ಯಾದಗಿರಿ: ತಾಲ್ಲೂಕಿನ ಕಾಳೆಬೆಳಗುಂದಿ ಬಂಡೆ ರಾಚೋಟೇಶ್ಚರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಅದ್ಧೂರಿ ರಥೋತ್ಸವ ನಡೆಯಿತು.
ಗ್ರಾಮದ ಹೊರವಲಯದ ಬಂಡೆ ರಾಚೋಟೇಶ್ವರ ದೇವಸ್ಥಾನದ ಬಳಿ ಶ್ರಾವಣ ಮಾಸದ ಕೊನೆ ಮಂಗಳವಾರಮಧ್ಯಾಹ್ನ 2 ಗಂಟೆಗೆ ರಥೋತ್ಸವ ನಡೆಯಿತು. ರಥೋತ್ಸವಕ್ಕೆ ಹತ್ತಾರು ಹಳ್ಳಿಗಳಲ್ಲದೇ ತೆಲಂಗಾಣ, ಮಹಾರಾಷ್ಟ್ರ, ಆಂಧ್ರದಿಂದಲೂ ಭಕ್ತರು ಆಗಮಿಸಿದ್ದರು.
ಕಾಳೆಬೆಳಗುಂದಿ ಗ್ರಾಮ ಸೇರಿ ಸಾವಿರಾರು ಭಕ್ತರು ಕುಟುಂಬ ಸಮೇತ ತಿಂಡಿ ಪದಾರ್ಥಗಳ ಬುತ್ತಿ ಕಟ್ಟಿಕೊಂಡು ಬಂದು ಸಾಮೂಹಿಕವಾಗಿ ಬಂಡೆಯ ಮೇಲೆ ಊಟ
ಮಾಡಿದರು.
ಹಲವಾರು ವರ್ಷಗಳಿಂದ ವಿಶೇಷ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಜಾತ್ರೆಗೆ ನೆರೆಯ ತೆಲಂಗಾಣ, ಆಂಧ್ರರಪ್ರದೇಶದ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಸಾವಿರಾರು ಜನರು ಕಲ್ಲು ಬಂಡೆಯ ಮೇಲೆ ಊಟ ಮಾಡಿ ಹರಕೆ ತೀರಿಸಿದರು.
ಕುಟುಂಬ ಸಮೇತ ಸಾಮೂಹಿಕವಾಗಿ ಬಂಡೆಯ ಮೇಲೆ ಊಟ ಮಾಡುವುದರಿಂದ ಕಾಯಿಲೆ ಬರುವುದಿಲ್ಲ. ಆರೋಗ್ಯ ವೃದ್ಧಿಸುತ್ತದೆ. ಜತೆಗೆ ಮಕ್ಕಳಾಗದವರು ಈ ದೇವರಲ್ಲಿ ಬೇಡಿಕೊಂಡು ದೇವಸ್ಥಾನ ಬಳಿ ಕಲ್ಲಿನ ಮನೆ ಚಿಕ್ಕ ಮನೆ ಕಟ್ಟಿ
ಹೋಗುತ್ತಾರೆ. ಮಕ್ಕಳಾದ ಬಳಿಕ ಬಂದು ದೇವರ ಆಶಿರ್ವಾದ ಪಡೆದು ಮನೆ ಬಿಳಿಸಿ ಹೋಗುತ್ತರಂತೆ ಎಂದು ಭಕ್ತರು ಹೇಳುವ
ಮಾತಾಗಿದೆ.
ಪುಂಡಿ ಪಲ್ಯೆ ವಿಶೇಷ ಖ್ಯಾದ್ಯ: ಶ್ರಾವಣ ಮಾಸದಲ್ಲಿ ರಾಚೋಟೇಶ್ವರ ಭಕ್ತರು ಒಂದು ತಿಂಗಳು ಕಾಲ ಪುಂಡಿ ಪಲ್ಲೇ ಸೇವನೆ ಮಾಡುವುದಿಲ್ಲ. ಹೀಗಾಗಿ ಜಾತ್ರೆ ದಿನವಾಗಿದ್ದರಿಂದ ಇಲ್ಲಿಗೆ ಬರುವ ಪ್ರತಿಯೊಬ್ಬರೂ ಪುಂಡಿ ಪಲ್ಯೆ ಅಡುಗೆ ಮಾಡಿಕೊಂಡು ಬಂದು ಇಲ್ಲಿ ಸೇವನೆ ಮಾಡಿದ್ದೇವೆ ಎಂದು ಗ್ರಾಮಸ್ಥರಾದ ರೇಣುಕಾ ಪಾಟೀಲ
ಹೇಳುತ್ತಾರೆ.
ಇನ್ನು ಊಟ ಮಾಡಿದ ಮೇಲೆ ಭಕ್ತರು ಬಂಡೆಗಳನ್ನು ಸ್ವಚ್ಛಗೊಳಿಸುವುದಿಲ್ಲ. ಬಂಡೆ ಮೇಲೆ ಊಟ ಮಾಡಿ ಭಕ್ತರು ಸಂಜೆ ವೇಳೆ ಮನೆ ಕಡೆ ಹೋದ ಮೇಲೆ ಪ್ರತಿ ವರ್ಷ ಸಂಜೆ ವೇಳೆ ಮಳೆ ಆಗಮಿಸಿ ಬಂಡೆಗಳನ್ನು ಸ್ವಚ್ಛಗೊಳಿಸುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರಿಗೆ ಇದೆ ಎನ್ನುತ್ತಾರೆ
ಅವರು.
***
ಬಂಡೆ ಮೇಲೆ ಊಟ!
ಬಂಡೆ ರಾಚೋಟೇಶ್ಚರ ಜಾತ್ರೆಯ ಅಂಗವಾಗಿ ಜಾತ್ರೆಗೆ ಆಗಮಿಸಿದ ಭಕ್ತರು, ಬಂಡೆಯೇ ಮೇಲೆಯೇ ಊಟ ಸವಿದಿರುವುದು ವಿಶೇಷವಾಗಿದೆ.
ದೇವರ ಮೇಲಿನ ನಂಬಿಕೆಗೆ ನೂರಾರು ಜನ ಕಲ್ಲು ಬಂಡೆಯನ್ನೇ ಊಟದ ತಟ್ಟೆಯಾಗಿಸಿ ಊಟ ಮಾಡಿದರು. ಬಡವ, ಶ್ರೀಮಂತ ಎನ್ನುವ ಬೇಧ ಭಾವವಿಲ್ಲದೆ ಗುಂಪು ಗುಂಪಾಗಿ ಕುಳಿತು ಭಕ್ಷ ಭೋಜನ
ಸವಿದರು.
ಜೋಳದ ರೊಟ್ಟಿ, ತಪಾತಿ, ಕಡಕ್ ರೊಟ್ಟಿ, ಪುಂಡಿಪಲ್ಯೆ, ಬದನೆಕಾಯಿ ಪಲ್ಯೆ, ಟೊಮೆಟೊ ಚಟ್ನಿ, ಕರ್ಚಿಕಾಯಿ, ಚಿತ್ರಾನ್ನ, ಪಲಾವ್, ಚಕ್ಕುಲಿ, ಭಜ್ಜಿ, ಜಿಲೇಬಿ, ಸಂಡಿಗೆ ವಿಶೇಷ ಖಾಧ್ಯವನ್ನು ಬಂಡೆಯ ಮೇಲೆ ಹಾಕಿಕೊಂಡು ಸಾಮೂಹಿಕವಾಗಿ ಊಟ ಮಾಡಿದರು.
***
ಭಕ್ತರು ಯಾವುದೇ ಬೇದ ಭಾವ ಇಲ್ಲದೇ ಬಂಡೆಯ ಮೇಲೆ ಊಟ ಮಾಡುವುದು ವಿಚಿತ್ರವಾದರೂ ಸತ್ಯ. ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎನ್ನುವುದುದು ನಂಬಿಕೆ
–ರೇಣುಕಾ ಪಾಟೀಲ, ಗ್ರಾಮಸ್ಥೆ
***
ಗ್ರಾಮದವರು ಪ್ರತಿ ವರ್ಷ ಯಾವುದೇ ಊರಲ್ಲಿ ಇದ್ದರೂ ತಪ್ಪದೇ ಈ ಜಾತ್ರೆಗೆ ಆಗಮಿಸುತ್ತಾರೆ. 11 ವರ್ಷಗಳಿಂದ ರಥೋತ್ಸವ ನಡೆಯುತ್ತಿದೆ. ಬಂಡೆ ಮೇಲೆ ಊಟ ಮಾಡುವುದೇ ವಿಶೇಷ
ರಾಜು ಕಾಳೆಬೆಳಗುಂದಿ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.