ಶಹಾಪುರ: ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಚರಂಡಿ ಮೇಲೆ ಜೋಪಡಿಯಲ್ಲಿ ವಾಸವಿದ್ದ 65 ವರ್ಷದ ಹನುಮಂತ ಅವರನ್ನು ಅಧಿಕಾರಿಗಳು ಶನಿವಾರ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸಾಧಿಕ್ ಹುಸೇನ್ ಖಾನ್ ಅವರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಹನುಮಂತ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಂಆರ್‌ಡಬ್ಲ್ಯು ನಾಗರಾಜ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಮಾಲೋಚಕ ವಿಶ್ವನಾಥರೆಡ್ಡಿ ಹಾಗೂ ಸಿಬ್ಬಂದಿ ವೃದ್ಧನ ಆರೋಗ್ಯ ವಿಚಾರಿಸಿದರು. ಶುಭ್ರ ಬಟ್ಟೆ ತೊಡಿಸಿ ವೃದ್ಧಾಶ್ರಮಕ್ಕೆ ಸೇರಿಸಿದರು.
‘ಹನುಮಂತ ಅವರನ್ನು ಈಗಾಗಲೇ ಶಹಾಪುರ ನಗರದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಲಾಗಿದೆ. ಅವರ ವಿಳಾಸ ಪತ್ತೆ ಮಾಡಿ, ಮನೆಗೆ ಬಿಡಲು ಪ್ರಯತ್ನಿಸಲಾಗುವುದು. ಅನಾಥರಾಗಿದ್ದಲ್ಲಿ ವೃದ್ಧಾಶ್ರಮದಲ್ಲಿಯೇ ಉಚಿತ ಊಟ, ವಸತಿ ಕಲ್ಪಿಸಿ ಆರೈಕೆ ಮಾಡಲಾಗುವುದು’ ಎಂದು ಸಾಧಿಕ್ ಹುಸೇನ್ ಖಾನ್ ತಿಳಿಸಿದರು.
ಹನುಮಂತ ಅವರ ದುಸ್ಥಿತಿ ಕುರಿತು ಮೇ 6ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.