ADVERTISEMENT

₹2 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು; ದೂರುದಾರನೇ ಆರೋಪಿ

ಟಿ.ನಾಗೇಂದ್ರ
Published 23 ಸೆಪ್ಟೆಂಬರ್ 2024, 5:59 IST
Last Updated 23 ಸೆಪ್ಟೆಂಬರ್ 2024, 5:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್)ನಲ್ಲಿ ಉಗ್ರಾಣ ಕೇಂದ್ರ (ದಾಸ್ತಾನು)ದಲ್ಲಿ ಇಟ್ಟಿದ್ದ ₹2.06 ಕೋಟಿ ಮೌಲ್ಯದ 6,677ಕ್ವಿಂಟಾಲ್ ಪಡಿತರ (ಅನ್ನಭಾಗ್ಯ) ನಾಪತ್ತೆಯಾಗಿರುವ ಪ್ರಕರಣದಲ್ಲಿ ದೂರುದಾರ ಜಿಲ್ಲಾ ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಭೀಮರಾಯ ಮಾರ್ಕಂಡಪ್ಪ ಮಸಾಳಿ ಆರೋಪಿಯಾಗಿದ್ದಾರೆ. (ನ.14). ಒಟ್ಟು 17 ಜನರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.

ಶಹಾಪುರ ಠಾಣೆಯಲ್ಲಿ 2023 ಡಿ.4 ರಂದು ಜಿಲ್ಲಾ ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಭೀಮರಾಯ ಅವರು ಟಿಎಪಿಸಿಎಂಎಸ್ ವಿರುದ್ಧ ಅಕ್ಕಿ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದರು.

ಅದರಂತೆ ಶಹಾಪುರದ ಆಹಾರ ನಿರೀಕ್ಷಕ ವಿಜಯರಡ್ಡಿ ಬೆಕ್ಕಿನಾಳ(ನ.15), ವಡಗೇರಾ ಆಹಾರ ನಿರೀಕ್ಷಕ ನಾಗಪ್ಪ ಮೇಸ್ತ್ರಿ, ಶಹಾಪುರ ಆಹಾರ ಶಿರಸ್ತೆದಾರ ಪ್ರಮೀಳಾ ಮುನ್ನಗಲಕರ್ ಪ್ರಮುಖ ಸರ್ಕಾರಿ ಅಧಿಕಾರಿ ಆರೋಪಿಯಾಗಿದ್ದಾರೆ.

ADVERTISEMENT

ಅಲ್ಲದೆ ಚಿತ್ತಾಪುರ ತಾಲ್ಲೂಕಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್,(ನ್ಯಾಯಾಂಗ ಬಂಧನದಲ್ಲಿ ಇದ್ದಾರೆ), ಹಾಗೂ ಮಣಿಕಂಠ ಸಹೋದರ ರಾಜು, ಹಾಗೂ ರಾಜು ಅವರ ಪತ್ನಿ ಚಂದ್ರಿಕಾ ಮತ್ತು ಮಣಿಕಂಠ ರಾಠೋಡ ಅವರ ತಂದೆ ನರೇಂದ್ರ ರಾಠೋಡ್ ಅವರೂ ಆರೋಪಿಗಳಾಗಿದ್ದಾರೆ.

ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ಶಿವಪ್ಪ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಶಿವರಾಜ, ನ್ಯಾಯಬೆಲೆ ಅಂಗಡಿಯ ಶಹಾಪುರದ ಅಬ್ದುಲ್ ನಬಿ ಬೈರಿ, ಮಹಿಬೂಬು ತರ್ಕಾಶಿ, ಅಕ್ಕಿ ವ್ಯಾಪಾರಿ ವೆಂಕಟೇಶ ನಾಶಿ, ಶರಣಪ್ಪ ಭಂಗಿ, ಮಲ್ಲಣ್ಣಗೌಡ ಕೊಳುರ, ಮುಂಬೈ ಲಖನ ಪಟೇಲ್, ಕೋಲಾರದ ಸಯ್ಯದ್ ಇಶಾನ್ ಸೇರಿದ್ದಾರೆ.

ಅಲ್ಲದೆ ಆರೋಪಿಗಳಿಂದ ₹52.70ಲಕ್ಷ ನಗದು, ಅಕ್ಕಿ ಸಾಗಣೆ ಮಾಡಲು ಬಳಸಿದ ವಿವಿಧ ವಾಹನ, ನಾಲ್ಕು ಮೊಬೈಲ್ ಹಾಗೂ 1,120 ಕ್ವಿಂಟಾಲ್ ಅಕ್ಕಿ (ಅಕ್ಕಿ ಮೌಲ್ಯ ₹41.49ಲಕ್ಷ) ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಎಂದು ಚಾರ್ಜ್‌ಶೀಟ್‌ನಲ್ಲಿ ನಮೂದಿಸಿದ್ದಾರೆ.

ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ ನೇತೃತ್ವದಲ್ಲಿ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತ್ತು. ಆಗ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಹೆಸರು ತಳಕು ಹಾಕಿಕೊಂಡಾಗ ಪಕ್ಷವು ಮುಜುಗರಕ್ಕೆ ಸಿಲುಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.