ADVERTISEMENT

ಶಹಾಪುರ: ಗ್ರಾಹಕರ ಸೇವೆಯಿಂದ ವಿಮುಖವಾದ ಅಂಚೆ ಕಚೇರಿ!

ಟಿ.ನಾಗೇಂದ್ರ
Published 3 ಅಕ್ಟೋಬರ್ 2024, 4:35 IST
Last Updated 3 ಅಕ್ಟೋಬರ್ 2024, 4:35 IST
ಶಹಾಪುರ ನಗರದ ಹಾಲಬಾವಿ ರಸ್ತೆಗೆ ಹೊಂದಿಕೊಂಡಿರುವ ಬಾಡಿಗೆ ಮನೆಯಲ್ಲಿ ಅಂಚೆ ಕಚೇರಿ ಸ್ಥಾಪಿಸಿದೆ
ಶಹಾಪುರ ನಗರದ ಹಾಲಬಾವಿ ರಸ್ತೆಗೆ ಹೊಂದಿಕೊಂಡಿರುವ ಬಾಡಿಗೆ ಮನೆಯಲ್ಲಿ ಅಂಚೆ ಕಚೇರಿ ಸ್ಥಾಪಿಸಿದೆ   

ಶಹಾಪುರ: ಯಾವುದೇ ಸಾರ್ವಜನಿಕ ಕಚೇರಿಗಳು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಆದರೆ ನಗರದ ಅಂಚೆ ಕಚೇರಿ ಗ್ರಾಹಕರ ಸೇವೆಯಿಂದ ವಿಮುಖವಾಗಿ ಕೆಲಸ ನಿರ್ವಹಿಸುವಂತೆ ಆಗಿದೆ.

ಬಾಡಿಗೆ ಮನೆಯ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದು ಅನುಕೂಲಕ್ಕಿಂತ ಅನಾನುಕೂಲ ಜಾಸ್ತಿಯಾಗಿದೆ ಎಂಬ ದೂರು ಜನತೆಯಿಂದ ಕೇಳಿ ಬರುತ್ತಲಿದೆ.

ಹಿಂದೆ ನಗರದ ಕೊಲ್ಲೂರ ಬಿಲ್ಡಿಂಗ್‌ನಲ್ಲಿ ಕಚೇರಿಯನ್ನು ಸ್ಥಾಪಿಸಿದ್ದರು. ಈಗ ನಗರದ ಹೊರವಲಯದಲ್ಲಿ ಹಾಲಬಾವಿ ರಸ್ತೆಗೆ ಹೊಂದಿಕೊಂಡಿರುವ ಬಾಡಿಗೆ ಮನೆಯಲ್ಲಿ ಕಚೇರಿ ಸ್ಥಾಪಿಸಿದ್ದಾರೆ. ಅಂಚೆ ಕಚೇರಿ ಎಲ್ಲಿದೆ ಎಂದು ವಿಳಾಸ ಹಿಡಿದುಕೊಂಡು ಅಲೆಯುವ ದುಸ್ಥಿತಿ ಬಂದಿದೆ ಎನ್ನುತ್ತಾರೆ ಯಲ್ಲಯ್ಯ ನಾಯಕ ವನದುರ್ಗ.

ADVERTISEMENT

ನಗರ ಹಳೆ ಬಸ್ ನಿಲ್ದಾಣದಿಂದ ಸದ್ಯ ಸ್ಥಾಪಿತವಾಗಿರುವ ಕಚೇರಿಗೆ ಆಗಮಿಸಬೇಕು ಎಂದರೆ ಎರಡು ಕಿ.ಮೀ ಕ್ರಮಿಸಬೇಕು. ಅಲ್ಲಿ ವಾಹನಗಳ ಓಡಾಟವು ಕಡಿಮೆ ಇದೆ. ಆಟೊ ತೆಗೆದುಕೊಂಡು ಬರಬೇಕೆಂದರೆ ₹50 ನೀಡಬೇಕು. ಯಾವುದೇ ನೋಂದಾಯಿತ ರಜಿಸ್ಟರ್ ಪಾರ್ಸ್‌ಲ್‌ ಬಂದಿದೆ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿದರೆ ₹50 ವೆಚ್ಚ ಮಾಡಬೇಕಾಗಿದೆ. ಅಲ್ಲದೆ ಕಟ್ಟಡದ ಒಂದು ಮೂಲೆಯಲ್ಲಿ ಸ್ಥಾಪಿಸಿದ್ದಾರೆ. ಅಂಚೆ ಕಚೇರಿಗೆ ನಿವೃತ್ತ ಸಿಬ್ಬಂದಿ, ವಯೋವೃದ್ಧರು ಆಗಮಿಸುತ್ತಾರೆ. ಅಗತ್ಯ ಸೌಲಭ್ಯ ಸಹ ಇಲ್ಲ ಪರದಾಟ ತಪ್ಪಿಲ್ಲ ಎಂದು ಹಿರಿಯ ನಾಗರಿಕರ ಆರೋಪ.

ನಗರದ ಪೊಲೀಸ್ ಠಾಣೆಗೆ ಹೊಂದಿಕೊಂಡು ಕಚೇರಿಯ ಸ್ವಂತ ಜಾಗವಿದೆ. ಆದರೆ ಕಟ್ಟಡ ಹಾಳು ಬಿದ್ದು ಹಲವು ವರ್ಷವೇ ಗತಿಸಿವೆ. ಬಾಡಿಗೆ ಕಟ್ಟಡವನ್ನು ಹಿಡಿದು ಬಡಾವಣೆಯಿಂದ ಬಡಾವಣೆಗೆ ಅಲೆಯುವಂತೆ ಆಗಿದೆ. ಕೇಂದ್ರ ಸರ್ಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಅಗತ್ಯವಿದೆ ಎನ್ನುತ್ತಾರೆ ಅಂಚೆ ಇಲಾಖೆಯ ಅಧಿಕಾರಿ ಒಬ್ಬರು.

ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿದೆ. ತಿಂಗಳಿಗೆ ₹17 ಸಾವಿರ ಬಾಡಿಗೆ ನೀಡುತ್ತೇವೆ. ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ಅಗತ್ಯ ಸೌಲಭ್ಯ ಇವೆ.
ಬಿ.ಎಸ್.ನೆಲೋಗಿ, ಉಪ ಅಂಚೆ ಅಧಿಕಾರಿ ಶಹಾಪುರ

ಸವೆದು ಹೋದ ಸೀಲ್

ಶಹಾಪುರ: ನೋಂದಾಯಿತ ಅಂಚೆ ಮೂಲಕ ಸ್ಪಿಡ್‌ಪೋಸ್ಟ್ ಮಾಡಿ ಪತ್ರದ ಮೇಲೆ ಸರಿಯಾದ ಸೀಲ್ (ಮುದ್ರೆ) ಮೂಡುವುದಿಲ್ಲ. ದಿನಾಂಕವು ಕಾಣಿಸುವುದಿಲ್ಲ. ಸೀಲ್ ಸವೆದು ಹೋಗಿವೆ. ಏನು ಕಾಣಿಸುವುದಿಲ್ಲ. ನ್ಯಾಯಾಲಯಕ್ಕೆ ನೋಂದಾಯಿತ ಕಚೇರಿ ದಾಖಲೆಯ ಪತ್ರವನ್ನು ಹಾಜರುಪಡಿಸುವಾಗ ಸೀಲ್ ಸರಿಯಾಗಿ ಕಾಣಿಸುತ್ತಿಲ್ಲ. ಯಾವ ದಿನಾಂಕದಿಂದ ಜಾರಿಗೆ ಹಾಗೂ ತಲುಪಿದೆ ಹೀಗೆ ಹಲವಾರು ಗೊಂದಲಗಳನ್ನು ವಕೀಲರು ಎದುರಿಸುವಂತೆ ಆಗಿದೆ. ಕೊನೆ ಪಕ್ಷ ಹೊಸದಾಗಿ ಸೀಲ್ ಸರಬರಾಜು ಮಾಡಿ ಎನ್ನುತ್ತಾರೆ ವಕೀಲರಾದ ವಿಶ್ವನಾಥ ಫಿರಂಗಿ ಹಾಗೂ ಉಮೇಶ ಮುಡಬೂಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.