ಕೆಂಭಾವಿ: ಪಟ್ಟಣದ ಪದವಿಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸದ್ಯ ಕನಿಷ್ಠ ಮೂಲಸೌಲಭ್ಯಗಳೂ ಇಲ್ಲದ ಸುಮಾರು 30 ವರ್ಷ ಹಳೆಯದಾದ ಕಟ್ಟದಲ್ಲಿ ತರಗತಿಗಳು ನಡೆತ್ತಿವೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಇಲ್ಲ. ಆವರಣದ ಸುತ್ತ ಕಾಂಪೌಂಡ್ ಇಲ್ಲ.
ದಶಕದ ಹಿಂದೆ ಆರಂಭವಾದ ಪ್ರಯೋಗಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣಗೊಂದೆ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಎಚ್‌ಕೆಆರ್‌ಡಿಬಿ) ₹25 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಕಿಟಕಿ ಹಾಗೂ ಬಾಗಿಲುಗಳನ್ನು ಮುರಿದು ಹಾಕಲಾಗಿದೆ. ಅಲ್ಲದೆ, ಗ್ರಂಥಾಲಯ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯೂ ಇದೆ. ಪ್ರಭಾರಿ ಪ್ರಾಚಾರ್ಯರು ಸೇರಿ ಕೇವಲ ಮೂರು ಜನ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರದ ಆದೇಶ ಬಾರದ ಕಾರಣ ಸದ್ಯ ಹಿಂದಿನ ವರ್ಷ ಕೆಲಸ ನಿರ್ವಹಿಸಿದ 6 ಜನ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿದ್ದಾರೆ. ದಿನಕ್ಕೆ ಕೇವಲ ಒಂದೆರಡು ತರಗತಿಗಳು ನಡೆಯುತ್ತಿವೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ವಿಜ್ಞಾನ ಪ್ರಯೋಗಾಲಯ ಸೇರಿ ಮೂಲಸೌಕರ್ಯಗಳಿಲ್ಲದಿರುವುದು ಕಾಲೇಜಿನ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಲಕರು ದೂರಿದ್ದಾರೆ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಕುಮಾರ ಮೋಪಗಾರ ಆಗ್ರಹಿಸಿದ್ದಾರೆ.
ಕಾಲೇಜಿನಲ್ಲಿ ಸೌಲಭ್ಯ ಕೊರತೆ ಹಾಗೂ ಕಾಂಪೌಂಡ್ ನಿರ್ಮಾಣ ಕುರಿತು ಈಗಾಗಲೆ ಜಿಲ್ಲಾಧಿಕಾರಿ, ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
- ಎಸ್.ಎಂ. ಬಿರಾದಾರ್,ಪ್ರಾಚಾರ್ಯ, ಪದವಿಪೂರ್ವ ಕಾಲೇಜು ಕೆಂಭಾವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.