಸ್ಟ್ ಮೆ.ಬನದೇಶ್ವರ ಕಾಟನ್ ಇಂಡಸ್ಟ್ರೀಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.