ಶಹಾಪುರ: ಜೆಡಿಎಸ್ ನಗರ ಘಟಕದ ಅಧ್ಯಕ್ಷ, ಆರ್‌ಟಿಐ ಕಾರ್ಯಕರ್ತ ಬಸವರಾಜ ಅರುಣಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಾಗಿದೆ.
‘ಸೋಮವಾರ ಸಂಧಾನಕ್ಕೆ ಮನೆಗೆ ಬರುವಾಗ ಬಸವರಾಜ ಅರುಣಿ ಸಿಹಿ ತಿನಿಸು ತಂದಿದ್ದರು. ಅದರಲ್ಲಿ ವಿಷ ಬೆರೆಸಿದ್ದರು. ಕೊಲೆಗೆ ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಗುತ್ತಿಗೆದಾರ ವಿಶ್ವನಾಥರಡ್ಡಿ ದರ್ಶನಾಪುರ ದೂರಿನಲ್ಲಿ ತಿಳಿಸಿದ್ದಾರೆ.
ಪಿಎಸ್ಐ ಶ್ಯಾಮ ಸುಂದರ ನಾಯಕ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿಹಿ ತಿನಿಸು, ಇತರ ವಸ್ತುಗಳನ್ನು ಪರಿಶೀಲಿಸಿದರು.
ಪ್ರತಿದೂರು: ‘ವಿಶ್ವನಾಥರಡ್ಡಿ ದರ್ಶನಾಪುರ, ಬಿಸಿಎಂ ಅಧಿಕಾರಿ ಶರಣಪ್ಪ ಬಳಬಟ್ಟಿ, ಜಗನ್ನಾಥರಡ್ಡಿ, ಶರಣಗೌಡ, ಶಿವಶಂಕರ ಸೇರಿ 8 ರಿಂದ 10 ಮಂದಿ ಸೇರಿ ನನ್ನ ಕೊಲೆಗೆ ಯತ್ನಿಸಿದ್ದಾರೆ’ ಎಂದು ಬಸವರಾಜ ಅರುಣಿ ಪ್ರತಿ ದೂರು ನೀಡಿದ್ದಾರೆ.
‘ಮೋಸದಿಂದ ನನ್ನನ್ನು ಕರೆಯಿಸಿ ಮನೆಯಲ್ಲಿ ಕೂಡಿಹಾಕಿ, ನನ್ನ ಅಂಗಿ, ಪ್ಯಾಂಟ್ ಕಳಚಿ ಅರೆ ನಗ್ನಮಾಡಿದರು. ನಂತರ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಫೋಟೊ ತೆಗೆದು ಮಾನಹಾನಿ ಮಾಡಿದರು. ಮುಖ್ಯ ಪ್ರವರ್ತಕ ಹುದ್ದೆ ಬಿಡು,ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‌ನ ಹಣ ದುರ್ಬಳಕೆ ಪ್ರಕರಣ ಹಿಂಪಡೆಯಿರಿ ಒತ್ತಡ ಹಾಕಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.