ADVERTISEMENT

‘ಸಂಸ್ಕೃತಿ ಬಿಂಬಿಸುವ ಜಾತ್ರೆ, ಉತ್ಸವ’

ಬನಶಂಕರಿ ದೇವಸ್ಥಾನದ ದಶಮಾನೋತ್ಸವ ಸಮಾರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2022, 3:11 IST
Last Updated 5 ಮೇ 2022, 3:11 IST
ಸುರಪುರದ ರಂಗಂಪೇಟೆಯ ಬನಶಂಕರಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಮೆರವಣಿಗೆ ನಡೆಯಿತು
ಸುರಪುರದ ರಂಗಂಪೇಟೆಯ ಬನಶಂಕರಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಮೆರವಣಿಗೆ ನಡೆಯಿತು   

ಸುರಪುರ: ‘ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿ ಬಿಂಬಿಸುತ್ತವೆ. ಧಾರ್ಮಿಕ ಕಾರ್ಯಕ್ರಮ ನಮ್ಮಲ್ಲಿ ಜಾಗೃತಿ ಉಂಟು ಮಾಡುತ್ತವೆ. ಆದ್ದರಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ದೇವಪುರದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.

ರಂಗಂಪೇಟೆಯ ಬನಶಂಕರಿ ದೇವಸ್ಥಾನದ ದಶಮಾನೋತ್ಸವ ಶ್ರೀಚಕ್ರ ಸ್ಥಾಪನೆ, ನಾಗದೇವತೆಗಳ ಪ್ರಾಣ ಪ್ರತಿಷ್ಠಾಪನೆ ಪಲ್ಲಕ್ಕಿ ಉತ್ಸವ ಸಮಾರಂಭದ ಸಮಾರೋಪದಲ್ಲಿ ಮಂಗಳವಾರ ಅವರು ಧರ್ಮ ಸಂದೇಶ ನೀಡಿದರು.

‘ದೇವರು ಗುಡಿ, ಗುಂಡಾರಗಳಲ್ಲಿ ಇಲ್ಲ. ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಮಾಡುವ ಭಕ್ತನ ಹೃದಯದಲ್ಲಿದ್ದಾನೆ. ದೇವಸ್ಥಾನಗಳು ಭಕ್ತಿ ಭಾವವನ್ನು ಉನ್ಮಾದಗೊಳಿಸಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳು’ ಎಂದು ಅವರು ತಿಳಿಸಿದರು.

ADVERTISEMENT

‘ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡಲ್ಲಿ ಭಕ್ತರ ಇಷ್ಠಾರ್ಥಗಳು ನೆರವೇರುತ್ತವೆ. ನಾಗದೋಷ ದೂರವಾಗುತ್ತದೆ. ಸಂತಾನ ಭಾಗ್ಯ ಸೇರಿದಂತೆ ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ. ಮುಂಬರುವ ದಿನಗಳಲ್ಲಿ ರಥೋತ್ಸವ ನಡೆಸಲು ಭಕ್ತರು ಸಂಕಲ್ಪ ಮಾಡಬೇಕು’ ಎಂದರು.

ರುಕ್ಮಾಪುರ ಹಿರೇಮಠದ ಶಾಂತಮೂರ್ತಿ ಶಿವಾಚಾರ್ಯರು ಮಾತನಾಡಿ, ‘ಭಕ್ತರ ಸಹಕಾರದಲ್ಲಿ ಮೂರು ದಿನಗಳಿಂದ ನಡೆದ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿರುವುದು ಸಂತಸ ತಂದಿದೆ. ದೇವಿಯ ಸಮ್ಮುಖದಲ್ಲಿ ಉಡಿ ತುಂಬಿಸಿಕೊಂಡ ಸುಮಂಗಲಿಯರಿಗೆ ದೇವಿ ಸಕಲ ಭಾಗ್ಯ ಕರುಣಿಸಿ ತಮ್ಮೆಲ್ಲರನ್ನು ರಕ್ಷಿಸುತ್ತಾಳೆ’ ಎಂದು ತಿಳಿಸಿದರು.

ಬೆಳಿಗ್ಗೆ ದೇವಿಯ ಬೆಳ್ಳಿ ಉತ್ಸವ ಮೂರ್ತಿ ಮತ್ತು ಪಲ್ಲಕ್ಕಿ ಸೇವೆಗೆ ಶಾಸಕ ರಾಜೂಗೌಡ ಚಾಲನೆ ನೀಡಿದರು. ಪಲ್ಲಕ್ಕಿ ಹೊತ್ತು ಪ್ರದಕ್ಷಿಣೆ ಸೇವೆ ಮಾಡಿದರು. ನಂತರ 175 ಮಹಿಳೆಯರಿಗೆ ಉಡಿ ತುಂಬಲಾಯಿತು.

3 ದಿನಗಳ ಹಿಂದೆ ಧಾರ್ಮಿಕ ಸಮಾರಂಭಕ್ಕೆ ದೇವಾಪುರ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಮತ್ತು ರುಕ್ಮಾಪುರದ ಶಾಂತಮೂರ್ತಿ ಶಿವಾಚಾರ್ಯರು ಚಾಲನೆ ನೀಡಿದ್ದರು.

ಸಮಾರಂಭದ ಅಂಗವಾಗಿ 150 ಮಹಿಳೆಯರ ಪೂರ್ಣ ಕುಂಭಮೇಳ ಮತ್ತು ವೈರಾಗ್ಯಮೂರ್ತಿ ಶರಣೆ ಅಕ್ಕ ನಾಗಮ್ಮ, ಜಗಜ್ಯೋತಿ ಬಸವೇಶ್ವರ ಮತ್ತು ಈಶ್ವರ ನಂದಿ ಸ್ತಬ್ಧ ಚಿತ್ರಗಳ ಮೆರವಣಿಗೆ ಏರ್ಪಡಿಸಲಾಗಿತ್ತು. ರಂಗಂಪೇಟೆಯ ಆಂಜನೇಯ ದೇವಸ್ಥಾನದ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಡಾ. ಸುರೇಶ ಸಜ್ಜನ್, ದೇವಸ್ಥಾನ ಕಮಿಟಿಯ ಅಧ್ಯಕ್ಷ ಶರಣಪ್ಪ ಗುಮ್ಮಾ, ಪ್ರಮುಖರಾದ ಗುರುರಾಜ ಯಂಕಂಚಿ, ಶಿವಶರಣಪ್ಪ ಗುಮ್ಮಾ, ಬಸವರಾಜ ಚೆಟ್ಟಿ, ಮಲ್ಲಿಕಾರ್ಜುನ ಮಿಠ್ಠಾ, ಚನ್ನಬಸಪ್ಪ ಚೆಟ್ಟಿ, ಶೇಖರ ಮುದ್ನೂರ, ನಿಂಗಪ್ಪ, ವಿಶ್ವನಾಥ ಸಪ್ಪಂಡಿ, ಸಿದ್ದಪ್ಪ ಚೆಟ್ಟಿ, ಸಂಗನಬಸಪ್ಪ ಚೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.