ADVERTISEMENT

ಹುಣಸಗಿ: ಸಂಗೀತದ ಎಲೆಮರೆಕಾಯಿ ಆಮಯ್ಯ ಮಠ

ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುವ ರಾಜನಕೋಳೂರು ಗ್ರಾಮದ ‘ಪೇಟಿ ಮಾಸ್ತರ್‌’

ಭೀಮಶೇನರಾವ ಕುಲಕರ್ಣಿ
Published 13 ಅಕ್ಟೋಬರ್ 2024, 6:10 IST
Last Updated 13 ಅಕ್ಟೋಬರ್ 2024, 6:10 IST
ಯಾದಗಿರಿಯಲ್ಲಿ ನಡೆದ ಸಂಗೀತ ಹಾಗೂ ನೃತ್ಯಕಲೋತ್ಸವದಲ್ಲಿ ರಾಜನಕೋಳೂರು ಗ್ರಾಮದ ಆಮಯ್ಯ ಮಠ ಅವರ ಸಂಗೀತ ಕಾರ್ಯಕ್ರಮ ನೀಡಿರುವುದು (ಸಂಗ್ರಹ ಚಿತ್ರ)
ಯಾದಗಿರಿಯಲ್ಲಿ ನಡೆದ ಸಂಗೀತ ಹಾಗೂ ನೃತ್ಯಕಲೋತ್ಸವದಲ್ಲಿ ರಾಜನಕೋಳೂರು ಗ್ರಾಮದ ಆಮಯ್ಯ ಮಠ ಅವರ ಸಂಗೀತ ಕಾರ್ಯಕ್ರಮ ನೀಡಿರುವುದು (ಸಂಗ್ರಹ ಚಿತ್ರ)   

ಹುಣಸಗಿ: ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿರುವ ಸಂಗೀತ ಕಲಾವಿದರೊಬ್ಬರು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಾ ಈ ಭಾಗದ ಮಕ್ಕಳಿಗೆ ಉಚಿತ ಸಂಗೀತ ಅಭ್ಯಾಸ ಮಾಡುತ್ತಾ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರಾಜನಕೋಳೂರು ಗ್ರಾಮದ ಆಮಯ್ಯ ಲಿಂಗಯ್ಯ ಹಿರೇಮಠ 73 ವರ್ಷದ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಂತೆ ಮಕ್ಕಳಿಗೆ ಉಚಿತವಾಗಿ ಹಾರ್ಮೋನಿಯಂ, ತಬಲಾ ಹಾಗೂ ಸಂಗೀತ ಶಿಕ್ಷಣ ನೀಡುವ ಮೂಲಕ ಸಂಗೀತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಂಗೀತ ಎಂಬುದು ನಿರಂತರದ ಸಾಧನೆಯ ಪ್ರತೀಕವಾಗಿದ್ದು, ಅದನ್ನು ಆರಾಧಿಸಿ ಆಸ್ವಾಧಿಸಿದಂತೆಲ್ಲ ನಮ್ಮಲ್ಲಿಯೂ ಹೆಚ್ಚಾಗುತ್ತದೆ. ಅದಕ್ಕಾಗಿ ಮಕ್ಕಳ ಜೊತೆಗೆ ನಾವು ಕೂಡಾ ಅಭ್ಯಾಸ ಮಾಡುವುದು ಅಗತ್ಯ ಎಂದು ಹೇಳುತ್ತಾರೆ ಆಮಯ್ಯ ಮಠ.

ADVERTISEMENT

ಕಳೆದ ಸುಮಾರು 4 ದಶಕಗಳಿಂದಲೂ ಈ ಭಾಗದಲ್ಲಿ ಯುವಕರಿಗೆ ನಾಟಕಗಳನ್ನು ಕಲಿಸುವ ಜೊತೆಯಲ್ಲಿ ನಿರ್ದೇಶಿಸಿ ಪೇಟಿ (ಹಾರ್ಮೋನಿಯಂ) ಮಾಸ್ತರ್‌ ಎಂದೇ ಆಮಯ್ಯ ಮಠ ಅವರು ಚಿರಪರಿಚಿತರಾಗಿದ್ದಾರೆ.

ಅಮರಲಿಂಗೇಶ್ವರ ಸಂಗೀತ ಪಾಠ ಶಾಲೆಯನ್ನು ನಡೆಸಿಕೊಂಡು ಬಂದಿದ್ದಾರೆ. ಇವರ ಶಾಲೆಯಲ್ಲಿ ಸಂಗೀತ ಕಲಿತ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಜೂನಿಯರ್ ಹಾಗೂ 20ಕ್ಕೂ ಹೆಚ್ಚು ಜನ ಸೀನಿಯರ್ ಹಾಗೂ 5 ಜನ ವಿದ್ವತ್ ಪರೀಕ್ಷೆ ಪಾಸು ಮಾಡಿದ್ದಾಗಿ ತಿಳಿಸಿದರು.

ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿರುವ ಆಮಯ್ಯ ಮಠ ಅವರು ಹಲವಾರು ವರ್ಷಗಳಿಂದ ಜಿಲ್ಲೆ ಸೇರಿದಂತೆ ರಾಯಚೂರು, ವಿಜಯಪುರ, ಕಲಬುರಗಿ, ಬಾಗಲಕೋಟೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಅಲ್ಲದೇ 1979 ಹಾಗೂ 1982ರಿಂದ 86ರವರೆಗೆ ನಡೆದ ಎಲ್ಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೀಡಿದ್ದು, ಇವರ ಹೆಗ್ಗಳಿಕೆಯಾಗಿದೆ ಎಂದು ಗ್ರಾಮದ ಪ್ರಭುಗೌಡ ಪಾಟೀಲ, ವೆಂಕನಗೌಡ ಮಾಲಿಪಾಟೀಲ ಹೇಳುತ್ತಾರೆ.

ಪ್ರಶಸ್ತಿಗಳು: ಆಮಯ್ಯ ಮಠ ಅವರ ಸೇವೆಯನ್ನು ಗುರುತಿಸಿ 2018ರಲ್ಲಿ ರಾಜ್ಯ ಸರ್ಕಾರದ ಸಂಗೀತ ಮತ್ತು ನೃತ್ಯ ಕಲಾ ಅಕಾಡೆಮಿಯಿಂದ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೇ ಜಿಲ್ಲಾ ರಾಜ್ಯೋತ್ಸವ, ಸಗರನಾಡು ಪ್ರತಿಷ್ಠಾನ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡುವ ಮೂಲಕ ಸಂಗೀತದ ಕುರಿತು ಆಸಕ್ತಿ ಮೂಡಿಸುವ ಆಮಯ್ಯ ಮಠ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಿ
ಎಚ್.ಸಿ. ಪಾಟೀಲ ಗ್ರಾಮದ ಮುಖಂಡ
ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಕಲಾವಿದರಿಗೆ ಗುರುತಿಸಿ ಉತ್ತೇಜನ ನೀಡಬೇಕು
ಬಸವರಾಜ ವಂದಲಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.