ADVERTISEMENT

ಹೊಸಕೇರಾ: ನನಸಾಗದ ಸೇತುವೆ ನಿರ್ಮಾಣದ ಕನಸು

ಟಿ.ನಾಗೇಂದ್ರ
Published 26 ಜೂನ್ 2024, 5:02 IST
Last Updated 26 ಜೂನ್ 2024, 5:02 IST
<div class="paragraphs"><p><strong>ಶಹಾಪುರ ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದ ಮುಂಭಾಗದಲ್ಲಿ ನಿರ್ಮಿಸಿದ ಶಹಾಪುರ ಮುಖ್ಯ ಕಾಲುವೆಗೆ ಅಡ್ಡಲಾಗಿ ಸೇತುವ ನಿರ್ಮಿಸಲು ಪಿಲ್ಲರ ಹಾಕಿ ಬಿಟ್ಟಿರುವುದು</strong></p></div>

ಶಹಾಪುರ ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದ ಮುಂಭಾಗದಲ್ಲಿ ನಿರ್ಮಿಸಿದ ಶಹಾಪುರ ಮುಖ್ಯ ಕಾಲುವೆಗೆ ಅಡ್ಡಲಾಗಿ ಸೇತುವ ನಿರ್ಮಿಸಲು ಪಿಲ್ಲರ ಹಾಕಿ ಬಿಟ್ಟಿರುವುದು

   

ಶಹಾಪುರ: ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದ ಮುಂಭಾಗದಲ್ಲಿ ಶಹಾಪುರ ಮುಖ್ಯ ಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಎಂದು ಹಲವಾರು ವರ್ಷಗಳಿಂದ ಹೊಸಕೇರಾ, ಗಂಗು ನಾಯಕ್ ಹಾಗೂ ಸುತ್ತಮುತ್ತಲಿನ ತಾಂಡಾಗಳ ನಿವಾಸಿಗಳು ಹಲವು ವರ್ಷಗಳಿಂದ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಕಾಲುವೆಯು ಜನ ಸಂಪರ್ಕ ಕಿತ್ತುಕೊಂಡಿದೆ. ಸೇತುವೆ ನಿರ್ಮಾಣಕ್ಕೆ ನಿಗಮದ ಅಧಿಕಾರಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಾಂಡಾದ ನಿವಾಸಿಗಳು ದೂರಿದರು.

ADVERTISEMENT

ಸುಮಾರು 45 ವರ್ಷಗಳ ಹಿಂದೆ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ನಿರ್ಮಾಣದ ಜೊತೆಗೆ ಶಹಾಪುರ ಮುಖ್ಯ ಕಾಲುವೆ ನಿರ್ಮಾಣ ಕಾರ್ಯ ನಡೆಯಿತು. ಅತ್ಯಂತ ಕೆಳಮಟ್ಟದಲ್ಲಿ ಕಾಲುವೆ ನಿರ್ಮಾಣ ಮಾಡಿದ್ದರಿಂದ ಕಾಲುವೆ ದಾಟಿ ಹೋಗಲು ಅಸಾಧ್ಯವಾಗಿದೆ.

ಸೇತುವೆ ನಿರ್ಮಿಸುವುದರಿಂದ ಕೃಷಿ ಚಟುವಟಿಕೆ ಹಾಗೂ ಜನ ಸಂಪರ್ಕಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗಂಗು ನಾಯಕ್ ತಾಂಡಾದ ನಿವಾಸಿ ಚನ್ನಪ್ಪ ರಾಠೋಡ.

ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ನಾಲೆಗಳ ನವೀಕರಣದ ಸಂದರ್ಭದಲ್ಲಿ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಜನ ಪ್ರತಿಭಟನೆ ನಡೆಸಿ, ಕಾಮಗಾರಿ ತಡೆದಿದ್ದರು. ಆಗ ಸೇತುವೆ ನಿರ್ಮಿಸಲು ನಾಲೆ ನವೀಕರಣದ ಗುತ್ತಿಗೆ ಪಡೆದ ಕಂಪನಿ ಒಪ್ಪಿಕೊಂಡು ಪಿಲ್ಲರ್ ಹಾಕಿ ಕೆಲಸ ಆರಂಭಿಸಿತು. ಕೆಲ ದಿನಗಳ ಬಳಿಕ ನಾಲೆ ನವೀಕರಣ ಕೆಲಸ ಪೂರ್ಣ ಗೊಂಡಿತು. ಬಳಿಕ ಸೇತುವೆ ನಿರ್ಮಾಣ ಮಾಡದೆ ಬಿಟ್ಟು ಹೋಗಿ ಮೋಸ ಮಾಡಿದರು ಎನ್ನುತ್ತಾರೆ ಹೊಸಕೇರಾ ಮೇಲಿನ ತಾಂಡಾದ ನಿವಾಸಿಗಳು.

ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮಕ್ಕೆ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಂದಾಗ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದೆವು. ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ತಾಂಡಾದ ನಿವಾಸಿಗಳು ಮನವಿ ಸಲ್ಲಿಸಿದಾಗ ನಿಗಮದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಹಿಂಬರಹ ನೀಡಿದ್ದಾರೆ. ನಾಲೆ ನವೀಕರಣದ ಸಮಯದಲ್ಲಿ ಸೇತುವೆ ನಿರ್ಮಿಸಲು ಒಪ್ಪಿ ಪಿಲ್ಲರ್ ಹಾಕಿರುವುದು ಯಾವ ಉದ್ದೇಶಕ್ಕಾಗಿ ಎಂದು ಪ್ರಶ್ನಿಸುತ್ತಾರೆ ತಾಂಡಾದ ನಿವಾಸಿಗಳು.

‘ಪರ್ಯಾಯ ಮಾರ್ಗ ಬಳಸಿ’

ಶಹಾಪುರ ಮುಖ್ಯ ಕಾಲುವೆ ಕಿ.ಮೀ 28ರ ಬಳಿ ಸೇತುವೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದಾಗ ಸ್ಥಳ ಸುಮಾರು 25 ಮೀಟರ್ ಆಳದಲ್ಲಿದೆ. ಇಲ್ಲಿ ಸೇತುವೆ ನಿರ್ಮಿಸುವ ಬದಲು 400 ಮೀಟರ್ ದೂರದಲ್ಲಿರುವ ವೈ ಜಂಕ್ಷನ್ ಬಳಿ ಇರುವ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಉಪಯೋಗಿಸಬಹುದು ಎಂದು ಕೆಬಿಜೆಎನ್‌ಎಲ್‌ನ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಲಿಖಿತವಾಗಿ ತಿಳಿಸಿದ್ದಾರೆ.

ಹೊಸಕೇರಾ ತಾಂಡಾದ ನಿವಾಸಿ ವೆಂಕಟೇಶ ಅವರು ಮುಖ್ಯಮಂತ್ರಿ ಜನತಾ ದರ್ಶನದಲ್ಲಿ 2023ರ ನವಂಬರ್ 28ರಂದು ಮನವಿ ಸಲ್ಲಿಸಿದಾಗ ನಿಗಮದ ಅಧಿಕಾರಿಗಳು ನೀಡಿದ ಹಿಂಬರಹ ಇದಾಗಿದೆ.

ಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ಗಂಗು ನಾಯಕ್ ತಾಂಡಾದ ನಿವಾಸಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಹೊಸಕೇರಾ ಮೇಲಿನ ತಾಂಡಾಕ್ಕೆ ಬರಬೇಕಾದರೆ 3 ಕಿ.ಮೀ ಸುತ್ತುವರಿದು ವೈ–ಜಂಕ್ಷನ್ ಮೂಲಕ ಹಾದು ಬರಬೇಕು. ರೈತರಿಗೆ ತುಂಬಾ ತೊಂದರೆಯಾಗಿದೆ.
ಚನ್ನಪ್ಪ, ಗುಂಗು ನಾಯಕ್ ತಾಂಡಾದ ನಿವಾಸಿ
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಹೆಚ್ಚಿನ ಅನುದಾನದ ಅಗತ್ಯ ಇರುವುದರಿಂದ ವಿಳಂಬವಾಗುತ್ತಿದೆ. ವಿಶೇಷ ಅನುದಾನದ ಅಡಿಯಲ್ಲಿ ಸೇತುವೆ ನಿರ್ಮಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು.
ಮಾನಸಿಂಗ್ ಚವ್ಹಾಣ, ಜಿ.ಪಂ. ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.