ಕಕ್ಕೇರಾ: ಬಿತ್ತನೆ ಸಂದರ್ಭದಲ್ಲಿ ಸಕಾಲದಲ್ಲಿ ಬಾರದ ಮಳೆ ಹಾಗೂ ಕಟಾವಿಗೆ ಬಂದಿರುವ ಸಮಯದಲ್ಲಿ ಸುರಿದ ವಿಪರೀತ ಮಳೆಯಿಂದ ಕಕ್ಕೇರಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕಕ್ಕೇರಾ ವಲಯದ 19,133 ಎಕರೆ ಕೃಷಿ ಜಮೀನಿನ ಪೈಕಿ 15,909 ಎಕರೆ ಪ್ರದೇಶದಲ್ಲಿ ಭತ್ತ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಕಕ್ಕೇರಾ ಪಟ್ಟಣದ 23ನೇ ವಾರ್ಡ್ ಸೇರಿ ತಿಂಥಣಿ, ಆಲ್ದಾಳ, ದೇವಾಪುರ, ದೇವತ್ಕಲ್ ಪ್ರದೇಶದಲ್ಲಿ ಮಳೆ ಅಭಾವದಿಂದ ಹತ್ತಿ ಬೆಳೆದ ರೈತರು ತೊಂದರೆಗೀಡಾಗಿದ್ದಾರೆ.
‘2 ಎಕರೆಯಲ್ಲಿ ಹತ್ತಿ ಬೆಳೆದಿದ್ದು, ಸುಮಾರು ₹ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಸದ್ಯ ಹತ್ತಿಗೆ ತಾಮ್ರರೋಗ ತಗಲಿದೆ. ಸಂಪೂರ್ಣ ಬೆಳೆಯಿಂದ ಬರುವ ಆದಾಯವು ಕೂಲಿಗಾರರಿಗೆ ಸಾಲದಾಗಿದೆ. ರಸಗೊಬ್ಬರ, ಹತ್ತಿಬೀಜ ಇತರ ಖರ್ಚು ಹೇಗೆ ಎಂಬ ಯೋಚನೆ ಹತ್ತಿ ಬೆಳೆಗಾರರದ್ದಾಗಿದೆ’ ಎಂದು ರೈತ ಮಲ್ಲಣ್ಣ ಗುರಿಕಾರ ಬೇಸರ ವ್ಯಕ್ತಪಡಿಸಿದರು.
‘3 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯ ಪೈಕಿ 1 ಎಕರೆ ಮಾತ್ರ ಚೆನ್ನಾಗಿ ಬೆಳೆ ಬಂದಿದೆ. ಅತಿಯಾದ ಮಳೆಯಿಂದ ಬೆಳೆಗೆ ಕೆಂಪು ರೋಗ ಬಂದು ಬೆಳೆ ಹಾಳಾಗಿದೆ. ಬೆಳೆಯಲು ₹ 40 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು, ಖರ್ಚು ಮಾಡಿದ ಹಣ ಬಂದರೆ ಸಾಕು ಎಂಬಾತಾಗಿದೆ’ ಎಂದು ರೈತ ಗೊಜಗರ ರಾಯಪ್ಪ ಅಳಲು ತೋಡಿಕೊಂಡರು.
‘ತಿಂಥಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾದು ಹೋಗುವ ಕಾಲುವೆಯಲ್ಲಿ ಗಿಡಗಂಟೆಗಳನ್ನು ತೆರವು ಮಾಡದ ಪರಿಣಾಮ ಹಾಗೂ ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರಿಂದ ನೀರು ಕಾಲುವೆಯಲ್ಲಿ ಹರಿಯುವ ಬದಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದಿದೆ. ಇದರಿಂದ ತೊಗರಿ, ಸಜ್ಜಿ ,ಹತ್ತಿ, ಭತ್ತ ಬೆಳೆದ ರೈತರ ಜಮೀನುಗಳಿಗೆ ನೀರಿನ ಕೊರತೆಯಾಗಿದೆ. ಅಧಿಕಾರಿಗಳು ಕಾಲುವೆ ನೀರು ಜಮೀನುಗಳಿಗೆ ತಲುಪವಂತೆ ಮಾಡಬೇಕು’ ಎಂದು ರತ್ನರಾಜ ಶಾಲಿಮನಿ ಮನವಿ ಮಾಡಿದ್ದಾರೆ.
ಕಕ್ಕೇರಾ ವ್ಯಾಪ್ತಿಯಲ್ಲಿ 7 ರಿಂದ 8 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು ಹತ್ತಿ ಹಾನಿಯಾದ ವರದಿ ಸಲ್ಲಿಸಿದ್ದು ಕೃಷಿ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಹಾನಿಯನ್ನು ರೈತರು ಕಂದಾಯ ಕೃಷಿ ಅಧಿಕಾರಿಗಳ ಗಮನಕ್ಕೆ ತರಬೇಕು.–ಮಲ್ಕೋಜಪ್ಪ ಹಡಪದ, ಕಂದಾಯ ನಿರೀಕ್ಷಕ ಕಕ್ಕೇರಾ.
ಸಾಲ ಮಾಡಿ ಹತ್ತಿ ಹಾಗೂ ಇತರ ಬೆಳೆಯನ್ನು ಬೆಳೆದಿರುವೆ. ಮಳೆ ಕೊರತೆಯಿಂದ ಹತ್ತಿ ಬೆಳೆಯು ಹಾನಿಯಾಗಿದ್ದು ನಷ್ಟಕ್ಕೀಡಾದ ರೈತರಿಗೆ ಸರ್ಕಾರ ನೆರವು ನೀಡಬೇಕು.–ರಾಯಪ್ಪ ಗೊಜಗರ, ಹತ್ತಿ ಬೆಳೆದ ರೈತ ಕಕ್ಕೇರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.