ಅಶೋಕ ಸಾಲವಾಡಗಿ
ಸುರಪುರ: ತಾಲ್ಲೂಕಿನ ಜಾಲಿಬೆಂಚಿ ಜನಪದದ ತವರೂರು. ಇಲ್ಲಿ ಹಲವಾರು ಕಲಾವಿದರು ಶತಮಾನಗಳಿಂದ ಜನಪದಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅದರಲ್ಲಿ ಹಿರೇಮಠ ಕುಟುಂಬ ಗಮನಾರ್ಹವಾದದ್ದು.
ಆಗಮ, ಪೂಜೆ, ಪುನಸ್ಕಾರ, ಪಂಚಾಂಗಕ್ಕೆ ಹೆಸರುವಾಸಿಯಾದ ಈ ಕುಟುಂಬ ಜನಪದವನ್ನು ತನ್ನ ಒಡಲಿನಲ್ಲಿ ಜತನವಾಗಿಟ್ಟುಕೊಂಡಿದ್ದು ಪೀಳಿಗೆಯಿಂದ ಪೀಳಿಗೆಗೆ ಹರಡುತ್ತಿದೆ. ಅಮರಯ್ಯಸ್ವಾಮಿ ಹಿರೇಮಠ ಈ ಕುಟುಂಬದ ಅನನ್ಯ ಕೊಡುಗೆ.
ಷಣ್ಮುಕಯ್ಯ ಗುಂಡಮ್ಮ ದಂಪತಿಯ ಉದರದಲ್ಲಿ ಜೂನ್ 1, 1963 ರಲ್ಲಿ ಅಮರಯ್ಯಸ್ವಾಮಿ ಜನಿಸಿದರು. ಪುತ್ರನಿಗೆ ಚೆನ್ನಾಗಿ ಓದಿಸಬೇಕೆಂಬ ಪಾಲಕರ ಆಸೆಯನ್ನು ಜನಪದ ಕಿತ್ತುಕೊಂಡಿತು. ಹಾಗೂ ಹೀಗೂ ಹತ್ತನೆ ತರಗತಿ ಪಾಸಾದ ಅಮರಯ್ಯಸ್ವಾಮಿ ಜನಪದದಲ್ಲಿ ತೊಡಗಿಸಿಕೊಂಡು ಬಿಟ್ಟರು. ಚಿಕ್ಕವರಿದ್ದಾಗ ಭಜನೆ ಶಬ್ದ ಕೇಳಿದರೆ ಸಾಕು ಊಟವನ್ನು ಅರ್ಧಕ್ಕೆ ಬಿಟ್ಟು ಅಲ್ಲಿಗೆ ಹೋಗುತ್ತಿದ್ದರು.
ಅಜ್ಜಿ, ತಾಯಿ ಹೀಗೆ ತಲೆತಲಾಂತರದಿಂದ ಬಳುವಳಿಯಾಗಿ ಬಂದಿರುವ ಜನಪದವನ್ನು ಮುಂದುವರಿಸಿದ್ದಾರೆ. ಹತ್ತನೇ ತರಗತಿ ಓದುತ್ತಿರುವ ಏಕೈಕ ಪುತ್ರ ಷಣ್ಮುಕಸ್ವಾಮಿಗೂ ಜನಪದದಲ್ಲಿ ಅನನ್ಯ ಆಸಕ್ತಿ.
ಜಾಲಿಬೆಂಚಿಯ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಅರ್ಚಕರಾಗಿದ್ದಾರೆ. ಕೇವಲ ಒಂದು ಎಕರೆ ಭೂಮಿ ಇದೆ. ಪೂಜೆ, ವಾಸ್ತು, ಪಂಚಾಂಗದಿಂದ ಬರುವ ಹಣ ಸಂಸಾರಕ್ಕೆ ಆಸರೆ.
ಭಜನೆ, ತತ್ವ ಪದ, ಪುರವಂತಿಗೆ, ಗೀಗಿ ಪದ, ಮೋಹರಂ ಪದ ಪ್ರಕಾರಗಳಲ್ಲಿ ಸಿದ್ಧಹಸ್ತರಾಗಿರುವ ಅವರು, ರಂಗಕರ್ಮಿಯೂ ಹೌದು. ಜೊತೆಗೆ ಹಾರ್ಮೋನಿಯಂ, ಕೊಳಲು, ಡೋಲು ವಾದನದಲ್ಲಿ ಎತ್ತಿದ ಕೈ. ಅಮರಯ್ಯಸ್ವಾಮಿ ಅವರ ಭಜನೆ ಕೇಳಲು ನೂರಾರು ಜನ ಸೇರುತ್ತಾರೆ.
ಜನಪದವನ್ನೇ ಉಸಿರಾಗಿಸಿಕೊಂಡಿರುವ ಈ ಅಪರೂಪದ ಕಲಾವಿದರಿಗೆ ಪ್ರಸ್ತುತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಪ್ರಶಸ್ತಿ ₹25 ಸಾವಿರ ನಗದು ಹಾಗೂ ಫಲಕವನ್ನು ಹೊಂದಿದೆ.
ಪ್ರಶಸ್ತಿಗೆ ಆಸೆ ಪಡದೆ ಜನಪದಕ್ಕೆ ಜೀವನ ಮುಡಿಪಾಗಿಟ್ಟಿರುವೆ. ಜನಪದ ನಮ್ಮ ಸಂಸ್ಕೃತಿ ಜೀವಾಳವಾಗಿದೆಅಮರಯ್ಯಸ್ವಾಮಿ ಹಿರೇಮಠ ಪ್ರಶಸ್ತಿ ಪುರಸ್ಕೃತ
ಅಮರಯ್ಯಸ್ವಾಮಿ ಕಳೆದ 50 ವರ್ಷಗಳಿಂದ ಜನಪದದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಯಾದಗಿರಿ ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಶಿವಮೂರ್ತಿ ತನಿಖೆದಾರ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.