ADVERTISEMENT

ಯಾದಗಿರಿ | ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ: ಗರಿಮಾ ಪಂವಾರ್

​ಪ್ರಜಾವಾಣಿ ವಾರ್ತೆ
Published 15 ಮೇ 2024, 15:55 IST
Last Updated 15 ಮೇ 2024, 15:55 IST
ಗರಿಮಾ ಪಂವಾರ್‌
ಗರಿಮಾ ಪಂವಾರ್‌   

ಯಾದಗಿರಿ: ಎಸ್‌ಎಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮೇ 15ರಿಂದ ಜೂನ್ 6ರ ವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪಂವಾರ್ ತಿಳಿಸಿದ್ದಾರೆ.

ಎಸ್‌ಎಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಜಿಲ್ಲೆಯಲ್ಲಿ 7,725 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಕಳೆದ ಸಾಲಿನಲ್ಲಿ ಶೇ 75ಕ್ಕಿಂತ ಕಡಿಮೆ ಹಾಜರಾತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿರಾಕರಿಸಲಾಗಿತ್ತು. ಅಂಥ ವಿದ್ಯಾರ್ಥಿಗಳು ಜೂನ್ 7ರಿಂದ ನಡೆಯುವ ಪರೀಕ್ಷೆ-2ಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವ ಅವಕಾಶವನ್ನು ಪರೀಕ್ಷಾ ಮಂಡಳಿ ನೀಡಿದ್ದು, ಜಿಲ್ಲೆಯಲ್ಲಿ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಶಹಾಪುರ ಮತ್ತು ಸುರಪುರ ಹಾಗೂ ಯಾದಗಿರಿ ತಾಲ್ಲೂಕು ಸೇರಿದಂತೆ 8,323 ಬಾಲಕರು, 8,666 ಬಾಲಕಿಯರು ಸೇರಿ ಒಟ್ಟು 16,989 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರಲ್ಲಿ 3,859 ಬಾಲಕರು, 5,405 ಬಾಲಕಿಯರು ಸೇರಿ 9,264 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,464 ಬಾಲಕರು, 3,261 ಬಾಲಕಿಯರು ಸೇರಿ 7,725 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.