ಯಾದಗಿರಿ: ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
'ಇಲ್ಲಿಯವರೆಗೆ ಕಾರ್ಯಕರ್ತರು ನಾಯಕರನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಹೀಗಾಗಿ ಸಚಿವರು, ರಾಜ್ಯಸಭೆ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕರ್ತರನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಿಕೊಂಡಿದ್ದೇವೆ' ಎಂದು ಶಹಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'31 ಜಿಲ್ಲೆಗಳಲ್ಲಿ 62 ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡುತ್ತಿದ್ದೇವೆ. ಆರು ತಂಡಗಳನ್ನು ಮಾಡಲಾಗಿದೆ. ಲಕ್ಣ್ಮಣ ಸವದಿ, ವಿ.ಸೋಮಣ್ಣ, ರಾಜೂಗೌಡ, ಭಗವಂತ ಖೂಬಾ ಸೇರಿದಂತೆ ಸ್ಥಳೀಯ ಶಾಸಕರನ್ನು ಒಳಗೊಂಡ ತಂಡ ರಚಿಸಲಾಗಿದೆ. ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ರಾಜ್ಯಕಾರ್ಯಕಾರಿ ಸಭೆ ನಡೆಯಲಿದೆ. ಅಲ್ಲಿ ಸಮಾವೇಶಗಳ ವರದಿ ಮಂಡನೆ ಮಾಡಲಿದ್ದೇವೆ' ಎಂದರು.
'ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಪಕ್ಷದ ಕಾರ್ಯಕರ್ತರು ಅಧಿಕಾರದಲ್ಲಿರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ ಜಿಲ್ಲೆಯಲ್ಲಿ ಸಮಾವೇಶ ಮಾಡಲಾಗಿದೆ' ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, 'ಪ್ರಧಾನಿ ಮೋದಿಯವರು ಹಳ್ಳಿಗಾಡಿನಲ್ಲಿ ಬೆಳಕು ಮೂಡಿಸಿದ್ದಾರೆ. ಜನಧನ, ಉಜ್ವಲ ಯೋಜನೆ, ಹಾಲಿಗೆ ಪ್ರೋತ್ಸಾಹ ಧನ ಸೇರಿದಂತೆ ವಿಭಿನ್ನ ಕಾರ್ಯಕ್ರಮ ನೀಡಿದ್ದಾರೆ. ಹೀಗಾಗಿ ಗ್ರಾಮಗಳಲ್ಲಿ ಅರ್ಹತೆ ಇದ್ದವರು ಆಯ್ಕೆಯಾದರೆ ಗ್ರಾಮ ಅಭಿವೃದ್ಧಿಯಾಗುತ್ತದೆ. ಅವಿರೋಧವಾಗಿ ಆಯ್ಕೆಯಾದರೆ ಇದೊಂದು ದಿಕ್ಸೂಚಿ ಆಗಲಿದೆ. ಈ ಮೂಲಕ ಅಭಿವೃದ್ಧಿಗೆ ಚಾಲನೆ ಸಿಕ್ಕಂತೆ ಆಗುತ್ತದೆ. ಗ್ರಾಮಗಳಲ್ಲಿ ಘರ್ಷಣೆಗಳು ಆಗುವುದಿಲ್ಲ. ಖರ್ಚು ಉಳಿಯುತ್ತದೆ' ಎಂದರು.
'ಕೇಂದ್ರ ಸರ್ಕಾರವೇ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ನೀಡುತ್ತದೆ' ಎಂದರು.
'ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಅಭಿವೃದ್ಧಿಯತ್ತ ಮುನ್ನಡೆಯಲು ಪ್ರಯತ್ನ ಮಾಡುತ್ತಿದ್ದೇವೆ' ಎಂದರು.
ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜೂಗೌಡ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಬಿ.ಜಿ.ಪಾಟೀಲ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಯೂಡಾ ಅಧ್ಯಕ್ಷ ಬಸವರಾಜ ಚಂಡರಕಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಮುಖಂಡ ಅಶ್ವಥ್ ನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.