ADVERTISEMENT

ಫೋನ್‌ಪೇ ಮೂಲಕ ಅಧಿಕಾರಿಗಳಿಗೆ ಲಂಚ!

ಟಿ.ನಾಗೇಂದ್ರ
Published 8 ಅಕ್ಟೋಬರ್ 2024, 6:08 IST
Last Updated 8 ಅಕ್ಟೋಬರ್ 2024, 6:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್)ನಲ್ಲಿ ಉಗ್ರಾಣ ಕೇಂದ್ರ (ದಾಸ್ತಾನು)ದಲ್ಲಿ ಇಟ್ಟಿದ್ದ ₹ 2.06 ಕೋಟಿ ಮೌಲ್ಯದ 6,677 ಕ್ವಿಂಟಲ್ ಪಡಿತರ ಅಕ್ಕಿ (ಅನ್ನಭಾಗ್ಯ) ನಾಪತ್ತೆ ಪ್ರಕರಣದಲ್ಲಿ 18 ತಿಂಗಳ ಕಾಲ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಮೂವರು ಅಧಿಕಾರಿಗಳ ಪೈಕಿ ಕೇವಲ ಒಬ್ಬ ಅಧಿಕಾರಿಯನ್ನು ಮಾತ್ರ ಹೊಣೆಗಾರಿಕೆ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪತ್ರದಲ್ಲಿ ನಮೂದಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರತಿ ತಿಂಗಳು ಮೇಲಧಿಕಾರಿಗಳಿಗೆ ಲಂಚವನ್ನು ಫೋನ್‌ಪೇ ಮೂಲಕ ಜಮಾ ಮಾಡುತ್ತಿದ್ದೇವೆ. ಕಳೆದ 18 ತಿಂಗಳಿಂದ ಪ್ರತಿ ತಿಂಗಳು ಅಧಿಕಾರಿಗಳಿಗೆ ಲಂಚ ನೀಡುತ್ತಿರುವುದು ಯಾದಗಿರಿ ಆಹಾರ ಇಲಾಖೆ ಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಅಪರೇಟರ್ (ಸಾಕ್ಷಿದಾರ ನಂ.31) ಮಲ್ಲೇಶಿ ಮತ್ತು ಶಹಾಪುರ ಆಹಾರ ಇಲಾಖೆ ಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವ ಸಾಕ್ಷಿದಾರ ನಂಬರ್‌ 32 (ಗುರುಪಾದಯ್ಯ) ಅವರ ಮೊಬೈಲ್ ನಂಬರ್‌ಗೆ (94484 13220) ಫೋನ್‌ಪೇ ಮೂಲಕ ಹಣ ಹಾಕಲಾಗಿದೆ ಎಂದು ದೋಷಾರೋಪಣೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿಚಿತ್ರ ವೆಂದರೆ ಅಕ್ರಮಕ್ಕೆ ಸಾಥ್ ನೀಡುತ್ತಿದ್ದ ಮಧ್ಯವರ್ತಿಗಳನ್ನು ಆರೋಪಿಗಳನ್ನಾಗಿ ಮಾಡದೆ ಸಾಕ್ಷಿದಾರರನ್ನಾಗಿ ಮಾಡಿರುವುದು ದೋಷಾರೋಪಣೆಯ ಪತ್ರದ ನ್ಯೂನ್ಯತೆಯ ಭಾಗವಾಗಿದೆ ಎಂದು ಹಿರಿಯ ವಕೀಲರೊಬ್ಬರು ಅಭಿಪ್ರಾಯ ಪಟ್ಟರು.

2022 ನವಂಬರ್‌ 7ರಿಂದ 2023 ಫೆಬ್ರುವರಿ 10 ರವರೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಯಾದಗಿರಿಯ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭು ದೊರೆ ಹಾಗೂ ಶಹಾಪುರದ ಆಹಾರ ನಿರೀಕ್ಷಕ ಜಂಬಯ್ಯ ಗಣಾಚಾರಿ ಅವರು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ ದೋಷಾರೋಪಣೆ ಪತ್ರದಲ್ಲಿ ಅವರನ್ನು ಸಾಕ್ಷಿದಾರರನ್ನಾಗಿ ಹೇಳಿಕೆ ಪಡೆದುಕೊಂಡಿರುವುದು ಹಾಸ್ಯಾಸ್ಪ ದವಾಗಿದೆ ಎನ್ನುತ್ತಾರೆ ವಕೀಲರೊಬ್ಬರು. ಪ್ರಭು ದೊರೆಯ ನಂತರ ಭೀಮರಾಯ (ಆರೋಪಿ 14) ಅವರು ಅಧಿಕಾರ ಸ್ವೀಕರಿಸಿ 9 ತಿಂಗಳು ಸೇವೆ ಸಲ್ಲಿಸಿದ್ದಾರೆ. ಆಗ ಪೊಲೀಸ್ ತನಿಖಾಧಿಕಾರಿಯು 2022ರ ಜೂನ್ 1ರಿಂದ 2023 ನವಂಬರ್‌ 23ವರೆಗೆ ಸೇವೆ ಸಲ್ಲಿಸಿದ ಅಧಿಕಾರಿಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪ್ರಭು ದೊರೆ ಅಕ್ರಮದಲ್ಲಿ ಶಾಮೀಲಾಗಿದ್ದರೂ ದೋಷಾರೋಪ ಪಟ್ಟಿಯಲ್ಲಿ ಅವರನ್ನು ಕೈಬಿಟ್ಟಿರುವುದು ದೋಷಪೂರಿತ ಕ್ರಮವಾಗಿದೆ ಎನ್ನುತ್ತಾರೆ ರೈತ ಸಂಘದ ಮುಖಂಡ ಚೆನ್ನಪ್ಪ ಆನೇಗುಂದಿ.

ADVERTISEMENT

‘ಟಿಎಪಿಸಿಎಂಎಸ್‌ನ ಸಂಘದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ತಮ್ಮಣಪ್ಪ, ಕಂಪ್ಯೂಟರ್ ಅಪರೇಟರ್ ಆನಂದ ಸಗರ ಅವರನ್ನು ಪ್ರಕರಣದಿಂದ ಕೈ ಬಿಟ್ಟಿರುವ ಪೊಲೀಸರ ಕ್ರಮವು ಅನುಮಾನವನ್ನು ಹೆಚ್ಚಿಸುವಂತೆ ಮಾಡಿದೆ’ ಎಂದು ಅವರು ದೂರಿದರು.

ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಪಾರು ಮಾಡುವ ಉದ್ದೇಶದಿಂದಲೇ ನ್ಯಾಯಾ ಲಯಕ್ಕೆ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಟಿಎಪಿಸಿಎಂಎಸ್ ₹ 2.06 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣಪ್ರಕರಣದಲ್ಲಿ ಶಾಮೀಲಾಗಿರುವ ಭ್ರಷ್ಟರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೊಲೀಸರು ಕಳಪೆ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಸರ್ಕಾರ ಸಮಗ್ರವಾಗಿ ನ್ಯಾಯಾಂಗ ತನಿಖೆ ನಡೆಸಲಿ.
- ಚೆನ್ನಪ್ಪ ಆನೇಗುಂದಿ, ರೈತ ಮುಖಂಡ, ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.