ಶಹಾಪುರ: ತಾಲ್ಲೂಕಿನ ಅಣಬಿ ಗ್ರಾಮದ ಭೂರಹಿತ ಯೋಜನೆ ಅಡಿಯಲ್ಲಿ ಕೃಷಿ ಜಮೀನು ಪಡೆದ ರೈತರಿಗೆ ಕೃಷಿಗೆ ಯೋಗ್ಯವಲ್ಲದ ಜಮೀನು ಹಂಚಿಕೆ ಮಾಡಿರುವ ಅಂಶವು ಈಚೆಗೆ ಜಿಲ್ಲಾಧಿಕಾರಿ ಅವರು ಲೋಕಾಯುಕ್ತರಿಗೆ ಬರೆದ ಪತ್ರದಿಂದ ಬಹಿರಂಗವಾಗಿದೆ.
ತಾಲ್ಲೂಕಿನ ಅಣಬಿ ಗ್ರಾಮದ ಸರ್ವೇ ನಂಬರ್ 244/2ರಲ್ಲಿ 18.33 ಗುಂಟೆ ಜಮೀನು 19 ಫಲಾನುಭವಿಗಳಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಭೂರಹಿತ ಯೋಜನೆ ಅಡಿಯಲ್ಲಿ ಜಮೀನು ಮಂಜೂರಾತಿಯಾಗಿತ್ತು. ಅದರಂತೆ ಫಲಾನುಭವಿಗಳು ತಮಗೆ ನೀಡಿದ ಜಮೀನು ಸಾಗುವಳಿ ಮಾಡಲು ತೆರಳಿದರೆ ಆಘಾತ ಕಾದಿತ್ತು. ಕೃಷಿಗೆ ಯೋಗ್ಯವಲ್ಲದ ಜಮೀನನ್ನು ದಲ್ಲಾಳಿಗಳು ಹಾಗೂ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ತನಿಖೆ ನಡೆಸುವಂತೆ ಎ.ನಾರಾಯಣಸ್ವಾಮಿ ಯುವ ಸೇನೆರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ ದೊಡ್ಮನಿ ಲೋಕಾಯುಕ್ತರಿಗೆ 2023 ಫೆಬ್ರವರಿ 21ರಂದು ದೂರು ನೀಡಿದ್ದರು. ಅದರಂತೆ ಲೋಕಾಯುಯಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸಮಗ್ರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಕಳೆದ ಜು.31ರಂದು ಕಂದಾಯ ಹಾಗೂ ತಾಲ್ಲೂಕು ಭೂಮಾಪಕರು ಸ್ಥಾನಿಕ ಸ್ಥಳ ತನಿಖೆ ಕೈಗೊಂಡಿದ್ದು ಇರುತ್ತದೆ. ಅದರಲ್ಲಿ ಅಣಬಿ ಗ್ರಾಮದ ಸರ್ವೇ ನಂಬರ್ 244/2ರಲ್ಲಿ ಒಟ್ಟು 18.33 ಜಮೀನು ಇದ್ದು ಅದರಲ್ಲಿ 19 ಹಿಸ್ಸಾಗಳು ಇವೆ. ಅದರಲ್ಲಿ 8 ಎಕರೆ ಜಮೀನು ಸಾಗುವಳಿಗೆ ಯೋಗ್ಯವಿದೆ. ಇನ್ನುಳಿದ 9.33 ಗುಂಟೆ ಜಮೀನು ಕೃಷಿಗೆ ಯೋಗ್ಯವಾಗಿರುವುದಿಲ್ಲ. ಹಳ್ಳ ನೀರು ಹರಿಯುತ್ತದೆ. ಜಮೀನು ಕಲ್ಲು ಬಂಡೆಗಳಿಂದ ಕೂಡಿರುತ್ತದೆ. ಇನ್ನುಳಿದ 1 ಎಕರೆ ಜಮೀನು ಪ್ರದೇಶ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿರುತ್ತದೆ ಎಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಅವರು ಲೋಕಾಯುಕ್ತರಿಗೆ ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರೈತರಿಗೆ ವಂಚನೆ ಮಾಡಿದ ದಲ್ಲಾಳಿಗಳು ಹಾಗೂ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು. ವಂಚನೆಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು ಎ.ನಾರಾಯಣಸ್ವಾಮಿ ಯುವ ಸೇನೆರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ ದೊಡ್ಮನಿ ಮನವಿ ಮಾಡಿದ್ದಾರೆ.
ಭೂ ರಹಿತ ಯೋಜನೆ ಅಡಿಯಲ್ಲಿ ದಲ್ಲಾಳಿ ಹಾಗೂ ಡಾ.ಅಂಬೇಡ್ಕರ್ ನಿಗಮದ ಅಧಿಕಾರಿ ಶಾಮೀಲಾಗಿ ಕೃಷಿಗೆ ಯೋಗ್ಯವಲ್ಲದ ಜಮೀನು ನೀಡಿರುವುದು ಜಿಲ್ಲಾಧಿಕಾರಿ ಲೋಕಾಯುಕ್ತರಿಗೆ ಬರೆದ ಪತ್ರದಿಂದ ಬಹಿರಂಗವಾಗಿದೆ.ಶಿವಕುಮಾರ ದೊಡ್ಮನಿ ರಾಜ್ಯ ಘಟಕದ ಅಧ್ಯಕ್ಷ ಎ.ನಾರಾಯಣಸ್ವಾಮಿ ಯುವ ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.