ಯಾದಗಿರಿ: ಜಿಲ್ಲೆಯಲ್ಲಿ 6 ತಿಂಗಳ ಅವಧಿಯಲ್ಲಿ ವಿಷ ಸರ್ಪ ಕಚ್ಚಿ 27 ಜನ ಮೃತಪಟ್ಟಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ 13 ಜನ ಸಾವನ್ನಪ್ಪಿದ್ದಾರೆ.
2024ರ ಜನವರಿಯಿಂದ ಜೂನ್ 26 ರವರೆಗೆ 27 ಜನ ಸಾವನ್ನಪ್ಪಿದ್ದಾರೆ.
ಮಳೆಗಾಲದಲ್ಲಿ ವಿಷ ಸರ್ಪಗಳ ಹಾವಳಿ ಹೆಚ್ಚುತ್ತದೆ. ಜಮೀನುಗಳಲ್ಲಿ ಕೆಲಸ ಮಾಡುವ ರೈತರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
‘ಸುರಪುರ ತಾಲ್ಲೂಕಿನ ಜಮೀನುಗಳಲ್ಲಿ ನೀರಾವರಿ ಸೌಲಭ್ಯ ಇರುವುದರಿಂದ ಹಾವುಗಳ ಕಾಟ ಹೆಚ್ಚಿರುತ್ತದೆ. ಹೀಗಾಗಿ ಅಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚಿದೆ. ವಿಷ ಜಂತುಗಳಿಂದ ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ರೈತ ಹನುಮಂತರಾಯ.
‘ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವು ಕಡಿತ ಪ್ರಕರಣಗಳು ಕಂಡುಬಂದ ಸಂದರ್ಭದಲ್ಲಿ ಕಡಿತಕ್ಕೊಳಗಾದವರನ್ನು ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು’ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.
ಎರಡು ವಿಧದಲ್ಲಿ ಹಾನಿ: ಸಹಜವಾಗಿ ಹಾವು ಕಚ್ಚಿದಾಗ ಮೊದಲು ನರಗಳಿಗೆ ಹಾನಿಯಾಗುತ್ತದೆ. ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಮನುಷ್ಯ ಬೇಗ ಸಾಯುತ್ತಾನೆ.
‘ವಿಷಕಾರಿ ಹಾವುಗಳು ಕಚ್ಚಿದಾಗ ಚಿಕಿತ್ಸೆ ಜೊತೆಗೆ ಧೈರ್ಯವೂ ಮುಖ್ಯ. ಕೆಲವರು ಭಯದಿಂದಲೇ ಸಾವನ್ನಪ್ಪುತ್ತಾರೆ. ಹೀಗಾಗಿ ಹಾವು ಕಚ್ಚಿದಾಗ ಆತ್ಮಸ್ಥೈರ್ಯ ಬೇಕು. ಚಿಕಿತ್ಸೆ ಪಡೆಯುವುದು ತಡವಾದರೆ ಮುಂದಿನ 6 ತಿಂಗಳಲ್ಲಿ ಕಿಡ್ನಿ, ಲಿವರ್, ನರಗಳ ದೌರ್ಬಲ್ಯ ಉಂಟಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಡಾ.ಮುಬಾಸಿರ್ ಸಾಜಿದ್.
ಗರಿಷ್ಠ 5 ಕನಿಷ್ಠ 2–3 ಆಂಟಿ-ಸ್ನೇಕ್ ವೆನಮ್ ಚುಚ್ಚುಮದ್ದನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲು ಸೂಚಿಸಲಾಗಿದೆ. ಮೂಢ ನಂಬಿಕೆ ತೊರೆದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತಡಾ.ಪ್ರಭುಲಿಂಗ ಮಾನಕರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಹಾವು ಕಚ್ಚಿ ಮೃತಪಟ್ಟವರು ಪ್ರದೇಶ;ಮೃತಪಟ್ಟವರು ಯಾದಗಿರಿ ನಗರ;6 ಯಾದಗಿರಿ ತಾಲ್ಲೂಕು;7 ಸುರಪುರ ತಾಲ್ಲೂಕು;13 ಹುಣಸಗಿ ತಾಲ್ಲೂಕು;1 ಒಟ್ಟು;27
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.