ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ಸೋಮವಾರ ಜರುಗಿದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಉಂಟಾದ ಕಾಲ್ತುಳಿತಕ್ಕೆ ಬಲಿಯಾಗಿರುವ ಬಾಲಕಿ ತುಳಸಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ.
ಮಲಗಿದ್ದ ಬಾಲಕಿಯ ಮೇಲೆ ರಥದ ಗಾಲಿಗಳು ಹರಿದಿದೆ. ಇದಕ್ಕೆ ಜಾತ್ರಾ ರಥೋತ್ಸವದ ಹೊಣೆಹೊತ್ತ ಸಮಿತಿ ಜಾಗರೂಕತೆ ವಹಿಸಬೇಕಿತ್ತು ಎಂಬುದಾಗಿ ಜನರು ಮಾತನಾಡಿಕೊಂಡರೆ; ಪೊಲೀಸರು ಉಚ್ಛಾಯ ಎಳೆಯುವಾಗ ಹಾದಿಯಲ್ಲಿನ ಜನರನ್ನು ಚದುರಿಸುತ್ತಿದ್ದರು. ಬಿಗಿಭದ್ರತೆ ಒದಗಿಸುತ್ತಿದ್ದರು. ಆದರೆ, ಮೊನ್ನೆ ಉಚ್ಛಾಯ ಸಂದರ್ಭದಲ್ಲಿ ಪೊಲೀಸರೊಬ್ಬರೂ ಭದ್ರತೆ ದೃಷ್ಟಿಯಿಂದ ಸ್ಥಳದಲ್ಲಿ ಹಾಜರಿರಲಿಲ್ಲ. ಘಟನೆಗೆ ಪೊಲೀಸರೇ ನೇರ ಹೊಣೆಗಾರರಾಗಿದ್ದಾರೆ ಎಂಬುದಾಗಿ ಕೆಲ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಪ್ರಕರಣದಲ್ಲಿ ಬಾಲಕಿಯ ತಂದೆ ದುರ್ಗಪ್ಪನವರ ಎರಡೂ ಕಾಲಿನ ಮೂಳೆಗಳು ಮುರಿದಿವೆ! ಮಗಳನ್ನು ಕಳೆದುಕೊಂಡಿರುವ ದುರ್ಗಪ್ಪ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ದುರ್ಗಪ್ಪ ಅವರ ಪತ್ನಿ ಶಾಂತಮ್ಮ ಯಾದಗಿರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡನ ಸ್ಥಿತಿಗೆ ಮರುಗುತ್ತಾ, ಕಣ್ಮರೆಗೊಂಡ ಕರುಳಬಳ್ಳಿಯನ್ನು ನೆನೆಯುತ್ತಾ ಕಣ್ಣೀರಾಗಿದ್ದರು.
ಘಟನೆ ನಡೆದಿದ್ದು ಹೇಗೆ?:ವಡಗೇರಾ ಗ್ರಾಮದ ನಿವಾಸಿಯಾಗಿರುವ ಜೋಗಿ ಜನಾಂಗದ ದುರ್ಗಪ್ಪ ಪ್ರತಿವರ್ಷದಂತೆ ಹಾಲಗೇರಾ ಜಾತ್ರಾ ಮಹೋತ್ಸವದಲ್ಲಿ ಮಕ್ಕಳಾಟಿಗೆ ಮಾರಾಟಕ್ಕೆ ಹೋಗಿದ್ದರು. ಯಲ್ಲಮ್ಮ ದೇವಿ ದೊಡ್ಡ ರಥೋತ್ಸವಕ್ಕೂ ಮುಂಚೆ ಉಚ್ಛಾಯ ಎಳೆಯುವುದು ಜಾತ್ರಾ ಸಂಪ್ರದಾಯವಾಗಿದೆ. ಫೆ.18ರಂದು ರಾತ್ರಿ11.30ಕ್ಕೆ ಪ್ರತಿವರ್ಷದಂತೆ ಉಚ್ಛಾಯ ಜರುಗಿದೆ. ಉಚ್ಛಾಯವನ್ನು ಎಳೆಯುವಾಗ ಭಕ್ತರು ಪಾನಮತ್ತರಾಗಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ತೇರುಬೀದಿಯಲ್ಲೇ ಅಂಗಡಿ ಮುಂದೆ ದುರ್ಗಪ್ಪ ಮಗಳೊಂದಿಗೆ ಮಲಗಿದ್ದರು. ಪೂರ್ವ ಸೂಚನೆ ಇಲ್ಲದೇ ನಶೆಯಲ್ಲಿ ಕೆಲವರು ಉಚ್ಛಾಯ ಎಳೆದಿದ್ದರಿಂದ ಅದು ನೇರವಾಗಿ ರಸ್ತೆ ಮೇಲೆ ಚಲಿಸದೆ ಅಡ್ಡಾದಿಡ್ಡಿ ಚಲಿಸಿದೆ. ಇದರಿಂದ ಕಾಲ್ತುಳಿತ ಉಂಟಾಗಿ ಬಾಲಕಿ ತಳಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಉಚ್ಛಾಯದ ಗಾಲಿಗಳು ದುರ್ಗಪ್ಪನ ಎರಡೂ ಕಾಲುಗಳ ಮೇಲೆ ಹರಿದಿವೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ ಗೆ ತಿಳಿಸಿದರು.
ಯಲ್ಲಮ್ಮದೇವಿ ಜಾತ್ರೆ ರಾತ್ರಿ ಸಂದರ್ಭದಲ್ಲಿ ಜರಗುತ್ತದೆ. ಇದರಿಂದ ಮದ್ಯಸೇವಿಸಿ ರಥ ಎಳೆಯುವವರೇ ಹೆಚ್ಚು. ಫೆ.18ರ ರಾತ್ರಿ ಕೂಡ ಭಕ್ತರು ನಶೆಯಲ್ಲಿದ್ದರು. ಅವರು ಉಚ್ಛಾಯ ಎಳೆದಿದ್ದರಿಂದ ಅಮಾಯಕ ಬಾಲಕಿ ಬಲಿಯಾಗಿ, ಬಡಕುಟುಂಬಕ್ಕೆ ಆಧಾರವಾಗಿದ್ದ ದುರ್ಗಪ್ಪ ಕೂಡ ನೆಲ ಹಿಡಿಯುವಂತಾಗಿದೆ. ಜಿಲ್ಲಾಡಳಿತ ಜಾತ್ರೆಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದರೂ, ಜಾತ್ರೆಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ!
ಅಚ್ಚರಿ ಎಂದರೆ ಮೃತಪಟ್ಟಿರುವ ಬಾಲಕಿ ತುಳಸಿಯ ಶವ ಪರೀಕ್ಷೆ ಕೂಡ ನಡೆದಿಲ್ಲ. ಕಾಲ್ತುಳಿತಕ್ಕೊಳಗಾಗಿ ಸಾವು ಸಂಭವಿಸಿದ್ದರೂ, ಜಾತ್ರಾ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ! ಗ್ರಾಮದ ಮುಖಂಡರು ರಾಜಕೀಯ ಪ್ರಭಾವ ಬೀರಿ ಪ್ರಕರಣ ದಾಖಲಿಸದಂತೆ ಬಾಲಕಿಯ ಕುಟುಂಬದ ಸದಸ್ಯರನ್ನು ತಡೆದಿದ್ದಾರೆ. ಕುಟುಂಬದ ಸದಸ್ಯರು ದೂರು ದಾಖಲಿಸಲು ಮುಂದಾದಾಗ ಅಲ್ಲಿನ ಮುಖಂಡರು,‘ಯಾರ ಮೇಲೆ ದೂರು ನೀಡುತ್ತೀರಿ? ಇದು ಆಕಸ್ಮಿಕವಾಗಿ ನಡೆದ ಘಟನೆ. ಬಾಯಿಮುಚ್ಚಿಕೊಂಡು ಇದ್ದರೆ ಏನಾದರೂ ಸಿಗುತ್ತದೆ. ಇಲ್ಲ ಅಂದರೆ ಗತಿ ನೆಟ್ಟಗಿರುವುದಿಲ್ಲ’ ಎಂದು ನೊಂದವರ ಬಾಯಿ ಮುಚ್ಚಿಸಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಸ್ಥಳೀಯ ಮುಖಂಡರು ಬಾಲಕಿಯ ಕುಟುಂಬಕ್ಕೆ ₹10 ಸಾವಿರ ಪರಿಹಾರ ನೀಡಿದ್ದಾರಷ್ಟೇ. ಅತ್ತ ಮಗಳನ್ನು, ಇತ್ತ ಕಾಲುಗಳನ್ನು ಕಳೆದುಕೊಂಡು ಪರಿಹಾರ ಕೂಡ ಕಾಣದೆ ದುರ್ಗಪ್ಪ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.