ಯಾದಗಿರಿ: 2021-22 ರಲ್ಲಿ 21,561 ಸಾಮಾನ್ಯ ಅರ್ಥಿ (ಜನರಲ್ ಕ್ಲೈಂಟ್) ಎಚ್‌ಐವಿ ಪರೀಕ್ಷೆ ಮಾಡಿದ್ದು, ಅದರಲ್ಲಿ 111 ಜನರಿಗೆ ಎಚ್‌ಐವಿ ಸೋಂಕು ಧೃಢಪಟ್ಟಿದೆ. ಜಿಲ್ಲೆಯಲ್ಲಿ ಏಡ್ಸ್ ಪೀಡಿತ ಪಾಸಿಟಿವಿಟಿ ರೇಟ್ ಶೇ 0.51 ರಷ್ಟಿದೆ.
ಪ್ರಸಕ್ತ ವರ್ಷದಲ್ಲಿ 19,306 ಗರ್ಭಿಣಿಯರ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 6 ಜನ ಗರ್ಭಿಣಿಯರಿಗೆ ಎಚ್‌ಐವಿ ಧೃಢಪಟ್ಟಿದೆ. ಸೋಂಕಿತರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಪಾಸಿಟಿವಿಟಿ ರೇಟ್ ಶೇ 0.03)
ಎಎನ್‌ಸಿ ಎಚ್‌ಐವಿ ಸೆಂಟಿನಲ್ ಸರ್ವಲೈನ್ಸ್ ಪ್ರಕಾರ ಜಿಲ್ಲೆಯ ಪ್ರಿವಿಲೆನ್ಸ್ ರೇಟ್ (0.25 2018-19 ರ ಪ್ರಕಾರ) ಇದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಮಾಡಲಾಗುತ್ತಿದ್ದು, ಈ ವರ್ಷದ ವರದಿ ಬರಬೇಕಿದೆ.
ಜಿಲ್ಲೆಯಲ್ಲಿ 2010 ರಿಂದ ಇಲ್ಲಿಯವರೆಗೆ ಕಳೆದ 10 ವರ್ಷಗಳಲ್ಲಿ 4,27,771 ಸಾಮಾನ್ಯ ಅರ್ಥಿಗಳ (ಜನರಲ್ ಕ್ಲೈಂಟ್) ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 4,390 ಎಚ್‌ಐವಿ ಸೋಂಕಿತರು ಧೃಡಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ ಶೇ 1.35, ಅದೇ ರೀತಿಈ ಅವಧಿಯಲ್ಲಿ ಒಟ್ಟು 4,01,704 ಗರ್ಭಿಣಿಯರಿಗೆ ಎಚ್‌ಐವಿ ಪರಿಕ್ಷೆ ಮಾಡಲಾಗಿದ್ದು, ಅದರಲ್ಲಿ 283 ಜನ ಎಚ್‌ಐವಿ ಸೋಂಕಿತರೆಂದು ಧೃಢಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ ಶೇ 0.07 ದಾಖಲಾಗಿದೆ.
2011 ರಿಂದ ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ ಒಟ್ಟು 5,445 ಜನ ಎಚ್‌ಐವಿ ಸೋಂಕಿತರು ಚಿಕಿತ್ಸೆಗಾಗಿ ನೋಂದಣಿಯಾಗಿದ್ದು, ಅದರಲ್ಲಿ 5,108 ಜನಕ್ಕೆ ಎಆರ್‌ಟಿ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಪ್ರಸ್ತುತ 2,865 ಜನಜೀವಂತ ಇದ್ದುಮತ್ತು ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 1,658 ಜನ ಎಚ್‌ಐವಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಯಾದಗಿರಿಯ ಎಚ್‌ಐವಿ, ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 6 ಐಸಿಟಿಸಿ ಕೇಂದ್ರಗಳಿವೆ. 1 ನೋಡಲ್ ಎಆರ್‌ಟಿ ಕೇಂದ್ರವಿದೆ. 5 ಉಪ ಎಆರ್‌ಟಿ ಕೇಂದ್ರಗಳಿವೆ. 2 ಡಿಎಸ್‌ಆರ್‌ಸಿ ಕೇಂದ್ರಗಳು ಮತ್ತು 2 ರಕ್ತ ಶೇಖರಣಾ ಘಟಕಗಳಿವೆ. 2 ರಕ್ತನಿಧಿ ಕೇಂದ್ರಗಳಿವೆ. ಗ್ರಾಮಿಣ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಒಟ್ಟು 47 ಎಫ್ ಐಸಿಟಿಸಿ ಪರಿಕ್ಷಾ ಕೇಂದ್ರಗಳಿವೆ. ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ 4 ಎಚ್‌ಐವಿ ಪರಿಕ್ಷಾ ಕೇಂದ್ರಗಳಿವೆ.
ಆಪ್ತ ಸಮಾಲೋಚನೆ: ಎಚ್‌ಐವಿ, ಏಡ್ಸ್ ಕುರಿತು ಪರೀಕ್ಷಾಪೂರ್ವ ಆಪ್ತಸಮಾಲೋಚನೆ ಮಾಡಿ ಉಚಿತವಾಗಿ ಎಚ್‌ಐವಿ ಸೋಂಕು ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷಾ ನಂತರದ ಆಪ್ತಸಮಾಲೋಚನೆ, ಅನುಸರಣಾ ಭೇಟಿಯ ಬಗ್ಗೆ ಸಮಾಲೋಚನೆ, ಸುರಕ್ಷಿತ ಲೈಂಗಿಕತೆಯ ಬಗ್ಗೆ ಹಾಗೂ ಕಾಂಡೋಮ್ ಬಳಕೆಯ ಬಗ್ಗೆ ಮಾಹಿತಿ, ಎಚ್‌ಐವಿ ಸೋಂಕಿತರಿಗೆ ಉಚಿತ ಎಆರ್‌ಟಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.
‘ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್ ಅನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ’ ಎನ್ನುವುದು 2021ರ ಡಿ.1ರ ಏಡ್ಸ್ ದಿನಾಚರಣೆಯ ಘೋಷಣೆಯಾಗಿದೆ.
***
ಸೋಂಕಿತರಿಗೆ ವಿವಿಧ ಸೌಲಭ್ಯ
ಧನಶ್ರೀ ಯೋಜನೆ ಅಡಿಯಲ್ಲಿ ಎಚ್‌ಐವಿ ಸೋಂಕಿತರಿಗೆ 86 ಜನರಿಗೆ ಸಾಲ ಸೌಲಭ್ಯ, 22 ಎಚ್‌ಐವಿ ಸೋಂಕಿತರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಚ್‌ಐವಿ ಸೋಂಕಿತರ ಮಕ್ಕಳಿಗೆ ಮತ್ತು ಎಚ್‌ಐವಿ ಸೋಂಕಿತ ಮಕ್ಕಳಿಗೆ ಓವಿಸಿ (ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ) ಯೋಜನೆ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ₹1,000 ರಂತೆ 18 ವರ್ಷದ ವರೆಗೆ ನೀಡಲಾಗುತ್ತಿದೆ. 389 ಮಕ್ಕಳಿಗೆ ನೀಡಲಾಗುತ್ತಿದೆ. ಜಿಲ್ಲೆಯ ಹಳೆ ತಾಲ್ಲೂಕುಗಳಾದ ಶಹಾಪುರ ತಾಲ್ಲೂಕು 121, ಸುರಪುರ ಸುರಪುರ 111, ಯಾದಗಿರಿ ತಾಲ್ಲೂಕು 157 ಸಹಾಯಧನ ನೀಡಲಾಗುತ್ತಿದೆ.
358 ಎಚ್‌ಐವಿ ಸೋಂಕಿತರಿಗೆ ಉಳಿತಾಯ ಬ್ಯಾಂಕ್ ಖಾತೆ ಸೌಲಭ್ಯ, 15 ಎಚ್‌ಐವಿ ಸೋಂಕಿತರಿಗೆ ಪ್ಯಾನ್ ಕಾರ್ಡ್, 68 ಎಚ್‌ಐವಿ ಸೋಂಕಿತರ ಮರಣ ಪ್ರಮಾಣ ಪತ್ರ ಅವರ ಕುಟುಂಬಗಳಿಗೆ ಒದಗಿಸಲಾಗಿದೆ. 30 ಸೋಂಕಿತರಿಗೆ ಆಧಾರ್ ಕಾರ್ಡ್, 151 ಸೋಂಕಿತರ ಮಕ್ಕಳಿಗೆ ಶಾಲಾ ಪ್ರಮಾಣ ಪತ್ರ, 86 ಸೋಂಕಿತರಿಗೆ ಬೇಬಾಕಿ ಪ್ರಮಾಣ ಪತ್ರ, 51ಅನ್ನ ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ರೇಷನ್ ಕಾರ್ಡ್, 2 ಆಯುಷ್ಮಾನ್ ಕಾರ್ಡ್ (ಎಬಿಆರ್‌ಕೆ) ಕಾರ್ಡ್, ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಹ 145 ಅರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತಿದೆ.
***
ಅಂಕಿ ಅಂಶ
ಎಚ್‌ಐವಿ ಸೋಂಕು ಪತ್ತೆಯಾದವರ ಸಂಖ್ಯೆ
ವರ್ಷ;ಸಾಮಾನ್ಯ ಅರ್ಥಿ, ಗರ್ಭಿಣಿಯರು
2010–11;515;41
2011–12;539;53
2012–13;496;29
2013–14;476;22
2014–15;429;25
2015–16;405;14
2016–17;320;14
2017–18;333;16
2018–19;360;28
2019–20;250;20
2020–21;156;15
2021–22ರ ಎಪ್ರಿಲ್- ಅಕ್ಟೋಬರ್:111;6
ಆಧಾರ: ಆರೋಗ್ಯ ಇಲಾಖೆ
***
ಆರೋಗ್ಯ ಇಲಾಖೆ ವತಿಯಿಂದ ಏಡ್ಸ್ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ, ಚಿಕಿತ್ಸೆ ಸಮರ್ಪಕವಾಗಿ ನಡೆಯುವುದಿಂದ ಸೋಂಕು ಇಳಿಕೆಯಾಗುತ್ತಿದೆ
- ಡಾ.ಇಂದುಮತಿ ಕಾಮಶೆಟ್ಟಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
***
ಜಿಲ್ಲೆಯಲ್ಲಿ ಏಡ್ಸ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಇನ್ನೂ ಹೆಚ್ಚಿನ ತಿಳಿವಳಿಕೆ ಅವಶ್ಯವಿದೆ. ಸುರಕ್ಷಿತ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಬೇಕು
- ಡಾ.ಲಕ್ಷ್ಮಿಕಾಂತ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ
***
ಜಿಲ್ಲೆಯ ಜನರಲ್ಲಿ ತಿಳಿವಳಿಕೆ ಹೆಚ್ಚಾಗಿದ್ದು, ಏಡ್ಸ್ ಪ್ರಕರಣಗಳು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿವೆ
- ಅಂಬರೀಶ ಎಚ್ ಭೂತಿ, ಆಡಳಿತ ಸಹಾಯಕ, ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.