ಕಾಳೆಬೆಳಗುಂದಿ(ಸೈದಾಪುರ): ಸಮೀಪದ ಬನದೇಶ್ವರ ದೇವಸ್ಥಾನದ ಹಿಂದಿರುವ ಬಂಡೆರಾಚೋಟೇಶ್ವರ ಜಾತ್ರೆಯು ಅದ್ದೂರಿಯಾಗಿ ನೆರವೇರಿತು. ಪ್ರತಿ ವರ್ಷ ಶ್ರಾವಣ ಮಾಸದ 4ನೇ ಸೋಮವಾರ, ಮಂಗಳವಾರದಂದು ರಥೋತ್ಸವ ಜರುಗುತ್ತದೆ.
ಬಂಡೆಯ ಮೇಲೆ ಊಟ: ಬಂಡೆಯ ಮೇಲೆ ಊಟ ಮಾಡುವುದು ಜಾತ್ರೆಯ ವೈಶಿಷ್ಟ್ಯವಾಗಿದೆ. ರಥೋತ್ಸವದ ನಂತರ ಭಕ್ತರು ತಾವು ತಂದ ಭಕ್ಷ್ಯಗಳನ್ನು ತಟ್ಟೆಯಿಲ್ಲದೆ ಕಲ್ಲು ಬಂಡೆಯ ಮೇಲೆ ಹಾಕಿಕೊಂಡು ಸವಿಯುತ್ತಾರೆ. ಈ ಸಂಪ್ರದಾಯವು ಶತಮಾನಗಳಿಂದ ನಡೆದು ಬಂದಿದೆ. ಹೀಗಾಗಿಯೇ ‘ಬಂಡೆ ಜಾತ್ರೆ’ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಇಷ್ಟಾರ್ಥಗಳ ಈಡೇರಿಕೆಗೆ ಕಲ್ಲಿನಿಂದ ಮನೆ, ಗುಡಿ ನಿರ್ಮಾಣ: ಭಕ್ತರು, ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇವಸ್ಥಾನದ ಸಮೀಪದಲ್ಲಿ ಕೆಲವರು ಸಣ್ಣಪುಟ್ಟ ಕಲ್ಲುಗಳಿಂದ ಗುಡಿ ಕಟ್ಟಿ, ಉರುಳು ಸೇವೆ ಮಾಡುತ್ತಾರೆ. ಈ ಮೂಲಕ ಸಂತಾನ ಭಾಗ್ಯ ಸೇರಿದಂತೆ ತಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವಂತೆ ಬಂಡೆ ರಾಚೋಟೇಶ್ವರನಿಗೆ ಹರಕೆ ಸಲ್ಲಿಸುತ್ತಾರೆ.
ಹರಕೆ ಕಟ್ಟಿರುವ ಭಕ್ತರು, ಕಲ್ಲು ಬಂಡೆ ಮೇಲೆ ಊಟಮಾಡಿ ಉರುಳು ಸೇವೆ ಮಾಡಿ ಹರಕೆ ತಿರಿಸುತ್ತಾರೆ. ಮಕ್ಕಳಾಗದವರು ದೇವರ ಸನ್ನಿಧಿಯಲ್ಲಿ ಐದು ಕಲ್ಲುಗಳಿಂದ ಚಿಕ್ಕದಾದ ಮನೆಕಟ್ಟಿ ಪೂಜೆ ಮಾಡುವದರಿಂದ ಸಂತಾನ ಭಾಗ್ಯಸಿಗುತ್ತದೆ ಎಂಬ ನಂಬಿಕೆಯಿದೆ’ ಎಂದು ನಿವಾಸಿ ಬನಶಂಕರಗೌಡ ಮಾಲಿ ಪಾಟೀಲ ಹೇಳಿದರು.
ಬಂಡೆ ಜಾತ್ರೆಯ ವಿಶೇಷವೆಂದರೆ ಜಾತ್ರೆಗೆ ಬರುವ ಎಲ್ಲರೂ ಬಂಡೆಯ ಮೇಲೆ ಊಟ ಮಾಡುತ್ತಾರೆ. ಇದರಿಂದ ನಮ್ಮ ದೇಹದ ಅನೇಕ ರೋಗಗಳು ವಾಸಿಯಾಗುತ್ತವೆ ಎಂಬ ಪ್ರತೀತಿಯಿದೆ. ಕುಟುಂಬ ಸಮೇತ ಬಂದು ದೇವರ ದರ್ಶನ ಪಡೆದು, ಹರಕೆ ತೀರಿಸಿ, ಬಂಡೆಯ ಮೇಲೆ ಪುಂಡ್ಯಿ ಪಲ್ಲೆ, ರೊಟ್ಟಿ ಸೇವಿಸಿ ದೇವರ ಕೃಪೆಯನ್ನು ಪಡೆಯುತ್ತಾರೆ ಎಂದು ಭಕ್ತರಾದ ಸುರೇಶ ವಿಶ್ವಕರ್ಮ ಕಣೇಕಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.