ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇದರಿಂದ 26 ಮನೆಗಳಿಗೆ ಹಾನಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಸೂರ್ಯನ ದರ್ಶನ ಆಗಿಲ್ಲ. ಆಗಾಗ ಮಳೆ ಸುರಿಯುತ್ತಿದೆ.
ನಗರದ ಲಕ್ಷ್ಮೀ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಅಂಬೇಡ್ಕರ್ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿಯಲು ದಾರಿ ಮಾಡಿಕೊಡಲಾಯಿತು. ಶುಕ್ರವಾರ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದಿಂದ ಮತ್ತೆ ಮಳೆ ಸುರಿದಿದೆ.
ಯಾದಗಿರಿ ತಾಲ್ಲೂಕಿನಲ್ಲಿ 15 ಮನೆಗಳು, ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5, ಗುರುಮಠಕಲ್ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 3 ಸೇರಿದಂತೆ 26 ಮನೆಗಳಿಗೆ ಹಾನಿಯಾಗಿದೆ.
ರಸ್ತೆಗಳು ಹಾಳು: ಸತತ ಮಳೆ ಸುರಿಯುತ್ತಿರುವುದರಿಂದ ನಗರ ಸೇರಿದಂತೆ ಗ್ರಾಮೀಣ ರಸ್ತೆಗಳು ಕೆಸರುಮಯವಾಗಿವೆ. ಅಲ್ಲದೇ ಡಾಂಬರು ಕಿತ್ತಿ ಬಂದಿವೆ. ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ, ಬಡಾವಣೆ ರಸ್ತೆಗಳಲ್ಲಿ ಜಲ್ಲಿ ಕಲ್ಲುಗಳು ಮೇಲೇದ್ದಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ಗುರುಸಣಗಿ ಬ್ಯಾರೇಜ್ ಭರ್ತಿ: ನಗರ ಹೊರವಲಯದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ಭರ್ತಿಯಾಗಿದ್ದು, ಭೀಮಾನದಿಗೆ 45 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸನ್ನತಿ ಬ್ಯಾರೇಜ್‌ನಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಒಳಹರಿವು ಹೆಚ್ಚಿದ್ದರಿಂದ ಮೂರು ಗೇಟುಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.
ನದಿ ತೀರದ ಗ್ರಾಮಗಳಿಗೆ ಅಲರ್ಟ್: ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನದಿ ತೀರಕ್ಕೆ ತೆರಳದಂತೆ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಬಟ್ಟೆ ತೊಳೆಯಲು, ಐಪಿಸೆಟ್ ಹಾಕಲು, ಜಾನುವಾರುಗಳನ್ನು ತೆಗೆದುಕೊಂಡು ನದಿ ತೀರಕ್ಕೆ ಹೋಗದಂತೆ ವಡಗೇರಾ ತಾಲ್ಲೂಕಿನ ಗಡ್ಡೆಸುಗೂರು ಗ್ರಾಮದಲ್ಲಿ ಡಂಗುರ ಮೂಲಕ ಗ್ರಾಮಸ್ಥರಿಗೆ ಎಚ್ಚರ ನೀಡಿ ಎಚ್ಚರಿಕೆ ನೀಡಲಾಯಿತು.
ಭೀಮಾ ನದಿಯು ಕಳೆದ ಐದು ತಿಂಗಳುಗಳಿಂದ ನೀರಿಲ್ಲದೆ ಬತ್ತಿ ಹೋಗಿ ನದಿಯಲ್ಲಿರುವ ಕಲ್ಲು ಬಂಡೆಗಳು ಎದ್ದು ಕಾಣುತ್ತಿದ್ದವು. ಆದರೆ, ಕಳೆದ ನಾಲ್ಕೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಶುಕ್ರವಾರ ಭೀಮಾ ನದಿಯ ಎರಡು ದಂಡೆಗಳು ತುಂಬಿ ತುಳುಕಿರುವುದನ್ನು ನೋಡಿ ಸಾರ್ವಜನಿಕರು, ದಾರಿಹೋಕರು, ವಾಹನ ಸವಾರರು, ರೈತರು ಸಂತಸಗೊಂಡರು.
‘ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿರುವ ಪ್ರಯುಕ್ತ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿಸಿ ಜಾಗೃತಿ ಮೂಡಿಸಲಾಯಿತು’ ಎಂದು ವಡಗೇರಾ ಪೊಲೀಸರು ತಿಳಿಸಿದ್ದಾರೆ.
44 ಎಂಎಂ ಮಳೆ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 44 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಹಾಪುರ ತಾಲ್ಲೂಕಿನಲ್ಲಿ 36.2 ಮಿಲಿಮೀಟರ್ (ಎಂಎಂ) ಸುರಪುರ ತಾಲ್ಲೂಕಿನಲ್ಲಿ 29.7 ಯಾದಗಿರಿ ತಾಲ್ಲೂಕಿನಲ್ಲಿ 63.09 ಗುರುಮಠಕಲ್ ತಾಲ್ಲೂಕಿನಲ್ಲಿ 63.8 ವಡಗೇರಾ ತಾಲ್ಲೂಕಿನಲ್ಲಿ 47.8 ಹುಣಸಗಿ ತಾಲ್ಲೂಕಿನಲ್ಲಿ 26.6 ಎಂಎಂ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.