ಯಾದಗಿರಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಮಾಸುವ ಮುನ್ನವೇ ನಗರದಲ್ಲಿ ಶನಿವಾರ ನಡೆದ ವಿವಿಧ ಖಾಲಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಅ.28ರಂದು ಯಾದಗಿರಿ ನಗರದ 6 ಕೇಂದ್ರಗಳಲ್ಲಿ ಹಾಗೂ ಅ.29 ರಂದು ಯಾದಗಿರಿ ನಗರದ 7, ಶಹಾಪುರ 5, ಸುರಪುರ 5 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10.30ರಿಂದ 12.30 ಮತ್ತು 2.30ರಿಂದ 4.30ರವರೆಗೆ ಎರಡು ಅವಧಿಯಲ್ಲಿ ಪರೀಕ್ಷೆ ಜರುಗಲಿವೆ. ಶನಿವಾರ ಮೊದಲ ದಿನ ಬೆಳಿಗ್ಗೆಯ ಮೊದಲ ಪತ್ರಿಕೆಯಲ್ಲಿ ಆರೋಪಿಗಳು ಬ್ಲೂಟೂತ್ ಮತ್ತು ಕಾಲರ್ ಮೈಕ್ ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
20 ಜನರ ಮೇಲೆ ಸಂಶಯ?: ನಗರದ ಪ್ರಮುಖ ಎರಡು ಕಾಲೇಜುಗಳಲ್ಲಿ ಬ್ಲೂಟೂತ್ ಬಳಸಿರುವ ಶಂಕೆಯನ್ನು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಸದ್ಯಕ್ಕೆ ಪ್ರಮುಖ ಶಂಕಿತ ವ್ಯಕ್ತಿ ಪುಟ್ಟಪ್ಪ ಸೇರಿದಂತೆ 6ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಗೆ ಪೊಲೀಸರು ಕರೆತಂದು ವಿಚಾರಣೆ ನಡೆಸಿದರು. ಅಲ್ಲದೇ ಇನ್ನೂ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಪುಟ್ಟಪ್ಪ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಪಿಎಸ್ಐ ಹಗರಣ ಕಿಂಗ್ ಪಿನ್ ಆರ್.ಡಿ.ಪಾಟೀಲ ಗ್ರಾಮದವನು ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
25ರಂದು ನಡೆದಿತ್ತು ಪೂರ್ವಭಾವಿ ಸಭೆ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ ಪೂರ್ವಸಿದ್ದತಾ ಸಭೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ನೇತೃತ್ವದಲ್ಲಿ ಅವರ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಅ.25ರಂದು) ನಡೆದಿತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆ ನಡೆದರೂ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಯಾಕೆ ಮೈಮರೆಯಿತು ಎನ್ನುವ ಪ್ರಶ್ನೆ ಉದ್ಭವಿಸಿದೆ.
‘ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಲೇ ಬ್ಲೂಟೂತ್ ಘಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೆಟಲ್ ಡಿಟೆಕ್ಟರ್ ಬಳಸಿದ್ದರೆ ಇಂಥ ಘಟನೆಗಳಿಗೆ ಅವಕಾಶ ಇರುತ್ತಿರಲಿಲ್ಲ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದರು.
ಎಡವಿತೇ ಜಿಲ್ಲಾಡಳಿತ?:
ಕೆಲ ತಿಂಗಳ ಹಿಂದೆ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಮೆಟಲ್ ಡಿಟೆಕ್ಟರ್ ಇಟ್ಟು ತಪಾಸಣೆ ನಡೆಸಿದ್ದರು. ಆದರೆ ಈ ಬಾರಿ ಸಾವಿರಾರು ಜನರು ಬರೆಯವ ಪರೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದರೆ ಎನ್ನುವ ಅನುಮಾನಗಳು ಎದ್ದಿವೆ. ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ 7884 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಯಾವುದೇ ತರಹದ ಎಲೆಕ್ಟ್ರಾನಿಕ್ ವಸ್ತುಗಲು ಮೊಬೈಲ್ ಪೆನ್ ಡ್ರೈವ್‌ಗಳು ಇಯರ್ ಫೋನ್‌ಗಳು ಮೈಕ್ರೋಫೋನ್ಸ್‌ಗಳು ಬ್ಲೂ ಟೂತ್ ಸಾಧನೆಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯುವಂತಿಲ್ಲ ಎಂದು ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಷ್ಟಾದರೂ ಡಿವೈಸ್‌ಗಳು ಪರೀಕ್ಷಾ ಕೊಠಡಿಯೊಳಗೆ ಹೋಗಿದ್ದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಇಷ್ಟೆಲ್ಲಾ ಪರೀಕ್ಷಾ ಭದ್ರತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದ್ದರೂ ಕೂಡ ಡಿವೈಸ್ ಒಳಗೆ ಹೋಗಿರುವುದು ತಪಾಸಣೆ ಸರಿಯಾಗಿ ನಡೆದಿಲ್ಲವೆಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ಬಗ್ಗೆ ತನಿಖೆ ನಂತರ ವಾಸ್ತವ ಸಂಗತಿ ತಿಳಿದು ಬರಲಿದೆ ಎಂದು ಅಂದಾಜಿಸಲಾಗಿದೆ.
ಅಕ್ರಮ ನಡೆದ ಬಳಿಕ ಎಚ್ಚೆತ್ತ ಪೊಲೀಸರು: ಪತ್ರಿಕೆ–1 ರಲ್ಲಿ ನಡೆದ ಬ್ಲೂಟೂತ್ ಬಳಸಿ ಅಕ್ರಮ ನಡೆಸಿರುವುದು ಪತ್ತೆಯಾಗಿದ್ದರಿಂದ ಪತ್ರಿಕೆ–2ನೇ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಮೆಟಲ್ ಡಿಟೆಕ್ಟರ್ ಮೂಲಕ ಪೊಲೀಸರು ತಪಾಸಣೆ ಮಾಡಿದರು. ಮಧ್ಯಾಹ್ನ 2:30 ಕ್ಕೆ ಆರಂಭವಾಗಿರುವ ಎರಡನೇ ಪೇಪರ್‌ನ ಪರೀಕ್ಷೆ. ಬೆಳಿಗ್ಗೆ ಒಂದನೇ ಪೇಪರ್‌ನ ಪರೀಕ್ಷೆ ಇತ್ತು. ಅಮಾನತು ಮಾಡುವರೇ?: ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂತ್ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆದಂಡ ಆಗುವುದೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬ್ಲೂಟೂತ್ ಡಿವೈಸ್ ಮೊಬೈಲ್ ಜಪ್ತಿ:
ಪರೀಕ್ಷೆ ಕೇಂದ್ರದಲ್ಲಿ ನಡೆದ ಅಕ್ರಮ ಪ್ರಕರಣ ಕುರಿತು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಸುದ್ದಿಗಾರರೊಂದಿಗೆ ಮಾತನಾಡಿ ಅ.28 ಮತ್ತು 29ರಂದು ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡುವ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರಿಗೆ ಬಂದಿದೆ. ಈ ಹಿನ್ನಲೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್ ಮೊಬೈಲ್ ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ ಮೂವರನ್ನು ವಿಚಾರಣೆ ಮಾಡಲಾಗುತ್ತಿದೆ.. ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.