ಯಾದಗಿರಿ: ‘ಬಿದಿರು ಬೆಳೆ ರೈತರಿಗೆ ಆಶಾಕಿರಣವಾಗಿದ್ದು, ಭವಿಷ್ಯದ ಬಹೂಪಯೋಗಿ ಕೃಷಿ ಉತ್ಪನ್ನವಾಗಲಿದೆ’ ಎಂದು ಶಿವಮೊಗ್ಗ ಜಿಲ್ಲೆಯ ಸಾಗರದಬ್ಯಾಂಬೂ ಶೂಟ್ಸ್ ಆ್ಯಂಡ್ ವುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.
ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಯಾದಗಿರಿ ವಿಸ್ತರಣಾ ಘಟಕದಲ್ಲಿ ಯಾದಗಿರಿ ಸ್ವಾಭಿಮಾನಿ ಕಲ್ಯಾಣ ಕರ್ನಾಟಕ ಅಸೋಸಿಯೇಷನ್, ಬಂಬೂ ಶೂಟ್ಸ್ ಆ್ಯಂಡ್ ವುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಾಗರ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಯಾದಗಿರಿ ಸಹಯೋಗದಲ್ಲಿ ರೈತರಿಗೆ ಆಯೋಜಿಸಿದ್ದ ಬಂಬೂ ಕೃಷಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಮನುಷ್ಯನ ದಿನಬದುಕಿಗೆ ಅತಿ ಅವಶ್ಯವಾದ ಎಥೆನಾಲ್‌ನಿಂದ ಹಿಡಿದು, ಉದ್ಯಮಗಳ ಉರುವಲಿಗೆ ಬಳಸುವ ಕಲ್ಲಿದ್ದಲು ಮಾಡಲು, ಕಾಗದದ ಉದ್ಯಮದಲ್ಲಿ ಪಲ್ಪವುಡ್ ಆಗಿ, ಪಾಲಿಫೈಬರ್, ಪ್ಲೈವುಡ್ ಉದ್ಯಮ, ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡವುದಲ್ಲದೇ ಊದಿನಕಡ್ಡಿ ಉದ್ಯಮ, ಗೃಹ ಬಳಕೆ ವಸ್ತುಗಳಾಗಿ, ಪೀಠೋಪಕರಣಗಳ ತಯಾರಿಕೆ, ಕಾಲೇಜು ನಿರ್ಮಾಣಕ್ಕಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಬಳಸಬಹುದಾದ ಬಿದಿರಿಗೆ ಭವಿಷ್ಯದಲ್ಲಿ ಬೇಡಿಕೆ ಇದೆ ಎಂದು ವಿವರಿಸಿದರು.
ಬಿದಿರು ಕೃಷಿಗೆ ಕೇಂದ್ರ ಸರ್ಕಾರವು ವ್ಯಾಪಕ ಉತ್ತೇಜನ ನೀಡುತ್ತಿದೆ. ಮಾರುಕಟ್ಟೆಯ ವಿಫುಲ ಅವಕಾಶಗಳು ರೈತರನ್ನು ಕೈ ಬೀಸಿ ಕರೆಯುತ್ತಿದೆ. ಬಿದಿರು ಎಂಥದೇ ಹವಾಮಾನದಲ್ಲಿ ಎಂಥದೇ ಮಣ್ಣಿನಲ್ಲಿ ಕಡಿಮೆ ಆರೈಕೆಯಲ್ಲಿ ಬೆಳೆಯಬಹುದಾಗಿದೆ. ಬಿದಿರು ನೆಟ್ಟು ಐದು ವರ್ಷ ಅದರ ಆರೈಕೆ ಮಾಡಿದರೆ ಮುಂದಿನ ಐವತ್ತು ವರ್ಷ ಅದು ನಮ್ಮನ್ನು ನೋಡಿಕೊಳ್ಳುತ್ತದೆ ಎಂದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ರಾಜಕುಮಾರ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಸೌಲತ್ತುಗಳನ್ನು ಸರ್ಕಾರ ಒದಗಿಸಿದೆ. ಇದನ್ನು ಬೆಳೆದು ರೈತರು ಲಾಭ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಸಂತೋಷ ಜವಳಿ, ಜಿಲ್ಲೆಯಲ್ಲಿ ರೈತರಿಗೆ ಆರ್ಥಿಕ ಸಬಲೀಕರಣ ಮಾಡಲು ಸಂಸ್ಥೆಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಬಂಬು ಬೆಳೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಪ್ರಾಧ್ಯಾಪಕ ಡಾ. ರೇವಣಪ್ಪ ಬಿದಿರು ಹುಲ್ಲಿನ ಜ್ಯಾತಿಗೆ ಸೇರಿದ್ದರೂ ಕಬ್ಬಿಣಕಿಂತಲೂ ಗಟ್ಟಿಯಾಗಿರುವುದಾಗಿದೆ. ಅತ್ಯಂತ ವೇಗವಾಗಿ (ದಿನಕ್ಕೆ 2 ಅಡಿ) ಬೆಳೆದು ಶೇ 15 ರಷ್ಟು ಮನೆಕಟ್ಟಿಕೊಳ್ಳಲು ಸಹಕಾರಿಯಾಗಿದ್ದು, ಬೇರೆ ಸಾಮಾನ್ಯ ಗಿಡಗಳಿಗಿಂತ ಶೇ 35 ರಷ್ಟು ಹೆಚ್ಚಿಗೆ ಆಮ್ಲಜನಕ ಒದಗಿಸುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ ಎಂದು ಬಿದಿರಿನ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿಜಯ ರಾಠೋಡ, ಶರವು ಕುಮಾರ, ವಿರೂಪಾಕ್ಷ ಕುಂಟಿಮರಿ, ಸೂಗಪ್ಪ ಗಣಪುರ, ದುರ್ಗಣ್ಣ ಹಪ್ಪಳ, ಪ್ರದೀಪ ಹೊಟ್ಟಿ ಮತ್ತು ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.