ನಾರಾಯಣಪುರ: ಮುಂಗಾರು ಮಳೆ ಚುರುಕು ಪಡೆದ ಬೆನ್ನಲ್ಲೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯ ಬಸವಸಾಗರಕ್ಕೆ ನಿರಂತರ ನೀರು ಹರಿದು ಬರಲು ಆರಂಭಿಸಿದೆ.
ದಿನೇದಿನೆ ಜಲಾಶಯದಲ್ಲಿರುವ ನೀರು ಸಂಗ್ರಹ ಪ‍್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬಸವಸಾಗರ ಜಲಾಶಯದ ಹಿನ್ನೀರು ವ್ಯಾಪ್ತಿ ಸೇರಿ ಮಲಪ್ರಭಾ ನದಿ ತೀರ ಪ್ರದೇಶಗಳಲ್ಲಿ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಹೀಗಾಗಿ ಜಲಾಶಯಕ್ಕೆ ಜೂನ್ 3ರಿಂದಲೇ ಅಲ್ಪ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ನಿತ್ಯ ಒಳಹರಿವು ಹೆಚ್ಚುತ್ತಿದ್ದು, ಜೂನ್ 10ರಂದು 6,295 ಕ್ಯೂಸೆಕ್‌ಗಳಷ್ಟು ಒಳಹರಿವು ದಾಖಲಾಗಿದೆ ಎಂದು ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಬಿಜೆಎನ್ಎಲ್ ಅಣೆಕಟ್ಟು ಅಧಿಕಾರಿಗಳ ಮಾಹಿತಿ ಜೂನ್ 3ರಂದು ಜಲಾಶಯದ ನೀರಿನ ಮಟ್ಟವು 488.25 ಮೀಟರ್‌ಗಳಷ್ಟಿತ್ತು. ಅದರಲ್ಲಿ ಬಳಕೆಗೆ 0.40 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿತ್ತು. ಜೂನ್ 10ರಂದು ಜಲಾಶಯದ ನೀರಿನ ಸಂಗ್ರಹಮಟ್ಟ 488.85 ಮೀಟರ್‌ಗೆ ಹೆಚ್ಚಿದ್ದು, ಕಳೆದೊಂದು ವಾರದಲ್ಲಿ 5.22 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.
ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿಯುವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.
ಕಳೆದ ವರ್ಷ... ಈ ವರ್ಷ...
ಪ್ರಸ್ತುತ ಜಲಾಶಯದ 488.85 ಮೀಟರ್ ನೀರಿನ ಮಟ್ಟದಲ್ಲಿ 19.98 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ ಜೂನ್ 10ರಂದು 6295 ಕ್ಯೂಸೆಕ್ ಒಳಹರಿವು ಇದೆ. ಕುಡಿಯಲು ಸೇರಿದಂತೆ ಇತರೆ ಉದ್ದೇಶಗಳಿಗಾಗಿ 95.66 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನದಂದು ಬಸವಸಾಗರ ಜಲಾಶಯಕ್ಕೆ ಒಳಹರಿವೇ ಇರಲಿಲ್ಲ. ಜೊತೆಗೆ ಜಲಾಶಯದ ಸಂಗ್ರಹ ಮಟ್ಟವು 487.34 ಮೀಟರ್(ಬಳಕೆಗೆ 0.64 ಟಿಎಂಸಿ ಅಡಿ)ಗಳಷ್ಟಿತ್ತು. ಹೊರ ಹರಿವು 270 ಕ್ಯೂಸೆಕ್‌ಗಳಷ್ಟಿತ್ತು ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದು ಬಂದಿದೆ.
ನಿರೀಕ್ಷೆಯಂತೆ ಒಳಹರಿವು
ಪ್ರಸ್ತುತ ಮುಂಗಾರು ಪ್ರಾರಂಭದಲ್ಲಿ ಬಸವಸಾಗರ ಹಿನ್ನೀರು ವ್ಯಾಪ್ತಿಯ ಕೃಷ್ಣಾ ನದಿ ಹಾಗೂ ಮಲಪ್ರಭಾ ನದಿ ತೀರದಲ್ಲಿ ಮಳೆ ಸುರಿದಿದ್ದರಿಂದ ನಿರೀಕ್ಷೆಯಂತೆ ಬಸವಸಾಗರಕ್ಕೆ ಒಳಹರಿವು ಹರಿದು ಬರುತ್ತಿದೆ ಎಂದು ಬಸವಸಾಗರ ಅಣೆಕಟ್ಟು ಗೇಟ್ಸ್ ಉಪವಿಭಾಗ ಪ್ರಭಾರ ಎಇಇ ವಿಜಯಕುಮಾರ ಅರಳಿ ತಿಳಿಸಿದ್ದಾರೆ.
6 ಲಕ್ಷ ಹೆಕ್ಟೇರ್ ಪ್ರದೇಶ
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.