ADVERTISEMENT

ಈಜುಕೊಳ ಈ ಬೇಸಿಗೆಗೂ ಅಲಭ

ಅವಧಿ ಮುಗಿದರೂ ಪೂರ್ಣಗೊಳ್ಳದ ಕಾಮಗಾರಿ

ಮಲ್ಲೇಶ್ ನಾಯಕನಹಟ್ಟಿ
Published 24 ಫೆಬ್ರುವರಿ 2019, 10:49 IST
Last Updated 24 ಫೆಬ್ರುವರಿ 2019, 10:49 IST
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನನೆಗುದಿಗೆ ಬಿದ್ದಿರುವ ಈಜುಕೊಳ
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನನೆಗುದಿಗೆ ಬಿದ್ದಿರುವ ಈಜುಕೊಳ   

ಯಾದಗಿರಿ:ನಗರದಲ್ಲಿನ ಜಿಲ್ಲಾಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಕೊಳ ಕಾಮಗಾರಿ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳೆ ಗತಿಸಿದರೂ, ಈಜುಕೊಳದತ್ತ ಜಿಲ್ಲಾಡಳಿತ ಕಣ್ಣು ಹಾಯಿಸದೇ ಇರುವುದರಿಂದ ಈ ಸಲ ಬೇಸಿಗೆಗೂ ಈಜುಪ್ರಿಯರಿಗೆ ಈಜುಕೊಳ ಅಲಭ್ಯ ಎನ್ನುವಂತಾಗಿದೆ.

2016–17ನೇ ಸಾಲಿನಲ್ಲಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಟ್ಟು ₹1.99 ಕೋಟಿ ವೆಚ್ಚದಲ್ಲಿ ‘ಈಜುಕೊಳ’ ಕಾಮಗಾರಿಗೆ ಚಾಲನೆ ನೀಡಿತ್ತು. ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದು ಈಜುಕೊಳ ನಿರ್ಮಾಣ ಕಾಮಗಾರಿ ಟೆಂಡರ್ ಪಡೆದುಕೊಂಡಿದೆ. ಆದರೆ, ಗುತ್ತಿಗೆದಾರರು ಈಜುಕೊಳ ಕಾಮಗಾರಿಗೆ ಬುನಾದಿ ಹಾಕಿದ್ದು, ನಾಲ್ಕು ವರ್ಷದಲ್ಲಿ ಶೇ 70ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸ್ನಾನದ ಕೋಣೆ, ವಸ್ತ್ರ ಬದಲಾವಣೆ ಕೋಣೆ, ಕಚೇರಿ ಕೋಣೆ ನಿರ್ಮಾಣಗೊಂಡಿವೆ. ಈಚೆಗೆ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, ನೀರು ಪೂರೈಕೆ ಪೈಪ್‌ಲೈನ್ ಮತ್ತು ಇತರೆ ಕಾಮಗಾರಿಗಳನ್ನು ನಿರ್ಲಕ್ಷಿಸಲಾಗಿದೆ. ಇದರಿಂದ ಜನರ ಬಹು ನಿರೀಕ್ಷೆಯ ಈಜುಕೊಳ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಮಾರ್ಚ್‌ ಕಾಲಿಡುವ ಮುನ್ನವೇ ಜಿಲ್ಲೆಯಲ್ಲಿ ಈಗ 38 ಡಿಗ್ರಿಯಷ್ಟು ತಾಪಮಾನ ಹೆಚ್ಚಿದೆ. ಈಜುಪ್ರಿಯರು ಕೆರೆ–ಕಟ್ಟೆ–ಬಾವಿಗಳತ್ತ ಧಾವಿಸುತ್ತಿದ್ದಾರೆ. ಆದರೆ, ಈ ಸಲ ಮಳೆ ಅಭಾವದಿಂದಾಗಿ ಕೆರೆ–ಕಟ್ಟೆ–ಬಾವಿಗಳೂ ಬತ್ತಿವೆ. ಇದರಿಂದ ಈಗಾಗಲೇ ನಗರದಲ್ಲಿ ಖಾಸಗಿ ಒಡೆತನದ ಈಜುಕೊಳಗಳು ಸಿದ್ಧಗೊಂಡಿವೆ.

ADVERTISEMENT

ಕಳೆದ ಬೇಸಿಗೆಯಲ್ಲಿ ಖಾಸಗಿ ಈಜುಕೊಳದಲ್ಲಿ ಒಬ್ಬರಿಗೆ ₹50 ಈಜುಶುಲ್ಕ ಇತ್ತು. ಈ ಬಾರಿ ಮಳೆ ಕೊರತೆಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗಿದ್ದು, ಈಜುಕೊಳಗಳಲ್ಲಿ ಈಜುಶುಲ್ಕ ದರವೂ ಏರಿದೆ ಎನ್ನಲಾಗಿದೆ. ಒಬ್ಬರಿಗೆ ₹80ರಿಂದ ₹100 ದರ ನಿಗದಿಯಾಗಬಹುದು ಎನ್ನುತ್ತಾರೆ ಈಜುಪ್ರಿಯರಾದ ವೈಜನಾಥ್.

ಒಂದು ಈಜುಕೊಳ ಕಾಮಗಾರಿ ಪೂರ್ಣಗೊಳಿಸಲು ನಾಲ್ಕು ವರ್ಷ ಅವಧಿ ಬೇಕೆ? ಇಷ್ಟ ಕಾಲಾವಧಿಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ನಿರ್ಮಾಣದ ಹೊಣೆ ಪಡೆದುಕೊಂಡ ಗುತ್ತಿಗೆದಾರರು ಇಷ್ಟು ವಿಳಂಬ ಮಾಡಿದರೂ ಜಿಲ್ಲಾಧಿಕಾರಿ ಯಾವುದೇ ಕ್ರಮಗೊಂಡಿಲ್ಲ. ಟೆಂಡರ್ ನಿಯಮಗಳ ಪ್ರಕಾರ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಟೆಂಡರ್ ಠೇವಣಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಮರೆಪ್ಪ ನಾಯಕ ಆಗ್ರಹಿಸಿದ್ದಾರೆ.

‘ಸರ್ಕಾರ ₹2 ಕೋಟಿಯಷ್ಟು ಅನುದಾನ ವ್ಯಯಿಸಿದರೂ, ಈಜುಕೊಳ ಸೌಲಭ್ಯ ಮಾತ್ರ ಜಿಲ್ಲೆಯ ಜನರಿಗೆ ಸಿಕ್ಕಿಲ್ಲ. ಈಜುಕೊಳ ಇರುವ ಜಿಲ್ಲಾ ಕ್ರೀಡಾಂಗಣ ವಿಸ್ತೀರ್ಣದಲ್ಲಿ ಏಷ್ಯಾಖಂಡದಲ್ಲೇ ದೊಡ್ಡ ಕ್ರೀಡಾಂಗಣ ಎಂಬ ಖ್ಯಾತಿ ಪಡೆದಿದೆ. ಆದರೆ, ಕ್ರೀಡಾಂಗಣದ ತುಂಬಾ ಜಾಲಿಗಿಡಗಳೇ ತುಂಬಿವೆ. ಕ್ರೀಡಾ ವಸತಿ ಶಾಲೆ, ಯುವ ಸ್ಪಂದನ ಕೇಂದ್ರ ಕಚೇರಿಗಳು ಇದೇ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೂ, ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಅಳವಡಿಸಿರುವ ಸೋಲಾರ್‌ ಬೀದಿದೀಪಗಳು ಬೆಳಕು ನೀಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.