ಯಾದಗಿರಿ: ಜಿಲ್ಲೆಯ ಶಹಾಪುರದ ನಂದಿ ಬೆಟ್ಟದ ಬಳಿ ಇರುವ ವಿಶ್ವಮಾತಾಗುರುಕುಲ ಗೋಶಾಲೆ, ಗೋ ಸಂರಕ್ಷಣಾ ಸಂಸ್ಥೆಯು ರಾಜ್ಯದಲ್ಲೇ ವಿಶಿಷ್ಟವಾದದ್ದು. ದೇಶದಲ್ಲಿರುವ 46 ಪೈಕಿ 24 ವಿವಿಧ ತಳಿಗಳ ಗೋವುಳನ್ನು ಇಲ್ಲಿ ಸಾಕಲಾಗುತ್ತದೆ. 350ಕ್ಕೂ ಹೆಚ್ಚು ದೇಶಿ ಹಸುಗಳಿವೆ.
ಲಾಲ್ ಕಂದಾರ್, ಗೀರ್, ಕಾಂಕ್ರೋಷ್ ಗಿರ್, ಕರ್ನಾಟಕ ಕಿಲಾರಿ, ಉತ್ತರ ಕರ್ನಾಟಕ ಗಿಡ್ಡ ಜವಾರಿ, ಒಂಗೋಲ್, ಠಾಟಿ, ಕಬ್ಬೇರ್, ವೆಂಚೂರು, ಅಮೃತ ಮಹಲ್, ದೇವಣಿ, ಒರಿಸ್ಸಾ ಕಿಲಾರ್ ಸೇರಿದಂತೆ ದೇಶದ ವಿವಿಧತಳಿಯಆಕಳುಗಳು ಇಲ್ಲಿವೆ. ಹೊಸನಗರದ ರಾಮಚಂದ್ರಪುರ ಮಠ ಹೊರತುಪಡಿಸಿದರೆ ಅತಿ ಹೆಚ್ಚು ತಳಿಗಳ ಗೋವುಗಳು ಇಲ್ಲಿರುವುದು ವಿಶೇಷ.
ಸಿಂಧ್ ಪ್ರಾಂತ್ಯ, ಹರಿಯಾಣ, ಪಂಜಾಬ್, ಪಾಕಿಸ್ತಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ,
ಆಂಧ್ರಪ್ರದೇಶ, ತೆಲಂಗಾಣ, ಕೇರಳ ತಮಿಳುನಾಡಿನ ಗೋವುಗಳಿದ್ದು, ದೇಹಾಕಾರ ಮತ್ತು ಬಣ್ಣದಲ್ಲಿ ವಿಭಿನ್ನವಾಗಿವೆ.
‘ಗೋವುಗಳ ಸಂಕರಣವನ್ನು ಅದೇ ತಳಿಯ ಜೊತೆಗೆ ಮಾಡಲಾಗುತ್ತಿದೆ. ಮಿಶ್ರ ಮಾಡುವುದಿಲ್ಲ. ಇದರಿಂದ ಆಯಾ ತಳಿಯ ಗೋ ಸಂವರ್ಧನೆ ಆಗುತ್ತದೆ’ ಎಂದು ಗೋಸೇವಕರು ಹೇಳುತ್ತಾರೆ.
₹80 ಸಾವಿರದಿಂದ ₹2.50 ಲಕ್ಷ ಮೌಲ್ಯದವರೆಗಿನ ಗೋವುಗಳು ಇಲ್ಲಿವೆ. ಸಿಂಧ್ ಪ್ರಾಂತ್ಯದ ಗೋವುಗಳು ಎತ್ತರ ಮತ್ತು ಕಂದು ಬಣ್ಣದಿಂದ ಕೂಡಿವೆ. ಗೋಶಾಲೆಯಲ್ಲಿ ಗೋವುಗಳ ಸಂಕ್ಷಣೆಗೆ ವಿಶೇಷ ಆದ್ಯತೆ ಕೊಡಲಾಗುತ್ತದೆ.
***
ಗೋ ಸಂತತಿ ಕಡಿಮೆಯಾಗುತ್ತಿದೆ. ದೇಶದ ವೈವಿಧ್ಯಮಯ ತಳಿಗಳ ಗೋವುಗಳನ್ನು ಸರ್ಕಾರದ ಸಹಾಯಧನವಿಲ್ಲದೆ ಸಾಕುತ್ತಿದ್ದೇವೆ.
- ಸಂಗಮೇಶ, ಗೋ ಸೇವಕರು, ವಿಶ್ವಗೋಮಾತಾ ಗುರುಕುಲ ಗೋ ಶಾಲೆ, ನಂದಿ ಬೆಟ್ಟ
***
ಜಾತಕದಲ್ಲಿ ದೋಷ ಇದ್ದವರು, ಗೋ ಪೂಜೆ ಮಾಡುವವರು ಪ್ರತಿನಿತ್ಯ ಬರುತ್ತಾರೆ. ಅವರಿಗಾಗಿ ಪೂಜೆ ಮಾಡಲಾಗುತ್ತಿದೆ. ಗೋವುಗಳ ರಕ್ಷಣೆಯೇ ಪ್ರಥಮ ಆದ್ಯತೆ
- ಗುರುಸಿದ್ಧಯ್ಯ ಶಾಸ್ತ್ರಿ, ಗೋ ಪೂಜಾರಿ
***
ಗೋವುಗಳಿಗೆ ಆಹಾರ ನೀಡುವುದರ ಜೊತೆಗೆ ಸ್ನಾನ ಮಾಡಿಸುತ್ತೇವೆ. ತೊಗರಿ, ಭತ್ತದ ತೌಡಿನಿಂದ ಮಾಡಿರುವ ನುಚ್ಚು ನೀಡಿ, ನೀರು ಕುಡಿಸುತ್ತೇವೆ
- ಸಾಬಣ್ಣ ಬಾಗೂರು, ಗೋಶಾಲೆ ಕೆಲಸಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.